More

    ಉದ್ಯಾನಕ್ಕೆ ಕೂಡಿಬಾರದ ಉದ್ಘಾಟನೆ ಭಾಗ್ಯ

    ಕುಷ್ಟಗಿ: ನಿಡಶೇಸಿ ಕೆರೆ ಅಂಗಳದಲ್ಲಿ ನಿರ್ಮಿಸಿರುವ ಉದ್ಯಾನಕ್ಕೆ ಉದ್ಘಾಟನೆ ಭಾಗ್ಯ ಇನ್ನೂ ಕೂಡಿಬಂದಿಲ್ಲ. ನಾಮಕರಣವನ್ನೂ ಮಾಡಿರದ ಪಾರ್ಕ್‌ನಲ್ಲಿ ಮಕ್ಕಳ ಆಟೋಟ ಕಂಡುಬರುತ್ತಿದ್ದು, ವಿವಿಧ ಶಾಲೆಗಳ ಮಕ್ಕಳನ್ನು ವಾಯುವಿವಾಹರಕ್ಕೆಂದು ಕರೆತರಲಾಗುತ್ತಿದೆ.

    ಕೆರೆ ದಡದ ನಾಲ್ಕೂವರೆ ಎಕರೆ ಪ್ರದೇಶದಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ 2.55 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಉದ್ಯಾನ ಕಳೆದ ನ.6ರಂದೇ ಉದ್ಘಾಟನೆ ಆಗಬೇಕಿತ್ತು. ಆದರೆ, ನಾಮಕರಣ ವಿವಾದದಿಂದ ನನೆಗುದಿಗೆ ಬಿದ್ದಿದೆ. ಹಿಂದೆ ನಿಡಶೇಸಿ ಕೆರೆ ನಿರ್ಮಾಣಕ್ಕೆ ಶ್ರಮಿಸಿದ್ದರೆಂಬ ಕಾರಣಕ್ಕೆ ಪಟ್ಟಣದ ಅಬ್ದುಲ್ ರಬ್ ಎಂಬುವರ ಹೆಸರನ್ನು ಉದ್ಯಾನಕ್ಕೆ ಇಡಲು ಕೆಲವರು ಪ್ರಸ್ತಾಪಿಸಿದ್ದರಿಂದ ಉದ್ಘಾಟನೆಯ ಹಿಂದಿನ ದಿನ ಅವರ ಹೆಸರನ್ನೇ ಪಾರ್ಕ್ ಫಲಕಕ್ಕೆ ಬರೆಯಿಸಲಾಯಿತು. ವಿಷಯ ತಿಳಿಯುತ್ತಿದ್ದಂತೆ ಬಹುತೇಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ರಾತ್ರೋರಾತ್ರಿ ಹೆಸರು ಅಳಿಸಲಾಯಿತು.

    ಉದ್ಘಾಟನೆ ವಿಚಾರ ಕೆರೆ ಸುತ್ತಲಿನ ಗ್ರಾಮಸ್ಥರಿಗೆ ಗೊತ್ತೇ ಇಲ್ಲ ಎಂಬ ಕಾರಣವನ್ನಿಟ್ಟುಕೊಂಡು ನಿಡಶೇಸಿ, ಮದಲಗಟ್ಟಿ ಇನ್ನಿತರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಉದ್ಘಾಟನೆಗೂ ವಿಘ್ನ ಎದುರಾಯಿತು. ಸದ್ಯ ಉದ್ಯಾನದಲ್ಲಿ ಮಕ್ಕಳ ಆಟೋಟ, ಹಿರಿಯರ ವಿಶ್ರಾಂತಿಗೆ ಯಾವುದೇ ಅಡ್ಡಿ ಇಲ್ಲವಾಗಿದ್ದು, ನಿತ್ಯ ಒಂದಿಲ್ಲೊಂದು ಶಾಲೆ, ಅಂಗನವಾಡಿ ಮಕ್ಕಳನ್ನು ಕರೆತರಲಾಗುತ್ತಿದೆ.

    ಕ್ರಿಯಾಯೋಜನೆಯಂತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಉದ್ಯಾನ ಹಸ್ತಾಂತರಿಸುವುದು ಬಾಕಿ ಇದೆ. ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಉದ್ಯಾನಕ್ಕೆ ನಾಮಕರಣ ಮಾಡಿಲ್ಲ. ಪಾರ್ಕ್ ಅನ್ನು ಜನರು ಬಳಕೆ ಮಾಡುತ್ತಿದ್ದಾರೆ.
    | ಇರ್ಫಾನ್, ಎಇಇ, ಕೆಆರ್‌ಐಡಿಎಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts