More

    ಕುಷ್ಟಗಿಯಲ್ಲಿ ಎಚ್ಡಿಕೆ ಶಕ್ತಿ ಪ್ರದರ್ಶನ: ಭರವಸೆ ನೀಡಿ ಮತಯಾಚಿಸಿದ ಕುಮಾರಸ್ವಾಮಿ

    ಕೊಪ್ಪಳ: ಮತದಾರರಿಗೆ ಭರವಸೆಗಳ ಮಹಾಪೂರ ಹರಿಸುವ ಮೂಲಕ ಜಿಲ್ಲೆಯಲ್ಲಿ ಸೊರಗಿರುವ ಜೆಡಿಎಸ್ ಅನ್ನು ಬಲಗೊಳಿಸಲು ಕುಷ್ಟಗಿಯಲ್ಲಿ ಸೋಮವಾರ ಏರ್ಪಡಿಸಿದ್ದ ಪಂಚರತ್ನ ಯಾತ್ರೆ ಸಮಾವೇಶವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮರ್ಥವಾಗಿ ಸದ್ಬಳಕೆ ಮಾಡಿಕೊಂಡರು.

    ತಾವರಗೇರಾ ಮಾರ್ಗವಾಗಿ ಆಗಮಿಸಿದ ಎಚ್ಡಿಕೆಗೆ ಕಾರ್ಯಕರ್ತರು ಡೊಳ್ಳು ಬಾರಿಸಿ, ಕಳಸ ಬೆಳಗುವ ಮೂಲಕ ಭರ್ಜರಿ ಸ್ವಾಗತ ಕೋರಿದರು. ದಾರಿಯುದ್ದಕ್ಕೂ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಬಲ ಪ್ರದರ್ಶನ ನಡೆಸಿದರು. ಎರಡು ಬಾರಿ ಆಕಸ್ಮಿಕವಾಗಿ ಸಿಎಂ ಆಗಿದ್ದು, ಬಿಜೆಪಿ-ಕಾಂಗ್ರೆಸಿಗರು ಕೊಟ್ಟ ನೋವು ಸಹಿಸಿಕೊಂಡು ಜನರಿಗಾಗಿ ಸಾಲಮನ್ನಾ, ಸೈಕಲ್ ವಿತರಣೆ, ಸಾರಾಯಿ-ಲಾಟರಿ ನಿಷೇಧ ಮಾಡಿರುವೆ. 2023ರ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಎಕರೆಗೆ 10 ಸಾವಿರ ರೂ., ವೃದ್ಧರಿಗೆ ಮಾಸಿಕ ಐದು ಸಾವಿರ ರೂ., ಭೂಮಿ ರಹಿತರಿಗೆ ಉದ್ಯೋಗ ತರಬೇತಿ, ಸಾಲ ಸೌಲಭ್ಯ, ಮಹಿಳಾ ಗುಂಪುಗಳ ಸಾಲ ಮನ್ನಾ ಮಾಡುವುದಾಗಿ ಭರವಸೆಗಳ ಹೊಳೆ ಹರಿಸಿದರು. ವೇದಿಕೆ ಸಮಾವೇಶಕ್ಕೆ ನಿರೀಕ್ಷೆ ಮೀರಿ ಜನ ಸೇರಿದ್ದರಿಂದ ಖುಷಿಗೊಂಡ ಕುಮಾರಸ್ವಾಮಿ, ಬಿಜೆಪಿ-ಕಾಂಗ್ರೆಸ್ ಲೋಪಗಳನ್ನು ಜನರೆದುರು ತೆರೆದಿಡುವ ಮೂಲಕ ಮತಯಾಚನೆ ಮಾಡಿದರು.

    ಸಾಲಮನ್ನಾದಲ್ಲಿ ಕುಷ್ಟಗಿಯ 16 ಸಾವಿರ ಕುಟುಂಬದ ಸಾಲಮನ್ನಾ ಆಗಿದೆ. ಅವರೆಲ್ಲ ತಮ್ಮ ಮನೆಯ ನಾಲ್ಕು ಸದಸ್ಯರ ಮತ ನೀಡಿದರೆ ನಮ್ಮ ಅಭ್ಯರ್ಥಿ ತುಕಾರಾಮ್ ಗೆಲ್ಲುತ್ತಾರೆ. ಸ್ವತಂತ್ರ ಅಧಿಕಾರ ಬಂದಲ್ಲಿ ಗ್ರಾಪಂ ಮಟ್ಟದಲ್ಲಿ ಉತ್ತಮ ಶಾಲೆ, ಆಸ್ಪತ್ರೆ, ಕೋಲ್ಡ್ ಸ್ಟೋರೇಜ್, ಗೋದಾಮು ನಿರ್ಮಿಸುವೆ. ಕುಮಾರಸ್ವಾಮಿಗೆ 22 ಸ್ಥಾನ ಬರುತ್ತವೆ. ನಮಗೆ 150 ಸ್ಥಾನ ಬರುತ್ತದೆ ಎಂದು ವಿಪಕ್ಷದವರು ಬೀಗುತ್ತಿದ್ದಾರೆ. ಅವರಿಗೆ ಯಾವ ಪುರುಷಾರ್ಥಕ್ಕೆ ಅಷ್ಟು ಸ್ಥಾನ ನೀಡುತ್ತೀರಿ? ನನಗೆ ಯಾಕೆ 22ಸ್ಥಾನ ? ನಾನು ಎಷ್ಟು ವರ್ಷ ಬದುಕಿರುತ್ತೇನೆ ಎಂಬುದು ಗೊತ್ತಿಲ್ಲ. ಇರುವಷ್ಟು ದಿನ ನಿಮ್ಮ ಸೇವೆ ಮಾಡುವೆ. 123 ಸ್ಥಾನ ಪಡೆಯಲು ಕುಷ್ಟಗಿ ಜನರು ಬೆಂಬಲ ನೀಡಿ. ನಿಮ್ಮ ಎಲ್ಲ ಕಷ್ಟದಲ್ಲಿ ನಾನಿರುವೆ. ನಿಮಗೆ ನೀಡಿದ ಮಾತು ತಪ್ಪಿದಲ್ಲಿ ಪಕ್ಷ ವಿಸರ್ಜಿಸುವೆ. ಉಕ ಭಾಗದಲ್ಲಿ ಪಕ್ಷ ಸಂಘಟನೆ ಕಳಪೆಯಾಗಿದ್ದು, ಸೂಕ್ತ ಅಭ್ಯರ್ಥಿಗಳು ದೊರೆತಲ್ಲಿ ಬಲಪಡಿಸುವೆ ಎಂದರು.

    ನಿಮ್ಮ ಕೆಲಸ ನನಗೆ ತೃಪ್ತಿ ತಂದಿಲ್ಲ: ಸಮಾವೇಶದಲ್ಲಿ ತಮ್ಮ ಅಭ್ಯರ್ಥಿಗಳ ಮತ ಬೇಡಿದ ಕುಮಾರಸ್ವಾಮಿ, ಅವರ ಕೆಲಸ ತೃಪ್ತಿ ತಂದಿಲ್ಲವೆಂದು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದರು. ಕನಕಗಿರಿ ಕ್ಷೇತ್ರದ ಅಶೋಕ ಉಮಲೂಟಿಗೆ ‘ನೀನು ಸುಳ್ಳು ಹೇಳುತ್ತೀಯಾ’ ಅದನ್ನ ಬಿಡಬೇಕು. ಪಕ್ಷ ಸಂಘಟನೆ ಮಾಡು. ಊಟದ ಸಮಯದಲ್ಲಿ ಭೇಟಿಯಾಗು’ ಎಂದರೆ, ಕುಷ್ಟಗಿ ಅಭ್ಯರ್ಥಿ ತುಕಾರಾಮ ಸುರ್ವೆ, ಯಲಬುರ್ಗಾದ ಮಲ್ಲನಗೌಡಗೆ ‘ಇಷ್ಟು ಸಾಲದು. ನಿಮ್ಮ ಕೆಲಸ ನನಗೆ ತೃಪ್ತಿ ತಂದಿಲ್ಲ. ಜನರ ಬಳಿ ತೆರಳಿ. ಅವರು ನಿಮ್ಮ ಕೈ ಹಿಡಿಯುತ್ತಾರೆ. ಸರಿಯಾಗಿ ಸಂಘಟನೆ ಮಾಡದಿದ್ದರೆ ಅಭ್ಯರ್ಥಿ ಬದಲಿಸಬೇಕಾಗುತ್ತದೆ. ಆಮೇಲೆ ನನ್ನ ಮೇಲೆ ಆರೋಪ ಮಾಡಬೇಡಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts