More

    ಸುಸಜ್ಜಿತ ಆಸ್ಪತ್ರೆಗಿಲ್ಲ ಸಿಬ್ಬಂದಿ

    ಗಣೇಶ್ ಮಾವಂಜಿ ಸುಳ್ಯ

    ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿದ್ದರೂ ವ್ಯವಸ್ಥೆಯ ಸದುಪಯೋಗಕ್ಕೆ ಸಿಬ್ಬಂದಿಯೇ ಇಲ್ಲ. ಪರಿಣಾಮ ರೋಗಿಗಳು ತಪಾಸಣೆಗೆ ದುಬಾರಿ ಹಣ ತೆತ್ತು ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಅನಿವಾರ್ಯತೆಗೆ ಸಿಲುಕಿದ್ದಾರೆ.

    ಅತ್ಯುತ್ತಮ ಲ್ಯಾಬ್, ಎಕ್ಸ್‌ರೇ ಮಷಿನ್‌ಗಳಿದ್ದರೂ ಆಪರೇಟರ್‌ಗಳ ಕೊರತೆಯಿಂದ ಸಣ್ಣಪುಟ್ಟ ಪರೀಕ್ಷೆಗಳಿಗೂ ವೈದ್ಯರು ಹೊರಗೆ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಸೂಚಿಸುತ್ತಾರೆ.
    ಆಸ್ಪತ್ರೆಯಲ್ಲಿ ಎರಡು ಹಿರಿಯ ಹಾಗೂ ಎರಡು ಕಿರಿಯ ಲ್ಯಾಬ್ ಟೆಕ್ನೀಶಿಯನ್‌ಗಳ ಹುದ್ದೆಗಳು ಖಾಲಿಯಾಗಿವೆ. ನಾಲ್ಕು ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ. ಆದರೆ ಮಷಿನ್‌ನಲ್ಲಿ ಪರೀಕ್ಷೆ ನಡೆಸಲು ತಜ್ಞರು ಇಲ್ಲದ ಕಾರಣ ಖಾಸಗಿಯಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಅನಿವಾರ್ಯ.

    ರೂ. 20 ಲಕ್ಷದ ಸ್ಕ್ಯಾನಿಂಗ್ ಯಂತ್ರ ಸೇವೆಗೆ ಸಿದ್ಧವಿದ್ದರೂ ಅನುಭವಿ ರೇಡಿಯಾಲಜಿ ತಜ್ಞರ ನೇಮಕವಾಗಿಲ್ಲ. ಹೀಗಾಗಿ ಯಂತ್ರ ಪ್ರಯೋಜನಕ್ಕೆ ಬರುತ್ತಿಲ್ಲ. ಅಂತಾರಾಜ್ಯ ಗಡಿಯಲ್ಲಿ ಕೋವಿಡ್ ತಪಾಸಣೆಗಾಗಿ ಲ್ಯಾಬ್ ಟೆಕ್ನೀಶಿಯನ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿರುವುದರಿಂದ ಆಸ್ಪತ್ರೆಯಲ್ಲಿ ಅವರು ಸೇವೆಗೆ ಸಿಗುತ್ತಿಲ್ಲ.

    ಇಬ್ಬರು ಎಕ್ಸ್‌ರೇ ತಂತ್ರಜ್ಞ ಹುದ್ದೆಗಳ ಪೈಕಿ ಒಂದು ಖಾಲಿಯಾಗಿದ್ದು, ಇನ್ನೊಂದು ಹುದ್ದೆಗೆ ಪುತ್ತೂರು ತಾಲೂಕು ಆಸ್ಪತ್ರೆಯಿಂದ ಓರ್ವರನ್ನು ಕರೆಸಿಕೊಳ್ಳಲಾಗುತ್ತದೆ. ವಾರದ ರಜಾ ದಿನದಲ್ಲಿ ಅಥವಾ ಅವರು ಅನಿವಾರ್ಯವಾಗಿ ರಜೆ ಹಾಕಿದರೆ ರೋಗಿಗಳು ತಪಾಸಣೆಗೆ ಹೊರಹೋಗಬೇಕಾಗುತ್ತದೆ. ಸರ್ಕಾರದ ಸೌಲಭ್ಯಗಳು ಇದ್ದೂ ಪ್ರಯೋಜನಕ್ಕೆ ಬಾರದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಫಾರ್ಮಾಸಿಸ್ಟ್ ಹುದ್ದೆ ಖಾಲಿ: ಫಾರ್ಮಸಿಯಲ್ಲಿ ಓರ್ವ ಹಿರಿಯ ಹಾಗೂ ಇಬ್ಬರು ಕಿರಿಯ ಫಾರ್ಮಾಸಿಸ್ಟ್ ಹುದ್ದೆಗಳು ಖಾಲಿಯಾಗಿವೆ. ಸಮಸ್ಯೆ ಬಗೆಹರಿಸಲು ಅರಂತೋಡು ಆರೋಗ್ಯ ಕೇಂದ್ರದಿಂದ ಓರ್ವರನ್ನು ಆಸ್ಪತ್ರೆಗೆ ನಿಯೋಜಿಸಲಾಗಿದ್ದು ಅವರು ವಾರಕ್ಕೆರಡು ಬಾರಿ ಮಾತ್ರ ಲಭ್ಯರಿರುತ್ತಾರೆ. ಉಳಿದಂತೆ ಫಾರ್ಮಸಿಯಲ್ಲಿ ಸ್ಟಾಫ್‌ನರ್ಸ್ ಸೇವೆಯನ್ನೇ ಬಳಸಲಾಗುತ್ತಿದೆ. ಅನುಭವಿ ಫಾರ್ಮಾಸಿಸ್ಟ್ ಇಲ್ಲದಿರುವ ಪರಿಣಾಮ ಔಷಧ ವಿತರಣೆಯಲ್ಲೂ ತೊಂದರೆಯಾಗುತ್ತಿದೆ.

    ಕಾಯಂ ಪ್ರಸೂತಿ ತಜ್ಞರೇ ಇಲ್ಲ: ತಾಲೂಕು ಆಸ್ಪತ್ರೆಯಲ್ಲಿ ಕಾಯಂ ಪ್ರಸೂತಿ ತಜ್ಞರಿಲ್ಲದಿರುವುದು ದೊಡ್ಡ ಹಿನ್ನ್ನಡೆ. ಹೊರಗಿನಿಂದ ಪ್ರಸೂತಿ ತಜ್ಞರನ್ನು ಕರೆಸಿ ರೋಗಿಗಳಿಗೆ ಅನುಕೂಲ ಒದಗಿಸಿಕೊಡುವ ವ್ಯವಸ್ಥೆ ಇದ್ದರೂ ತಾಲೂಕು ಆಸ್ಪತ್ರೆಯಲ್ಲೇ ಕಾಯಂ ವೈದ್ಯರು ಇದ್ದರೆ ಹೆಚ್ಚು ಅನುಕೂಲ ಎಂಬುದು ಜನರ ಅಭಿಪ್ರಾಯ.

    ಡೆಂೆ ಜ್ವರದ ಕಾರಣ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದೆ. ಆದರೆ ಪರೀಕ್ಷೆ ನಡೆಸಿ ವರದಿ ಪಡೆದುಕೊಂಡದ್ದು ಮಾತ್ರ ಖಾಸಗಿ ಪ್ರಯೋಗಾಲಯದಿಂದ. ಸಣ್ಣಪುಟ್ಟ ಪರೀಕ್ಷೆಗೂ ಹೊರಗೆ ಹೋಗಬೇಕೆಂದರೆ ಬಡವರಿಗೆ ತಾಲೂಕು ಸರ್ಕಾರಿ ಆಸ್ಪತ್ರೆ ಇದ್ದು ಏನು ಪ್ರಯೋಜನ?
    -ಪುರುಷೋತ್ತಮ ಮೇಲಡ್ತಲೆ

    ಔಷಧಕ್ಕಾಗಿ ವೈದ್ಯರು ಫಾರ್ಮಸಿಗೆ ಚೀಟಿ ಕೊಟ್ಟಿದ್ದರು. ಆದರೆ, ಎಷ್ಟು ಹೊತ್ತು ಕಾದರೂ ಫಾರ್ಮಸಿಯಲ್ಲಿ ಯಾರೂ ಸಿಬ್ಬಂದಿ ಇರಲಿಲ್ಲ. ಬಹಳ ಹೊತ್ತಿನ ಬಳಿಕ ಬಂದ ಸಿಬ್ಬಂದಿಯಲ್ಲಿ ಚೀಟಿ ತೋರಿಸಿದರೆ ಈ ಔಷಧ ಇಲ್ಲಿಲ್ಲ ಎಂದು ಕೈ ಚೆಲ್ಲಿದರು.
    -ಕವಿತಾ ಅಶೋಕ್, ಬೇರ್ಯ

    ಸಿಬ್ಬಂದಿ ಕೊರತೆ ಬಗ್ಗೆ ಮೇಲಧಿಕಾರಿ ಗಮನಕ್ಕೆ ತಂದಿದ್ದೇನೆ. ರೇಡಿಯಾಲಜಿಸ್ಟ್, ಅನುಭವಿ ಲ್ಯಾಬ್ ಟೆಕ್ನಿಶಿಯನ್ಸ್, ಎಕ್ಸ್‌ರೇ ಆಪರೇಟರ್ಸ್, ಫಾರ್ಮಾಸಿಸ್ಟ್‌ಗಳ ಕೊರತೆಯಿಂದ ಜನರಿಗೆ ಸಮರ್ಪಕ ಆರೋಗ್ಯ ಸೇವೆ ನೀಡುವಲ್ಲಿ ತೊಂದರೆಯಾಗುತ್ತಿರುವುದು ನಿಜ.
    -ಡಾ.ಕರುಣಾಕರ ಕೆ.ವಿ. ಆಡಳಿತಾಧಿಕಾರಿ, ಸುಳ್ಯ ತಾಲೂಕು ಆಸ್ಪತ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts