More

    ಹಾವಣಗಿ ಪಿಡಿಒಗೆ ಕಾರ್ವಿುಕ ಇಲಾಖೆಯಿಂದ ನೋಟಿಸ್

    ಅಕ್ಕಿಆಲೂರ: ಸಮೀಪದ ಹಾವಣಗಿ ಗ್ರಾಮದ ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕರ ವೇತನ, ದಿನಪತ್ರಿಕೆ ಹಾಗೂ ಇತರ ವೆಚ್ಚಕ್ಕೆ ಹಣ ನೀಡದ ಹಾವಣಗಿ ಗ್ರಾಪಂ ಪಿಡಿಒಗೆ ಕಾರ್ವಿುಕ ಇಲಾಖೆಯಿಂದ ನೋಟಿಸ್ ಜಾರಿಯಾಗಿದೆ.

    ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿರುವ ಗ್ರಂಥಾಲಯದ ಗ್ರಂಥಪಾಲಕರಾಗಿ ಅರವಿಂದ ಹವಳಣ್ಣನವರ ಕಾಯನಿರ್ವಹಿಸುತ್ತಿದ್ದು, ಇವರೆಗೆ ಗ್ರಾಮ ಪಂಚಾಯಿತಿಯಿಂದ ವೇತನ ನೀಡಬೇಕು. ಅಲ್ಲದೆ, ಗ್ರಂಥಾಲಯಕ್ಕೆ ತರಿಸುವ ದಿನಪತ್ರಿಕೆ, ಇತರ ಪುಸ್ತಕಗಳ ವೆಚ್ಚವನ್ನು ಗ್ರಾಪಂ ಭರಿಸಬೇಕು. 2020ರ ಮಾರ್ಚ್​ನಿಂದ 2021ರ ಮೇವರೆಗೆ 15 ತಿಂಗಳ ಕಾಲ ಸರಬರಾಜು ಆಗಿರುವ ದಿನಪತ್ರಿಕೆಗಳ ಬಿಲ್, ಇತರ ವೆಚ್ಚ ಹಾಗೂ ಗ್ರಂಥಪಾಲಕನ ವೇತನ ಸೇರಿ ಸುಮಾರು 1.20 ಲಕ್ಷ ರೂಪಾಯಿ ಸಂದಾಯವಾಗಬೇಕು.

    ತನಗೆ ಬರಬೇಕಾದ ಹಣ ನೀಡಲು ಹಾವಣಗಿ ಗ್ರಾಪಂ ಪಿಡಿಒ ಮಂಜುಳಾ ಸತಾಯಿಸುತ್ತಿದ್ದಾರೆ ಎಂದು ಗ್ರಂಥಪಾಲಕ ಅರವಿಂದ ಹವಳಣ್ಣನವರ ಕಾರ್ವಿುಕ ಇಲಾಖೆ, ಹಾವೇರಿ ಜಿಪಂಗೆ ದೂರು ನೀಡಿದ್ದಾರೆ. ಇದರನ್ವಯ, ಎರಡು ಇಲಾಖೆಯಿಂದ ಕಾರಣ ಕೇಳಿ ಪಿಡಿಒಗೆ ಮೂರು ನೋಟಿಸ್ ಜಾರಿಯಾಗಿವೆ.

    ಈಗಿರುವ ಪಿಡಿಒ ಮಂಜುಳಾ ಗ್ರಾಪಂಗೆ ನೇಮಕವಾಗಿ 8 ತಿಂಗಳಾಯಿತು. ಹಿಂದಿನ ಪಿಡಿಒ ಕಾಶಲಬಾಯ ಅವರು ನಮಗೆ ಬರಬೇಕಿದ್ದ ಹಣ ನೀಡಲು ತಯಾರಿ ಮಾಡಿಕೊಂಡಿದ್ದರು. ಆದರೆ, ಅಂದಿನ ಗ್ರಾಪಂ ಅಧ್ಯಕ್ಷೆ ಶ್ರುತಿ ಜವಳಿ ಚೆಕ್​ಗೆ ಸಹಿ ಮಾಡದೆ ಹಗೆತನ ಸಾಧಿಸಿದ್ದರು. ಕಳೆದ ಮೇ ತಿಂಗಳಲ್ಲಿ ಹಾವಣಗಿ ಗ್ರಾಪಂಗೆ ಚುನಾವಣೆ ನಡೆದು ಹಿಂದಿನ ಗ್ರಾಪಂ ಸಮಿತಿ ವಿಸರ್ಜನೆಯಾಗಿದೆ. ಈಗಲಾದರೂ ನಮಗೆ ಬರಬೇಕಾದ ಹಣ ನೀಡಬೇಕು. ನನ್ನ ವೇತನವೂ ಇಲ್ಲದ್ದರಿಂದ ದಿನಪತ್ರಿಕೆಗಳ ಬಿಲ್ ನೀಡಲು ಸಾಧ್ಯವಾಗುತ್ತಿಲ್ಲ. ಗ್ರಂಥಾಲಯದ ಕಾರ್ಯಕ್ರಮಗಳಿಗೆ ವೈಯಕ್ತಿಕ ಹಣ ಭರಿಸುತ್ತಿದ್ದೇನೆ. ಆದರೂ, ಗ್ರಾಪಂ ಮಾತ್ರ ಹಣ ನೀಡುತ್ತಿಲ್ಲ ಎಂದು ಗ್ರಂಥಪಾಲಕ ಅರವಿಂದ ಹವಳಣ್ಣನವರ ಆರೋಪಿಸಿದ್ದಾರೆ.

    ಈ ಕುರಿತು ಪಿಡಿಒ ಮಂಜುಳಾ ಮಲ್ಲೂರ ಅವರನ್ನು ಪತ್ರಿಕೆ ಸಂರ್ಪಸಿದರೂ ಸಮರ್ಪಕ ಮಾಹಿತಿ ನೀಡಲಿಲ್ಲ.

    ಗ್ರಾಪಂನಿಂದ 1.20 ಲಕ್ಷ ರೂಪಾಯಿ ಬರಬೇಕು. ಹೇಳಿದರೆ ಒಮ್ಮೆ ಚೆಕ್ ಬರೆದಿಟ್ಟಿದ್ದೇನೆ ಎನ್ನುತ್ತಾರೆ. ಇನ್ನೊಮ್ಮೆ ಅಧ್ಯಕ್ಷರು ಸಹಿ ಮಾಡುತ್ತಿಲ್ಲ ಎನ್ನುತ್ತಾರೆ. ಮತ್ತೆ ಕೆಲವೊಮ್ಮೆ ಹಿರಿಯ ಅಧಿಕಾರಿಗಳಿಂದ ಆದೇಶ ಬಂದಿಲ್ಲ ಎನ್ನುತ್ತಿದ್ದಾರೆ. ದಿನಪತ್ರಿಕೆ ಬಿಲ್, ಗ್ರಂಥಾಲಯ ನಿರ್ವಹಣೆ, ಸರ್ಕಾರದ ಕಾರ್ಯಕ್ರಮಗಳನ್ನು ವೈಯಕ್ತಿಕ ಹಣದಲ್ಲಿ ಮಾಡಿದ್ದೇನೆ. ಮೇ ತಿಂಗಳಲ್ಲಿ ಗ್ರಾಪಂ ಚುನಾವಣೆ ನಡೆದಿದ್ದರಿಂದ ಗ್ರಾಪಂ ಸಮಿತಿ ಬದಲಾವಣೆಯಾಗಿದೆ. ಈಗಲೂ ನೀಡುತ್ತಿಲ್ಲ. ಹೀಗಾಗಿ ಕಾರ್ವಿುಕ ಇಲಾಖೆ ಮೊರೆ ಹೋಗಿದ್ದೇನೆ.

    | ಅರವಿಂದ ಹವಳಣ್ಣನವರ, ಹಾವಣಗಿ ಗ್ರಂಥ ಪಾಲಕ

    ಹಾವಣಗಿ ಗ್ರಾಪಂನಿಂದ ಗ್ರಂಥಾಲಯದ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಕೆಲವು ತಾಂತ್ರಿಕ ತೊಂದರೆ ಇದೆ. ಈ ಕುರಿತು ಜಿಪಂಗೆ ವರದಿ ಕಳುಹಿಸಲಾಗಿದೆ. ಅಲ್ಲಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು.

    | ಸುನೀಲಕುಮಾರ, ತಾಪಂ ಇಒ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts