More

    ಆರಂಭಶೂರತ್ವಕ್ಕೆ ಸೀಮಿತ ಪುರಸಭೆ ಕಾರ್ಯಾಚರಣೆ ?

    ಕುಷ್ಟಗಿ: ಪಟ್ಟಣದ ವಿವಿಧ ರಸ್ತೆ ಬದಿ ಇದ್ದ ಗೂಡಂಗಡಿಗಳ ತೆರವಿಗೆ ಮುಂದಾಗಿದ್ದ ಪುರಸಭೆ ಆರಂಭಶೂರತ್ವ ಪ್ರದರ್ಶಿಸಿ ಸದ್ಯ ಕಾರ್ಯಾಚರಣೆ ನಿಲ್ಲಿಸಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಜೆಸಿಬಿ ಯಂತ್ರದೊಂದಿಗೆ ಜ.4ರಂದು ಏಕಾಏಕಿ ಕಾರ್ಯಾಚರಣೆಗಿಳಿದ ಪುರಸಭೆ ಮುಖ್ಯಾಧಿಕಾರಿ ನೇತೃತ್ವದ ತಂಡ ಪೊಲೀಸರ ಸಹಾಯ ಪಡೆದು ಗೂಡಂಗಡಿ ತೆರವಿಗೆ ಮುಂದಾಯಿತು. ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದರೂ ಕ್ಯಾರೇ ಎನ್ನದೆ ಒಂದೇ ದಿನಕ್ಕೆ ಎಲ್ಲ ಅಂಗಡಿ ತೆರವು ಮಾಡುವಂತೆ ಕಟ್ಟುನಿಟ್ಟಿನ ಕಾರ್ಯಾಚರಣೆ ಕೈಗೊಂಡರು. ಅಧಿಕಾರಿಗಳು ಹೇಳಿದರೆಂದು ಅಲ್ಲಿಂದ ಸ್ಥಳಾಂತರಗೊಂಡಿದ್ದ ತಳ್ಳುವ ಬಂಡಿಗಳು ಮತ್ತೆ ಮೊದಲಿದ್ದ ಸ್ಥಳದಲ್ಲಿ ಪ್ರತ್ಯಕ್ಷಗೊಂಡಿವೆ. ಸಾಮಗ್ರಿಗಳಿವೆ ಒಂದು ದಿನ ಕಾಲಾವಕಾಶ ನೀಡಿ ಎಂದು ಮನವಿ ಮಾಡಿಕೊಂಡ ಶೆಡ್ ಹೊಂದಿರುವ ಅಂಗಡಿಕಾರರು ಎಂದಿನಂತೆ ವ್ಯಾಪಾರ ವಹಿವಾಟು ಮುಂದುವರಿಸಿದ್ದಾರೆ.

    ಹಲವು ಕಡೆ ತಲೆ ಎತ್ತಿವೆ: ಪಟ್ಟಣದ ಪುರಸಭೆ ರಸ್ತೆ, ಬಸ್ ನಿಲ್ದಾಣ ರಸ್ತೆ, ತಾಲೂಕು ಆಸ್ಪತ್ರೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಮುಂಭಾಗ ಸೇರಿದಂತೆ ಸರ್ಕಾರಿ ಕಚೇರಿ ಕಟ್ಟಡಗಳನ್ನು ಮರೆಮಾಚುವಂತೆ ಹಾಗೂ ಸಂಚಾರಕ್ಕೆ ಅಡ್ಡಿಪಡಿಸುವಂತೆ ಗೂಡಂಗಡಿಗಳು ತಲೆ ಎತ್ತಿವೆ. ಆರಂಭದಲ್ಲಿಯೇ ತಾಕೀತು ಮಾಡದೆ ಅವಕಾಶ ನೀಡುವ ಪುರಸಭೆ, ವ್ಯಾಪಾರಿಗಳು ತಳವೂರಿದ ನಂತರ ಕಾರ್ಯಾಚರಣೆಗೆ ಮುಂದಾಗುತ್ತಾರೆ. ಸಾಂಕೇತಿಕ ಎಂಬಂತೆ ನಡೆಯುವ ಕಾರ್ಯಾಚರಣೆಗಳಿಂದ ಗೂಡಂಗಡಿಗಳು ಇದ್ದ ಸ್ಥಳದಲ್ಲಿಯೇ ಉಳಿದುಕೊಂಡು ಪಾದಚಾರಿಗಳ ಓಡಾಟಕ್ಕೆ ಹಾಗೂ ವಾಹನಗಳ ನಿಲುಗಡೆಗೆ ಸ್ಥಳ ಇಲ್ಲದಂತಾಗುತ್ತಿದೆ.

    ಒತ್ತಡಕ್ಕೆ ಮಣಿದ ಪುರಸಭೆ?: ಪುರಸಭೆ ರಸ್ತೆಯ ಫುಟ್‌ಪಾತ್ ಮೇಲೆ ಹತ್ತಾರು ಶೆಡ್ ಇರಿಸಲಾಗಿದೆ. ಪುರಸಭೆಗೆ ಸಂಬಂಧಿಸಿದವರು ಶೆಡ್ ಅಳವಡಿಸಿ ಬಾಡಿಗೆಗೆ ನೀಡಿದ್ದಾರೆ ಎಂಬ ದೂರು ಕೇಳಿಬಂದಿದೆ. ಗೂಡಂಗಡಿಗಳ ತೆರವು ಕಾರ್ಯಾಚರಣೆಗೆ ಬಂದೋಬಸ್ತ್ ಒದಗಿಸುವಂತೆ ಪುರಸಭೆ ಮುಖ್ಯಾಧಿಕಾರಿ ಪಿಎಸ್‌ಐಗೆ ಬರೆದ ಪತ್ರದಲ್ಲಿ ಪಟ್ಟಣದ ರಾಯಚೂರು, ಕೊಪ್ಪಳ ರಸ್ತೆ ಹಾಗೂ ಕೆಇಬಿ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆಯಾದರೂ ಪುರಸಭೆ ರಸ್ತೆ ಬಗ್ಗೆ ತಿಳಿಸಿಲ್ಲ. ಈಗಲೂ ಅಲ್ಲಿನ ಶೆಡ್‌ಗಳ ತೆರವಿಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ.

    ಸಂಚಾರಕ್ಕೆ ಅಡ್ಡಿಪಡಿಸುವ ಹಾಗೂ ವಿವಿಧ ಇಲಾಖೆ ಕಚೇರಿಗಳ ಕಟ್ಟಡಗಳನ್ನು ಮರೆಮಾಚುವಂತೆ ಇರುವ ರಸ್ತೆ ಪಕ್ಕದ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಲಾಗುವುದು. ಶೆಡ್‌ಗಳು ಯಾರದ್ದೇ ಇದ್ದರೂ ಯಾವುದೇ ಒತ್ತಡಕ್ಕೆ ಮಣಿಯದೆ ತೆರವುಗೊಳಿಸುವಂತೆ ತಿಳಿಸಲಾಗುವುದು.
    | ಎಂ.ಗಂಗಪ್ಪ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ, ಕೊಪ್ಪಳ

    10ಕೆಎಸ್‌ಟಿ-2
    ಕುಷ್ಟಗಿಯ ಪುರಸಭೆ ರಸ್ತೆಯ ಫುಟ್‌ಪಾತ್ ಮೇಲೆ ಹಾಕಿಕೊಂಡಿರುವ ಶೆಡ್‌ಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts