More

    ಕುಡಿವ ನೀರು ಪೋಲಾಗದಂತೆ ನಿಗಾವಹಿಸಿ: ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಸೂಚನೆ

    ಕುಷ್ಟಗಿ: ಗ್ರಾಮಗಳಲ್ಲಿ ನೀರು ಪೋಲಾಗುವುದನ್ನು ತಡೆದು ಸದ್ಬಳಕೆಗೆ ಒತ್ತು ನೀಡಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಗ್ರಾಪಂ ಪಿಡಿಒ, ನೀರಗಂಟಿಗಳಿಗೆ ಸೂಚಿಸಿದರು.

    ಹಿರೇಬನ್ನಿಗೋಳದ ಅಟಲ್‌ಜೀ ಸಭಾಭವನದಲ್ಲಿ ತಾಲೂಕಿನ 36 ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಹಾಗೂ ನೀರಗಂಟಿಗಳಿಗೆ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕುಡಿವ ನೀರಿನ ಬವಣೆ ನೀಗಿಸುವ ಸದುದ್ದೇಶದಿಂದ ಬಹುಗ್ರಾಮ ಕುಡಿವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆಯ ಕಾಮಗಾರಿಯನ್ನು ತೀವ್ರಗತಿಯಲ್ಲಿ ಮುಗಿಸಿ ಜನರಿಗೆ ನೀರು ಪೂರೈಸಬೇಕಿದೆ. ಕೆಲ ಗ್ರಾಮಗಳಲ್ಲಿ ನೀರು ವ್ಯರ್ಥವಾಗಿ ಹರಿದು ಮಡುಗಟ್ಟಿ ನಿಲ್ಲುತ್ತಿದೆ. ಇದರಿಂದ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತವೆ. ನೀರು ಪೋಲಾಗದಂತೆ ನಿಗಾ ವಹಿಸಬೇಕು. ಜನರಿಗೂ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಈ ಸಂಬಂಧ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕಿದೆ ಎಂದು ತಿಳಿಸಿದರು.

    ತಾಪಂ ಇಒ ಶಿವಪ್ಪ ಸುಬೇದಾರ್ ಮಾತನಾಡಿ, ಬಹುಗ್ರಾಮ ಕುಡಿವ ನೀರಿನ ಯೋಜನೆ ಶೀಘ್ರ ಪೂರ್ಣಗೊಳ್ಳಲಿದೆ. ನೀರು ನಿರ್ವಹಣೆ ಬಗ್ಗೆ ಗ್ರಾಪಂಗಳಿಗೆ ಅಗತ್ಯ ಸಲಹೆ ನೀಡಲಾಗಿದೆ ಎಂದರು. ಹಿರೇಬನ್ನಿಗೋಳ ಗ್ರಾಪಂ ಅಧ್ಯಕ್ಷೆ ಚನ್ನಮ್ಮ ವಾಲ್ಮೀಕಿ, ಉಪಾಧ್ಯಕ್ಷೆ ಶಾಂತಮ್ಮ ಹಡಪದ್, ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ವಿಲಾಸ ಭೋಸ್ಲೆ, ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ಪಂಚಾಯತ್ ರಾಜ್ ಎಡಿ ಹನುಮಂತಗೌಡ ಪೊಲೀಸ್ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts