More

    ಅವೈಜ್ಞಾನಿಕ ಕುಡಿಯುವ ನೀರು ಕಾಮಗಾರಿ ವಿರೋಧಿಸಿ ಪ್ರತಿಭಟನೆ

    ಶಿವಮೊಗ್ಗ: ನಗರದಲ್ಲಿ ಜಾರಿಯಾಗುತ್ತಿರುವ ಕುಡಿಯುವ ನೀರು ಸರಬರಾಜು ಯೋಜನೆ ಅವೈಜ್ಞಾನಿಕವಾಗಿದೆ. ಕಾಮಗಾರಿಯನ್ನು ಸಂಪೂರ್ಣವಾಗಿ ಬದಲಾಯಿಸಬೇಕು. ನ್ಯೂನತೆಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಮುಖರು ಸೋಮವಾರ ನೀರು ಸರಬರಾಜು ಮಂಡಳಿ ಎದುರು ಪ್ರತಿಭಟನೆ ನಡೆಸಿದರು.
    ಯೋಜನೆಯ ಆರಂಭದಲ್ಲೇ ನಮ್ಮ ಸಂಘಟನೆಯಿಂದ ಹಲವಾರು ನ್ಯೂನತೆಗಳ ಬಗ್ಗೆ ಅಧಿಕಾರಿಗಳ ಗಮನಸೆಳೆದಿದ್ದರೂ ಯೋಜನೆ ಬದಲಾಯಿಸಿಕೊಳ್ಳದೇ ಅವೈಜ್ಞಾನಿಕವಾಗಿಯೇ ಅದನ್ನು ಅನುಷ್ಠಾನ ಮಾಡಲಾಯಿತು. ಜಿಐ ಪೈಪ್‌ಗಳ ಬದಲಾವಣೆ, ಮೀಟರ್‌ಗಳ ಗುಣಮಟ್ಟದ ತಪಾಸಣೆ ಮಾಡಬೇಕೆಂದು ಆಗ್ರಹಿಸಿದರು.
    ಜಿಐ (ಜಿಂಕ್ ಲೇಪಿತ ಕಬ್ಬಿಣ) ಪೈಪ್‌ಗಳ ಬಳಕೆಯನ್ನು ಎರಡು ದಶಕಗಳ ಹಿಂದಿನಿಂದಲೂ ಮನೆ ನಿರ್ಮಾಣ ಕಾಮಗಾರಿಯಲ್ಲಿ ಬಳಕೆ ಮಾಡುತ್ತಿಲ್ಲ. ನೀರಿನಲ್ಲಿರುವ ಕೆಲವು ಅಂಶಗಳಿಂದ ಈ ಪೈಪ್‌ಗಳು ಬಹುಬೇಗ ತುಕ್ಕು ಹಿಡಿಯುತ್ತವೆ ಎಂಬುದೇ ಇದಕ್ಕೆ ಕಾರಣ. ಆದರೆ  ಕುಡಿಯುವ ನೀರು ಪೂರೈಕೆಗೆ ಈ ಪೈಪ್‌ಗಳನ್ನು ಬಳಸಿರುವುದು ತಪ್ಪು ನಿರ್ಧಾರವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
    ಈ ಪೈಪ್‌ಗೆ ಕ್ರಮೇಣ ತುಕ್ಕು ಹಿಡಿಯುವುದರಿಂದ ನೀರಿನಲ್ಲಿ ತುಕ್ಕಿನ ಅಂಶ ಸೇರಿಕೊಂಡು ಅದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡಲಿದೆ. ಈಗ ಅಳವಡಿಕೆ ಮಾಡಿರುವ ಪೈಪ್‌ಗಳು ಮೂರು ವರ್ಷದೊಳಗೆ ತುಕ್ಕು ಹಿಡಿಯುತ್ತವೆ. ಇದರ ಬಳಕೆಗೆ ನಮ್ಮ ವಿರೋಧವಿದೆ ಎಂದರು.
    ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತ ಕುಮಾರ್, ಸಂಘಟನಾ ಕಾರ್ಯದರ್ಶಿ ಡಾ.ಸತೀಶ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ಜನಾರ್ಧನ ಪೈ, ಇಕ್ಭಾಲ್ ಅಹಮದ್, ಸೀತಾರಾಂ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts