More

    ಅಧಿಕಾರಿಯ ಕರ್ತವ್ಯಲೋಪಕ್ಕೆ ಪದೋನ್ನತಿ ಭಾಗ್ಯ?

    ಕುಷ್ಟಗಿ: ಕರ್ತವ್ಯಕ್ಕೆ ಅನಧಿಕೃತ ಗೈರಾಗಿದ್ದ ಅಧಿಕಾರಿಯೊಬ್ಬರಿಗೆ ಮೇಲಧಿಕಾರಿಗಳು ಪದೋನ್ನತಿ ಭಾಗ್ಯ ಕರುಣಿಸಿದ್ದಾರೆ! ಅಧಿಕಾರಿಯ ಕರ್ತವ್ಯಲೋಪ ಮುಚ್ಚಿ ಹಾಕುವ ಮೂಲಕ ಮೇಲಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಇಲ್ಲಿನ ಪುರಸಭೆಯಲ್ಲಿ ಸಮುದಾಯ ಸಂಘಟನಾಧಿಕಾರಿಯಾಗಿದ್ದ ಧರಣೇಂದ್ರಕುಮಾರ್ 2022 ಜೂ. 6ರಿಂದ ಸತತ 5ತಿಂಗಳಿಗೂ ಹೆಚ್ಚು ದಿನಗಳ ವರೆಗೆ ಅನಧಿಕೃತ ಗೈರಾಗಿದ್ದರು. ಈ ಸಂಬಂಧ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ 2022 ಡಿ.1ರಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿ ಲಿಖಿತ ಸಮಜಾಯಿಷಿ ಸಲ್ಲಿಸುವಂತೆ ತಿಳಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಪುರಸಭೆ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಧರಣೇಂದ್ರಕುಮಾರ್ ಸದ್ಯ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಕರ್ತವ್ಯಲೋಪ ಎಸಗಿದ ಅಧಿಕಾರಿಗೆ ಮೇಲಧಿಕಾರಿಗಳು ಪದೋನ್ನತಿ ಭಾಗ್ಯ ಕರುಣಿಸಿದರೆ ಎಂಬ ಚರ್ಚೆ ಪಟ್ಟಣದಲ್ಲಿ ನಡೆದಿದೆ.

    ಸಮುದಾಯ ಸಂಘಟನಾಧಿಕಾರಿ ಹುದ್ದೆಯಲ್ಲಿದ್ದ ಧರಣೇಂದ್ರಕುಮಾರ್ ಅನಧಿಕೃತ ಗೈರಿದ್ದಾರೆಂದು ಅಂದಿನ ಮುಖ್ಯಾಧಿಕಾರಿ ಬಿ.ಟಿ.ಬಂಡಿವಡ್ಡರ್ 2022 ನ.21ರಂದು ನಗರಾಭಿವೃದ್ಧಿ ಕೋಶಕ್ಕೆ ವರದಿ ಸಲ್ಲಿಸಿದ್ದರು. ಮುಖ್ಯಾಧಿಕಾರಿಗಳಿಂದ ಪೂರ್ವಾನುಮತಿ ಪಡೆದಯದೆ ಕಾರ್ಯಾಲಯದ ಕೆಲಸಕ್ಕೆ ಅನಧಿಕೃತ ಗೈರು ಹಾಜರಾಗಿರುವುದು ಕಂಡು ಬಂದಿರುತ್ತದೆ.

    ಕರ್ನಾಟಕ ಸಿವಿಲ್ ಸೇವಾ ನಿಯಮಗಳನ್ವಯ ರಜೆ ಪಡೆಯದೆ ನಾಲ್ಕು ತಿಂಗಳು ಅಥವಾ ಅದಕ್ಕೂ ಹೆಚ್ಚು ಅವಧಿಯವರೆಗೆ ಕರ್ತವ್ಯದಿಂದ ಗೈರು ಹಾಜರಿರುವ ಅಧಿಕಾರಿಯು ಕರ್ನಾಟಕ ಸರ್ಕಾರಿ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಾವಳಿ 1957ರಲ್ಲಿ ವಿಧಿಸಲಾದ ಕಾರ್ಯವಿಧಾನವನ್ನು ಅನುಸರಿಸಿದ ತರುವಾಯ ಕೆಲಸದಿಂದ ವಜಾ ಮಾಡುವುದಕ್ಕೆ ಅಥವಾ ತಗೆದುಹಾಕುವುದಕ್ಕೆ ಗುರಿಯಾಗಬಹುದು ಎಂದು ತಿಳಿಸಿ, ಕಚೇರಿ ಕೆಲಸಕ್ಕೆ ಅನಧಿಕೃತ ಗೈರಾಗಿರುವ ನಿಮ್ಮ ವಿರುದ್ಧ ಸರ್ಕಾರದ ನಿಯಮಾವಳಿಯಂತೆ ಶಿಸ್ತು ಕ್ರಮ ಜರುಗಿಸಬಾರದೇಕೆ ಎಂದು ನಗರಾಭಿವೃದ್ಧಿಕೋಶದ ಪಿಡಿ ಕಾವ್ಯಾರಾಣಿ, ಅಧಿಕಾರಿ ವಿರುದ್ಧ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು.

    ನಿವಾಸಿಯಿಂದ ಡಿಸಿಗೆ ದೂರು

    ಧರಣೇಂದ್ರಕುಮಾರ್ ವಿರುದ್ಧ ಕಾರಣ ಕೇಳಿ ಜಾರಿ ಮಾಡಿರುವ ನೋಟಿಸ್‌ಗೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಂಡಿದ್ದೀರಿ ಎಂಬ ಮಾಹಿತಿ ಕೇಳಿರುವ ಸ್ಥಳೀಯ ನಿವಾಸಿ ಸುರೇಶ ಕಮ್ಮಾರ್, ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಹಲವು ಬಾರಿ ಕರೆ ಮಾಡಿದರೂ ಪಿಡಿ ಕಾವ್ಯಾರಾಣಿ ಕರೆ ಸ್ವೀಕರಿಸಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts