More

    ಪರೀಕ್ಷೆ ಸಂದರ್ಭದಲ್ಲಿ ಮತದಾರರ ಸಮೀಕ್ಷೆ ಕಷ್ಟಕರ: ಕಾರ್ಯಾಗಾರದಲ್ಲಿ ಸಮಸ್ಯೆ ಹೇಳಿಕೊಂಡ ಬಿಎಲ್‌ಒಗಳು

    ಕುಷ್ಟಗಿ: ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಚುನಾವಣಾ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಬಿಎಲ್‌ಒಗಳು, ಬ್ಲಾಕ್ ಮಟ್ಟದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡರು.

    ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಏ.10ರೊಳಗೆ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುವಂತೆ ತಿಳಿಸಲಾಗಿದೆ. ಆದರೆ, ಬಿಎಲ್‌ಒಗಳು ಶಿಕ್ಷಕರಾಗಿರುವುದರಿಂದ ಪರೀಕ್ಷೆ ಸಂದರ್ಭದಲ್ಲಿ ಸಮೀಕ್ಷೆ ನಡೆಸುವುದು, ಮೌಲ್ಯಮಾಪನ, ದಾಖಲೆ ನಿರ್ವಹಣೆ ಮಾಡುವುದು ಕಷ್ಟ. ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರ ಅವಧಿ ಮಾ.31ಕ್ಕೆ ಕೊನೆಗೊಳ್ಳುವುದರಿಂದ ಶಾಲೆ ನಡೆಸುವುದರ ಜತೆಗೆ ನಿಗದಿತ ಅವಧಿಯಲ್ಲಿ ಸಮೀಕ್ಷೆ ನಡೆಸುವುದು ಸಾಧ್ಯವಾಗುವುದಿಲ್ಲ ಎಂದು ಶಿಕ್ಷಕರು ಅಲವತ್ತುಕೊಂಡರು.

    ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆ ಮಾಡಿದ ಬಹುತೇಕರಿಗೆ ಈವರೆಗೆ ಗುರುತಿನ ಚೀಟಿ ವಿತರಣೆಯಾಗಿಲ್ಲ. ಗ್ರಾಮಗಳಲ್ಲಿ ಈ ಸಂಬಂಧ ಬಿಎಲ್‌ಒಗಳನ್ನೇ ಪ್ರಶ್ನಿಸುತ್ತಿದ್ದಾರೆ. ವಿತರಣೆಯಾಗಿರುವ ಕಾರ್ಡ್‌ಗಳಲ್ಲಿ ಗಂಡನ ಹೆಸರಿನ ಬದಲು ತಂದೆ, ಕೆಲ ಹೆಸರುಗಳು ತಪ್ಪಾಗಿ ಮುದ್ರಣಗೊಂಡಿವೆ. ಈ ಕಾರಣದಿಂದಲೂ ಮತದಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಮೀಕ್ಷೆ ವೇಳೆ ಎಲ್ಲವನ್ನೂ ಸರಿಯಾಗಿಯೇ ನಮೂದಿಸಿದ್ದರೂ ಕಾರ್ಡ್‌ಗಳಲ್ಲಿ ದೋಷಗಳು ಕಂಡುಬರುತ್ತಿವೆ ಎಂದು ತಿಳಿಸಿದರು.

    ಮಾಸ್ಟರ್ ಟ್ರೈನರ್ ಕಿಶನ್‌ರಾವ್ ಕುಲಕರ್ಣಿ ಮಾತನಾಡಿ, ಬಿಎಲ್‌ಒಗಳು ಮನೆ ಮನೆಗೆ ತೆರಳಿ ಎರಡು ಕಡೆ ಗುರುತಿನ ಚೀಟಿ ಹೊಂದಿರುವ, ಮೃತ ಮತದಾರರ, ಈವರೆಗೆ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡದೆ ಇರುವವರ ಮಾಹಿತಿ ಪಡೆದು ನಿಗದಿತ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು. ತಾಂತ್ರಿಕ ಕಾರಣಗಳಿಂದ ಕಾರ್ಡ್‌ಗಳಲ್ಲಿ ದೋಷಗಳಾಗಿರಬಹುದು. ಈ ಸಂಬಂಧ ಚುನಾವಣೆ ವಿಭಾಗದ ಅಧಿಕಾರಿಗಳ ಗಮನಕ್ಕೆ ತಂದು ದೋಷ ಮುಕ್ತ ಗುರುತಿನ ಚೀಟಿ ವಿತರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಚುನಾವಣೆ ವಿಭಾಗದ ಅಜಿತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts