More

    ಶತಮಾನದ ಶಾಲೆಗೆ ಮಕ್ಕಳ ಕೊರತೆ, ಸರ್ವ ಸೌಲಭ್ಯಗಳಿರುವ ಬೊಳ್ಳಾಯರು ಶಾಲೆಯಲ್ಲಿರುವುದು 22 ವಿದ್ಯಾರ್ಥಿಗಳು

    ಲೋಕೇಶ್ ಸುರತ್ಕಲ್

    ಸೂರಿಂಜೆ ಬೊಳ್ಳಾಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಂದು ಕಾಲದಲ್ಲಿ ಈ ಪರಿಸರದ ಪ್ರಮುಖ ಶಾಲೆಯಾಗಿತ್ತು. ಶಾಲೆಗೆ 80 ವರ್ಷಗಳ ಲಿಖಿತ ದಾಖಲೆಯಿದ್ದು, ಒಟ್ಟಾಗಿ ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಅಪಾರ ಸಂಖ್ಯೆಯ ಗ್ರಾಮೀಣ ಮಕ್ಕಳ ಬದುಕಿಗೆ ಬೆಳಕು ನೀಡಿರುವ ಹೆಗ್ಗಳಿಕೆ ಈ ಶಾಲೆಗಿದ್ದರೂ, ಪ್ರಸ್ತುತ ಇಲ್ಲಿ ಒಂದರಿಂದ ಏಳನೇ ತರಗತಿವರೆಗೆ ಕಲಿಯುತ್ತಿರುವ ಮಕ್ಕಳ ಸಂಖ್ಯೆ ಕೇವಲ 22 ಮಾತ್ರ.

    ಶಾಲೆಗೆ ರಸ್ತೆ ಸಂಪರ್ಕ, ಬೇಕಾದಷ್ಟು ಕೊಠಡಿಗಳು, ಆಟದ ಮೈದಾನ, ಬಿಸಿಯೂಟ, ಕಂಪ್ಯೂಟರ್ ಸೌಲಭ್ಯವಿದೆ. ಸಮವಸ್ತ್ರ ಎಲ್ಲವನ್ನೂ ನೀಡಲಾಗುತ್ತಿದೆ. ಶಾಲೆಗೆ ಮಕ್ಕಳನ್ನು ಕಳಿಸುವಂತೆ ಸುತ್ತಲಿನ ಪ್ರದೇಶದಲ್ಲಿ ಸುತ್ತಾಡಿ ಹೆತ್ತವರ ಮನವೊಲಿಸುವ ಕಾರ್ಯ ನಡೆಸಿದ್ದೇವೆ. ಮುಂದಿನ ಸಾಲಿನಿಂದ ಮಕ್ಕಳ ಸಂಖ್ಯೆ ಸ್ವಲ್ಪ ಹೆಚ್ಚಾಗುವ ನಿರೀಕ್ಷೆಯಿದೆ ಎನ್ನುತ್ತಾರೆ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ.

    ಶಾಲೆಯಲ್ಲಿ ಓರ್ವರು ಪ್ರಭಾರ ಮುಖ್ಯಶಿಕ್ಷಕಿ, ಓರ್ವ ದೈಹಿಕ ಶಿಕ್ಷಣ ಶಿಕ್ಷಕರು, ಓರ್ವ ಶಿಕ್ಷಕಿ ಇದ್ದಾರೆ. ಒಂದರಿಂದ ಐದರವರೆಗೆ 17 ಮಂದಿ ಮನೆಯಲ್ಲಿಯೇ ಆನ್‌ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ. ಆರನೇ ತರಗತಿಗೆ 3, ಏಳನೇ ತರಗತಿಗೆ ಬರೇ ಇಬ್ಬರು ಮಕ್ಕಳು ತರಗತಿಗೆ ಹಾಜರಾಗುತ್ತಿದ್ದಾರೆ. ಕಳೆದ ಸಾಲಿನಲ್ಲಿ 24 ಮಕ್ಕಳಿದ್ದು, ಏಳನೇ ತರಗತಿಯಿಂದ 11 ವಿದ್ಯಾರ್ಥಿಗಳು 8ನೇ ತರಗತಿಗೆ ಉತ್ತೀರ್ಣರಾಗಿದ್ದರು.
    ಒಂದು ಕಾಲದಲ್ಲಿ ಈ ಶಾಲೆಗೆ ಕೋಟೆ, ಸೂರಿಂಜೆ, ಮಧ್ಯ, ದೇಲಂತಬೆಟ್ಟು ಪರಿಸರದಿಂದಲೂ ಮಕ್ಕಳು ಬರುತಿದ್ದರು. ಇಂದು ಗ್ರಾಮಾಂತರದಲ್ಲಿಯೂ ಎಲ್‌ಕೆಜಿ, ಇಂಗ್ಲಿಷ್ ಮಾಧ್ಯಮ ಶಿಕ್ಷಣದ ವ್ಯಾಮೋಹ, ಸಮೀಪದ ಶಾಲೆಗಳಿಗೆ ಮಕ್ಕಳನ್ನು ಬಸ್ ಮೂಲಕ ಕರೆದೊಯ್ಯಲಾಗುತ್ತಿರುವುದು ಕೂಡಾ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣ ಎನ್ನುತ್ತಾರೆ ಸ್ಥಳೀಯರು.

    ನಾನು ಈ ಶಾಲೆಯ ಹಳೇ ವಿದ್ಯಾರ್ಥಿ. ಆ ಕಾಲದಲ್ಲಿ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 650-700 ಮಕ್ಕಳಿದ್ದರು. ಆಂಗ್ಲ ಮಾಧ್ಯಮ ವ್ಯಾಮೋಹ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕುಸಿಯಲು ಕಾರಣ. ಸರ್ಕಾರಿ ನೌಕರಿ ಪಡೆಯಲು 1ರಿಂದ 10ರವರೆಗೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುವುದನ್ನು ಸರ್ಕಾರ ಕಡ್ಡಾಯಗೊಳಿಸಬೇಕು. ಈ ಶಾಲೆಯನ್ನು ಸುಮಾರು 3 ಕಿ.ಮೀ ದೂರದ ದೇಲಂತಬೆಟ್ಟು ಸರ್ಕಾರಿ ಶಾಲೆಯೊಂದಿಗೆ ವಿಲೀನಗೊಳಿಸಬಹುದು.

    ಎಸ್.ಅಬ್ದುಲ್ ರಝಾಕ್, ಸೂರಿಂಜೆ ಪಂಚಾಯಿತಿ ಸದಸ್ಯ

    ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕರೊನಾ ಹಾವಳಿ ಕೂಡಾ ಕಾರಣ. ಶಾಲೆ ಬಗ್ಗೆ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

    ಜಿತೇಂದ್ರ ಶೆಟ್ಟಿ, ಸೂರಿಂಜೆ ಪಂಚಾಯಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts