More

    ಕರ್ತವ್ಯ ಲೋಪ; ಕುಷ್ಟಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಮಾನತು

    ಕುಷ್ಟಗಿ: ಕರ್ತವ್ಯಲೋಪ ಹಿನ್ನೆಲೆಯಲ್ಲಿ ಪಟ್ಟಣದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಘವೇಂದ್ರ ಕೊಡಗುರಿಯನ್ನು ಸೇವೆಯಿಂದ ಅಮಾನತುಗೊಳಿಸಿ ಕೃಷಿ ಇಲಾಖೆ ಆಯುಕ್ತ ಬಿ.ಶರತ್ ಆದೇಶ ಹೊರಡಿಸಿದ್ದಾರೆ.

    ಬಿತ್ತನೆ ಬೀಜ ವಿತರಣೆಗೆ ಸಂಬಂಧಿಸಿದಂತೆ ರೈತರ ವಂತಿಗೆ ಹಣವನ್ನು ಆಯಾ ದಿನವೇ ರೈತ ಸಂಪರ್ಕ ಕೇಂದ್ರದ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕೆಂಬ ನಿಯಮವಿದೆ. 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿತರಿಸಿದ ಬಿತ್ತನೆ ಬೀಜದ ರೈತರ ವಂತಿಗೆ ಹಣ 11.56 ಲಕ್ಷ ರೂ. ಅನ್ನು 5ತಿಂಗಳು ತಡವಾಗಿ ಹಾಗೂ ಹಿಂಗಾರು ಹಂಗಾಮಿಗೆ ಸಂಬಂಧಿಸಿದ 21.48ಲಕ್ಷ ರೂ. ಅನ್ನು ಎರಡು ತಿಂಗಳು ತಡವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ಅಲ್ಲದೆ 2022ರ ಹಿಂಗಾರು ಹಂಗಾಮಿಗೆ ಬಳ್ಳಾರಿಯ ರಾಘವೇಂದ್ರ ಆಗ್ರೋ ಸರ್ವೀಸ್ ನವರು 20ಕೆಜಿಯ 500ಚೀಲ ಕಡಲೆ ಸರಬರಾಜು ಮಾಡಿರುವ ಬಗ್ಗೆ ಇನ್ವಾಯಿಸ್ ಮಾತ್ರ ಇದ್ದು, ಪೂರೈಸಿದ ವಾಹನ ಸಂಖ್ಯೆ ಇತ್ಯಾದಿ ಮಾಹಿತಿ ನಮೂದಿಸದಿರುವುದು ಅನುಮಾನ ಮೂಡಿಸಿದೆ. ಈ ಎರಡೂ ಕಾರಣಗಳಿಗೆ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಕಾಣೆಯಾಗಿದ್ದ ಅಧಿಕಾರಿ: ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಡಿ.1ರಂದು ನಾಪತ್ತೆಯಾಗಿದ್ದರು. ಎಲ್ಲ ಕಡೆ ಹುಡುಕಿದ ಕುಟುಂಬ ಸದಸ್ಯರು ಡಿ.6ರಂದು ಪೊಲೀಸರಿಗೆ ದೂರು ನೀಡಿದ್ದರು. ಅದೇ ದಿನ ಬೆಂಗಳೂರಿನಲ್ಲಿ ಪತ್ತೆಯಾಗಿದ್ದರು. ಹಣ ದುರ್ಬಳಕೆ ಮಾಡಿಕೊಂಡಿರುವ ಕಾರಣ ತಲೆ ಮರೆಸಿಕೊಂಡಿರಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಅನಧಿಕೃತ ಗೈರಾಗಿದ್ದ ಅಧಿಕಾರಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ಫೆ.15ರಂದೇ ಆದೇಶ ಹೊರಡಿಸಿದರೂ ಈವರೆಗೆ ಬೆಳಕಿಗೆ ಬಂದಿರಲಿಲ್ಲ. ಅಧಿಕಾರಿ ನಾಪತ್ತೆ ನಂತರ ಆತನ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಕೇಳಿದಾಗ ಅಮಾನತು ವಿಷಯ ಹೊರಹಾಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts