More

    ಕಾರ್ಯ ಭಾರ ಕಡಿಮೆ ಮಾಡಿ

    ಚಿಕ್ಕಮಗಳೂರು: ಖಾಲಿ ಹುದ್ದೆ ನೇಮಕಾತಿ, ಕಾರ್ಯಭಾರ ಹೊರಕಡಿತ ಮಾಡುವಂತೆ ಆಗ್ರಹಿಸಿ ಕೃಷಿ ಇಲಾಖೆ ಅಧಿಕಾರಿಗಳು, ನೌಕರರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.

    ರಾಜ್ಯ ಸಹಾಯಕ ಕೃಷಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಎನ್.ಕೆ.ಬೀರಪ್ಪ ಮಾತನಾಡಿ, ಕೃಷಿ ಇಲಾಖೆಯಲ್ಲಿ ಅಗತ್ಯ ಸಿಬ್ಬಂದಿ ನೇಮಕ ಮಾಡದಿದ್ದರಿಂದ ಅಧಿಕಾರಿಗಳು, ನೌಕರರು ಕಾರ್ಯ ಒತ್ತಡದಿಂದ ಬಳಲುತ್ತಿದ್ದಾರೆ. ಇದರಿಂದ ಗುಣಮಟ್ಟದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹಲವರು ಕೆಲಸವನ್ನೇ ಬಿಟ್ಟು ಹೋಗುವ ಮನಸ್ಥಿತಿಗೆ ಬಂದಿದ್ದಾರೆ ಎಂದು ಗಮನಕ್ಕೆ ತಂದರು.

    1987ರಿಂದ ಕೃಷಿ ಸಹಾಯಕರ ನೇಮಕಾತಿ ಮಾಡಿಲ್ಲ. 2014-15ರಲ್ಲಿ ಜಲಾನಯನ ಇಲಾಖೆಯನ್ನು ವೆಚ್ಚ ಕಡಿತ ಉದ್ದೇಶಕ್ಕಾಗಿ ಕೃಷಿ ಇಲಾಖೆಯಲ್ಲಿ ವಿಲೀನಗೊಳಿಸಲಾಗಿದೆ. ಎರಡೂ ಇಲಾಖೆ ಕಾರ್ಯ ಮಾಡುವಷ್ಟು ಸಿಬ್ಬಂದಿ ಇಲ್ಲವಾಗಿದೆ. ಮೂರ್ನಾಲ್ಕು ನೌಕರರು ಮಾಡುವ ಕೆಲಸವನ್ನು ಒಬ್ಬರೇ ಮಾಡಬೇಕಿದೆ. ಇದರಿಂದ ಹಲವು ನೌಕರರು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ ಎಂದರು.

    ಕಂದಾಯ ಇಲಾಖೆ ನಿರ್ವಹಿಸುತ್ತಿದ್ದ ಬೆಳೆ ಸಮೀಕ್ಷೆಯನ್ನು ಸಹ ಕೃಷಿ ಇಲಾಖೆಗೆ ಹೆಗಲಿಗೆ ಹಾಕಲಾಗಿದೆ. ಅಧಿಕಾರಿಗಳು, ಕ್ಷೇತ್ರ ಮಟ್ಟದ ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿರುವುದರಿಂದ ಇತರೆ ಕೆಲಸಗಳಿಗೆ ತೀವ್ರ ತೊಂದರೆಯಾಗಿದೆ. ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯನ್ನು ಕೃಷಿ, ಕಂದಾಯ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಇಲಾಖೆ ನೌಕರರು ಮಾಡುತ್ತಾರೆ. ಆದರೆ ಅಲ್ಲಿ ಯಾವುದೆ ನ್ಯೂನತೆ ಆದರೂ ಕೃಷಿ ಇಲಾಖೆ ಅಧಿಕಾರಿ, ನೌಕರರನ್ನು ಹೊಣೆ ಮಾಡಲಾಗುತ್ತಿದೆ ಎಂದು ದೂರಿದರು.

    ಕೃಷಿ ಪದವೀಧರರ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಕೆ.ಆರ್.ಲೋಕೇಶ್ ಮಾತನಾಡಿ, ಕನಿಷ್ಠ ಬೆಂಬಲ ಬೆಲೆ ಯೋಜನೆಯನ್ನೂ ಕೃಷಿ ಮಾರುಕಟ್ಟೆ, ಆಹಾರ ಇಲಾಖೆಯಿಂದ ಕೃಷಿ ಇಲಾಖೆಗೆ ವರ್ಗಾಯಿಸಲಾಗಿದೆ. ಇಲಾಖೆ ಅಧಿಕಾರಿಗಳನ್ನು ಖರೀದಿ ಕೇಂದ್ರದಲ್ಲಿ ಗ್ರೇಡರ್​ಗಳನ್ನಾಗಿ ನೇಮಕ ಮಾಡುತ್ತಿರುವುದು ಸರಿಯಲ್ಲ. ಇದನ್ನು ಪುನಃ ಕೃಷಿ ಮಾರುಕಟ್ಟೆಗೆ ವಹಿಸಬೇಕೆಂದು ಒತ್ತಾಯಿಸಿದರು.

    ಬೆಳೆ ಕಟಾವು ಪ್ರಯೋಗಕ್ಕೆ ಸಿಬ್ಬಂದಿ ಕೊರತೆಯಿಂದ ತೊಂದರೆ ಆಗಿದೆ. ಒಬ್ಬರಿಗೆ 20-30 ಪ್ರಯೋಗ ನೀಡಲಾಗುತ್ತಿದೆ. ಒಂದೊಂದಕ್ಕೆ 30-40 ಕಿ.ಮೀ. ಪ್ರಯಾಣ ಮಾಡಬೇಕು. ಪ್ರಾಯೋಗಿಕವಾಗಿ ಇದು ಕಷ್ಟವಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆ ಸಹ ಹೆಚ್ಚುವರಿಯಾಗಿ ವಹಿಸಲಾಗಿದೆ. ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲೂ ನೌಕರರು ಸಮರ್ಥವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

    ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ್ ನಾಯ್್ಕ ಮೇನಕಾ, ವೆಂಕಟೇಶ್ ಚವ್ಹಾಣ್, ವಿಜಯಲಕ್ಷ್ಮೀ, ಚಂದ್ರು, ವಿಶ್ವಾಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts