More

    ಎಂಟು ಕೋಟಿ ರೂ. ವೆಚ್ಚದಲ್ಲಿ ಹೆಣ್ಮಕ್ಕಳ ಹಾಸ್ಟೆಲ್

    ಹರೀಶ್ ಮೋಟುಕಾನ ಮಂಗಳೂರು

    ನಗರದ ಕೊಡಿಯಾಲ್‌ಬೈಲ್‌ನ ಪಿವಿಎಸ್ ವೃತ್ತದ ಬಳಿ ಇದ್ದ ಕುದ್ಮುಲ್ ರಂಗರಾವ್ ಹೆಣ್ಮಕ್ಕಳ ವಸತಿ ನಿಲಯದ ಹಳೇ ಕಟ್ಟಡ ಶಿಥಿಲಾವಸ್ಥೆ ಕಾರಣದಿಂದ ತೆರವು ಮಾಡಲಾಗಿದ್ದು, ಅದೇ ಸ್ಥಳದಲ್ಲಿ ಎಂಟು ಕೋಟಿ ರೂ. ವೆಚ್ಚದಲ್ಲಿ ನೂತನ ನಾಲ್ಕು ಅಂತಸ್ತುಗಳ ಕಟ್ಟಡ ನಿರ್ಮಾಣವಾಗಲಿದೆ.

    ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ದೂರದ ಊರಿನ ವಿದ್ಯಾರ್ಥಿನಿಯರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಉಚಿತವಾಗಿ ಕಲ್ಪಿಸುವ ನಿಟ್ಟಿನಲ್ಲಿ 30 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದ ವಸತಿ ನಿಲಯ ಶಿಥಿಲಾವಸ್ಥೆಯಲ್ಲಿತ್ತು. ಇದಕ್ಕಾಗಿ ಮೂರು ವರ್ಷಗಳಿಂದ ವಿದ್ಯಾರ್ಥಿನಿಯರನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಮೂರು ವರ್ಷದ ಹಿಂದೆ ಸಿಮೆಂಟ್ ತುಂಡುಗಳು ಉದುರಲಾರಂಭಿಸಿದ್ದು, ಈ ಕಟ್ಟಡ ವಾಸ ಯೋಗ್ಯವಲ್ಲ ಎಂದು ತಜ್ಞರು ವರದಿ ನೀಡಿದ್ದರು.

    ಅರ್ಜಿಗಳ ಸಂಖ್ಯೆ ಹೆಚ್ಚಳ
    ಜಿಲ್ಲೆಯಲ್ಲಿ 29 ವಸತಿ ನಿಲಯಗಳಿದ್ದು, ಇದರಲ್ಲಿ 10 ಮೆಟ್ರಿಕ್ ಅನಂತರದ ವಿದ್ಯಾರ್ಥಿ ನಿಲಯ, 19 ಮೆಟ್ರಿಕ್ ಪೂರ್ವ ವಸತಿ ನಿಲಯಗಳಿವೆ. ಇದರಲ್ಲಿ ಸುಮಾರು 800ರಷ್ಟು ವಿದ್ಯಾರ್ಥಿಗಳಿಗೆ ವಾಸ್ತವ್ಯ ಹೂಡಲು ಅವಕಾಶವಿದೆ. ಆದರೆ ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತವೆ. ಬಳಿಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನಗರ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ವಸತಿ ನಿಲಯಗಳಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೊಡಿಯಾಲ್‌ಬೈಲ್‌ನಲ್ಲಿ ಸುಮಾರು 30 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಕುದ್ಮುಲ್ ರಂಗರಾವ್ ಸ್ಮಾರಕ ವಿದ್ಯಾರ್ಥಿನಿ ನಿಲಯ ಕಟ್ಟಡ ತೆರವುಗೊಳಿಸಲಾಗಿದ್ದು, ಅಲ್ಲಿ ನಾಲ್ಕು ಅಂತಸ್ತಿನ ನೂತನ ಕಟ್ಟಡ ನಿರ್ಮಾಣವಾಗಲಿದೆ. ಒಂದೂವರೆ ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಸುಮಾರು 300 ವಿದ್ಯಾರ್ಥಿನಿಯರಿಗೆ ತಂಗಲು ಅವಕಾಶ ಸಿಗಲಿದೆ.
    ಪಾಪ ಭೋವಿ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts