More

    ಪಿಲಿಕುಳ ಜೈವಿಕ ಉದ್ಯಾನಕ್ಕೆ ವೀಕ್ಷಕರೇ ಇಲ್ಲ

    ಹರೀಶ್ ಮೋಟುಕಾನ ಮಂಗಳೂರು

    ಪಿಲಿಕುಳ ಡಾ.ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಸುಸಜ್ಜಿತ ಸಸ್ಯ ಸಂಗ್ರಹಾಲಯವಿದ್ದು, ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಬೆರಳೆಣಿಕೆ. ಅದು ಕೂಡ ಸಸ್ಯಶಾಸ್ತ್ರ ಅಧ್ಯಯನಕಾರರು.

    ರಾಜ್ಯ ಜೈವಿಕ ವೈವಿಧ್ಯ ಮಂಡಳಿ ಪ್ರಾಯೋಜಕತ್ವದಲ್ಲಿ ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ ಸ್ಥಾಪಿಸಲಾಗಿದೆ. ಪಶ್ಚಿಮ ಘಟ್ಟದ ಅನೇಕ ಸಸ್ಯಗಳ ಬೀಜ, ಔಷಧೀಯ ಸಸ್ಯಗಳ ಅಂಗಗಳನ್ನು ಜಾಡಿಗಳಲ್ಲಿ ತುಂಬಿಸಿ ಪ್ರದರ್ಶನಕ್ಕೆ ಇಡಲಾಗಿದೆ.

    ಮ್ಯೂಸಿಯಂ ವಿಭಾಗದಲ್ಲಿ ಪಶ್ಚಿಮಘಟ್ಟದ ವಿವಿಧ ಜಾತಿಯ ಸಸ್ಯಗಳನ್ನು, ಸ್ಥಳೀಯ ಪ್ರಭೇದಗಳು, ವಿನಾಶದ ಅಂಚಿನಲ್ಲಿರುವ ಸಸ್ಯಗಳು, ಮರು ಸಂಶೋಧಿಸಿದ ಸಸ್ಯಗಳ ದೊಡ್ಡದಾದ ಛಾಯಾಚಿತ್ರ ಪ್ರದರ್ಶನ, ಮರ ಪ್ರಭೇದ ಸಸ್ಯಗಳು ಇಲ್ಲಿವೆ. ಹರ್ಬೇರಿಯಂನಲ್ಲಿ 2 ಸಾವಿರ ಜಾತಿಯ ಸಸ್ಯ ಮಾದರಿಗಳನ್ನು ಸಂಗ್ರಹಿಸಿ ಇಡಲಾಗಿದೆ. ಪ್ರವಾಸಿಗರು ಹಾಗೂ ಅಧ್ಯಯನಕ್ಕೆ ಬರುವ ವಿದ್ಯಾರ್ಥಿಗಳಿಗೆ ಇಲ್ಲಿನ ವೈಜ್ಞಾನಿಕ ಅಧಿಕಾರಿ ರಾಮಕೃಷ್ಣ ಮರಾಠಿ ಮಾಹಿತಿ ಒದಗಿಸುತ್ತಾರೆ.

    ಸೂಕ್ತ ಗೈಡ್‌ಗಳಿಲ್ಲ: ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ ಬಗ್ಗೆ ಪ್ರವಾಸಿಗರಲ್ಲಿ ಮಾಹಿತಿ ಕೊರತೆ ಇದೆ. ಪ್ರವೇಶ ದ್ವಾರದಲ್ಲಿ ಈ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ತಾರಾಲಯ, ಮೃಗಾಲಯ, ಉದ್ಯಾನವನ ವೀಕ್ಷಿಸಿ ಹಿಂತಿರುಗುವವರೇ ಹೆಚ್ಚು. ಸಸ್ಯಸಾಸ್ತ್ರ ಅಧ್ಯಯನಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಇಲ್ಲಿನ ಸಸ್ಯಕಾಶಿ ಇದೆ. ಪಶ್ಚಿಮ ಘಟ್ಟಗಳ ಅಪರೂಪದ ವಿನಾಶದ ಅಂಚಿನಲ್ಲಿರುವ ಸಸ್ಯಗಳ ಸಂರಕ್ಷಣೆಗೆ 80 ಎಕರೆ ಪ್ರದೇಶದಲ್ಲಿ ಸಸ್ಯಕಾಶಿ ವ್ಯಾಪಿಸಿದೆ. ವಿನಾಶದಂಚಿನಲ್ಲಿರುವ ಮತ್ತು ಔಷಧೀಯ ಸಸ್ಯಗಳ ಸಂರಕ್ಷಣೆಗಾಗಿ 85 ಎಕರೆ ಪ್ರದೇಶದಲ್ಲಿ 250 ವಿವಿಧ ಜಾತಿಯ 60 ಸಾವಿರಕ್ಕೂ ಅಧಿಕ ಸಸ್ಯಗಳನ್ನು ಇಂಡೋ ನಾರ್ವೇಜಿಯನ್ ಪರಿಸರ ಕಾರ್ಯಕ್ರಮದ ಅನುದಾನದಿಂದ ಬೆಳೆಸಲಾಗಿದೆ. ಪಶ್ಚಿಮ ಘಟ್ಟಗಳ ಪ್ರಾಕೃತಿಕ ಸೌಂದರ್ಯವನ್ನು ಇಲ್ಲಿ ಸವಿಯಬಹುದು. ಆದರೆ ಅದರ ಉಪಯೋಗ ಆಗುತ್ತಿಲ್ಲ ಎನ್ನುವುದು ಖೇದಕರ.

    27 ಜಾತಿಯ ಬಿದಿರು ತಳಿ: ಇಲ್ಲಿ 27 ವಿವಿಧ ಜಾತಿಯ ಬಿದಿರು/ಬೆತ್ತ ಬೆಳೆಸಲಾಗಿದೆ. ಹಸಿರು ಮನೆಯಲ್ಲಿ ಔಷಧೀಯ ಮತ್ತು ಅಪೂರ್ವ ಹಾಗೂ ವಿನಾಶದ ಅಂಚಿನಲ್ಲಿರುವ ಸಸ್ಯಗಳನ್ನು ಸಂರಕ್ಷಿಸಿಡಲಾಗಿದೆ. ಆರ್ಕಿಡೇರಿಯಂನಲ್ಲಿ ವಿವಿಧ ಜಾತಿಯ ಆರ್ಕಿಡ್‌ಗಳನ್ನು ಸಂರಕ್ಷಿಸಲಾಗಿದೆ. ಅಶೋಕ ಮರಗಳ ಪ್ರತ್ಯೇಕ ಅಶೋಕವನ ನಿರ್ಮಿಸಲಾಗಿದೆ.

    ಪಿಲಿಕುಳದಲ್ಲಿರುವ ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ ಸದ್ಭಳಕೆ ಆಗಬೇಕಾಗಿದೆ. ಸಸ್ಯಶಾಸ್ತ್ರ ಅಧ್ಯಯನ ಮಾಡುವವರಿಗೆ ಪೂರಕ ಮಾಹಿತಿಗಳು ಇಲ್ಲಿ ಲಭ್ಯವಿದೆ. ಆಸಕ್ತ ಪ್ರವಾಸಿಗರು ಮ್ಯೂಸಿಯಂ ವೀಕ್ಷಣೆಗೆ ಬರುತ್ತಾರೆ. ಈ ಬಗ್ಗೆ ಪ್ರಚಾರ ಮಾಡುವ ಕೆಲಸ ಮಾಡುತ್ತೇವೆ.

    ಗೋಕುಲ್‌ದಾಸ್ ನಾಯಕ್
    ಕಾರ್ಯನಿರ್ವಾಹಕ ನಿರ್ದೇಶಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts