More

    ಕಚೇರಿ, ಸಭೆಗಳಿಗೂ ಮುಖ್ಯಾಧಿಕಾರಿ ಗೈರು: ಕುಷ್ಟಗಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ

    ಕುಷ್ಟಗಿ: ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಸದಸ್ಯರು ಬೇಸರ ವ್ಯಕ್ತಪಡಿಸಿದರು.

    ಸದಸ್ಯರ ಮಾತಿಗೆ ಮುಖ್ಯಾಧಿಕಾರಿ ಬಿ.ಟಿ.ಬಂಡಿವಡ್ಡರ್ ಸ್ಪಂದಿಸಲ್ಲ. ದೈನಂದಿನ ಕರ್ತವ್ಯ ಹಾಗೂ ಸಭೆಗಳಿಗೂ ಗೈರಾಗುತ್ತಿದ್ದಾರೆ. ಪ್ರತಿ ಸಭೆಯಲ್ಲಿಯೂ ಈ ವಿಚಾರ ಪ್ರಸ್ತಾಪಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಿಬ್ಬಂದಿಗೂ ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಾಧಿಕಾರಿ ಕಚೇರಿಗೆ ಸರಿಯಾಗಿ ಬರಲ್ಲ. ಸಭೆಗೂ ಹಾಜರಾಗಲ್ಲ. ಸಾರ್ವಜನಿಕರಿಗೆ ಹಣದ ಬೇಡಿಕೆ ಇಡುತ್ತಾರೆ. ಕಚೇರಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಸಾರ್ವಜನಿಕರಿಗೆ ಸಂಬಂಧಿಸಿದ 300ಕ್ಕೂ ಹೆಚ್ಚು ಕಡತಗಳು ಬಾಕಿ ಉಳಿದಿವೆ. ಮುಖ್ಯಾಧಿಕಾರಿ ವರ್ತನೆ ಕುರಿತು ಜಿಲ್ಲಾಧಿಕಾರಿಗೂ ಮನವರಿಕೆ ಮಾಡಲಾಗಿದೆ. ಅವರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ದೂರಿದರು. ಕಚೇರಿ ವ್ಯವಸ್ಥಾಪಕ ಖತೀಬ್‌ಗೆ ಮುಖ್ಯಾಧಿಕಾರಿ ಜವಾಬ್ದಾರಿ ನೀಡಿ ಠರಾವು ಪುಸ್ತಕದಲ್ಲಿ ಬರೆಯುವಂತೆ ಅಧ್ಯಕ್ಷ ಜಿ.ಕೆ.ಹಿರೇಮಠ, ಸಿಬ್ಬಂದಿಗೆ ಸೂಚಿಸಿದರು.

    ಪಟ್ಟಣದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ನಗರೋತ್ಥಾನ ಕಾಮಗಾರಿ ಕಳಪೆಯಾಗಿದೆ. ಕಾಮಗಾರಿ ಸ್ಥಳಕ್ಕೆ ಸಂಬಂಧಿಸಿದ ಎಇಇ, ಇಇ ಭೇಟಿ ನೀಡಿಲ್ಲ. ಮಣ್ಣಿನ ಮೇಲೆ ಡಾಂಬರ್ ಹಾಕಿ ಕಾಮಗಾರಿ ಮುಗಿಸಲಾಗುತ್ತಿದೆ ಎಂದು ಸದಸ್ಯ ಕಲ್ಲೇಶ ತಾಳದ್ ದೂರಿದರು. ಹಳೇ ಬಜಾರ್ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಲ್ಲು, ಮಣ್ಣಿನ ರಾಶಿ ಕಂಡುಬರುತ್ತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಹಲವು ಬಾರಿ ಹೇಳಿದರೂ ಸಿಬ್ಬಂದಿ ಕ್ಯಾರೇ ಎನ್ನುತ್ತಿಲ್ಲ. ಕಾಲೇಜು ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದು, ವಾಹನ ಸವಾರರು ಆಯತಪ್ಪಿ ಬೀಳುತ್ತಿದ್ದಾರೆ ಎಂದು ಸದಸ್ಯ ಬಸವರಾಜ ಬುಡಕುಂಟಿ ಸಭೆಯ ಗಮನಕ್ಕೆ ತಂದರು.

    ತೆರಿಗೆ ವಸೂಲಿ, ಕುಡಿವ ನೀರು ಪೂರೈಕೆ, ವಸತಿ ವಿನ್ಯಾಸಗಳಿಗೆ ಅನುಮೋದನೆ ಇತರ ವಿಚಾರಗಳ ಕುರಿತು ಚರ್ಚೆ ನಡೆಯಿತು. ಅಧ್ಯಕ್ಷ ಜಿ.ಕೆ.ಹಿರೇಮಠ, ಉಪಾಧ್ಯಕ್ಷೆ ಹನುಮವ್ವ ಕೋರಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜೇಶ ಪತ್ತಾರ್, ಕಚೇರಿ ವ್ಯವಸ್ಥಾಪಕ ಖತೀಬ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts