More

    ಪ್ರಾಯೋಗಿಕ ಬೋಧನೆಗೆ ಆದ್ಯತೆ ನೀಡಿ -ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಕವಿಮಾತು

    ಕುಷ್ಟಗಿ: ವಿಜ್ಞಾನ ಹಾಗೂ ಗಣಿತ ವಿಷಯಗಳನ್ನು ಪ್ರಾಯೋಗಿಕವಾಗಿ ಕಲಿಸುವುದರಿಂದ ವಿದ್ಯಾರ್ಥಿಗಳು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಶಿಕ್ಷಕರು ಪ್ರಯೋಗಶೀಲರಾಗಿ ಬೋಧಿಸಬೇಕಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.

    ಪಟ್ಟಣದ ಬುತ್ತಿಬಸವೇಶ್ವರ ಪಿಯು ಕಾಲೇಜು ಆವರಣದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗಾಗಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ಕಲಿಕೆಗೆ ಮಿತಿ ಎಂಬುದಿಲ್ಲ. ಎಲ್ಲ ಆವಿಷ್ಕಾರಗಳಿಗೆ ಮೂಲವಾಗಿರುವ ವಿಜ್ಞಾನ ವಿಷಯವನ್ನು ಶಿಕ್ಷಕರು ಪರಿಣಾಮಕಾರಿಯಾಗಿ ಕಲಿಸಬೇಕಿದೆ ಎಂದರು.

    ತಹಸೀಲ್ದಾರ್ ಗುರುರಾಜ ಛಲವಾದಿ ಮಾತನಾಡಿ, ವಿಜ್ಞಾನ ಸೋಜಿಗದ ವಿಷಯವಾಗಿದೆ. ಪ್ರತಿ ಹಂತದಲ್ಲಿಯೂ ಕುತೂಹಲ ಕೆರಳಿಸುತ್ತದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸುವಲ್ಲಿ ವಿಜ್ಞಾನ ವಸ್ತು ಪ್ರದರ್ಶನಗಳು ಸಹಕಾರಿಯಾಗಲಿವೆ ಎಂದರು. ಕೊಪ್ಪಳ ಉಪನಿರ್ದೇಶಕರ ಕಚೇರಿಯ ವಿಜ್ಞಾನ ವಿಷಯ ಪರಿವೀಕ್ಷಕಿ ಸುಜಾತಾ ಮಾತನಾಡಿ, ವಿಜ್ಞಾನ ಜೀವನ ಸತ್ಯ ತಿಳಿಸಿಕೊಡುತ್ತದೆ. ವಿದ್ಯಾರ್ಥಿಗಳಲ್ಲಿ ಪ್ರಯೋಗಶೀಲತೆ ಹೆಚ್ಚಿಸಿ ಅವರನ್ನು ಬಾಲವಿಜ್ಞಾನಿಗಳನ್ನಾಗಿ ತಯಾರು ಮಾಡಬೇಕಿದೆ ಎಂದರು.

    ಬಿಇಒ ಸುರೇಂದ್ರ ಕಾಂಬ್ಳೆ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ನೀಲಗೌಡ ಹೊಸಗೌಡ್ರ ಇತರರು ಮಾತನಾಡಿದರು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಾಲಾಜಿ ಬಳಿಗಾರ, ನಿರ್ದೇಶಕರಾದ ಜಗದೀಶ ಸೂಡಿ, ಉಮೇಶ, ಕಾರ್ಯಕ್ರಮದ ನೋಡಲ್ ಅಧಿಕಾರಿ ರಾಜೇಂದ್ರ ಬೆಳ್ಳಿ, ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶಾಕೀರ್ ಬಾಬಾ, ಅಕ್ಷರ ದಾಸೋಹ ಅಧಿಕಾರಿ ಕೆ.ಶರಣಪ್ಪ, ವಿಜ್ಞಾನ ವೇದಿಕೆಯ ತಾಲೂಕು ಅಧ್ಯಕ್ಷ ಬಸವರಾಜ ವಾಲಿಕಾರ, ಬಿಆರ್‌ಪಿ ಲೋಕೇಶ ಗೋಟೂರು, ಬುತ್ತಿಬಸವೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸಪ್ಪ ಎಲಿಗಾರ್ ಇತರರು ಇದ್ದರು. ಜಿಲ್ಲೆಯ ವಿವಿಧ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts