More

    ತೋಟಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಒತ್ತಾಯಿಸಿ ವಣಗೇರಾ ಗ್ರಾಮದ ರೈತರ ಪ್ರತಿಭಟನೆ

    ಕುಷ್ಟಗಿ: ಪಂಪ್‌ಸೆಟ್ ನೀರಾವರಿ ಆಧಾರಿತ ತೋಟಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ತಾಲೂಕಿನ ವಣಗೇರಾ ಗ್ರಾಮದ ರೈತರು ಪಟ್ಟಣದ ಜೆಸ್ಕಾಂ ಉಪ ವಿಭಾಗ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

    40ಕ್ಕೂ ಹೆಚ್ಚು ಟ್ರ್ಯಾಕ್ಟರ್‌ನಲ್ಲಿ ಬಂದಿಳಿದ 700ಕ್ಕೂ ಹೆಚ್ಚು ರೈತರು ಜೆಸ್ಕಾಂ ಉಪ ವಿಭಾಗ ಕಚೇರಿ ಎದುರು ಜಮಾಗೊಂಡು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ದಿನದಲ್ಲಿ ಹತ್ತಾರು ಬಾರಿ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗುತ್ತಿದೆ. ಇದರಿಂದ ಜಮೀನುಗಳಿಗೆ ಸರಿಯಾಗಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಮಳೆಯೂ ಇಲ್ಲದೆ ಇತ್ತ ವಿದ್ಯುತ್ ವ್ಯತ್ಯಯದಿಂದ ನೀರು ಹರಿಸಲೂ ಸಾಧ್ಯವಾಗದೆ ಬೆಳೆಗಳು ಒಣಗುತ್ತಿವೆ. ಸಮಸ್ಯೆ ಇರುವ ಬಗ್ಗೆ ಈಗಾಗಲೇ ಅನೇಕ ಬಾರಿ ಜೆಸ್ಕಾಂ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಹಿಂದೆಯೂ ಕಚೇರಿ ಎದುರು ಪ್ರತಿಭಟಿಸಿದ್ದಕ್ಕೆ ಒಂದೆರಡು ದಿನ ಸಮಸ್ಯೆ ಇರಲಿಲ್ಲ. ಇದೀಗ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಹೆಚ್ಚಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

    ಸ್ಥಳಕ್ಕೆ ಭೇಟಿ ನೀಡಿದ ಉಪ ವಿಭಾಗದ ಎಇಇ ಮಂಜುನಾಥ, ದೋಟಿಹಾಳ ವಿದ್ಯುತ್ ವಿತರಣಾ ಕೇಂದ್ರಕ್ಕೆ 40ಗ್ರಾಮಗಳು ಒಳಪಡುತ್ತಿವೆ. ಮಳೆ ಇಲ್ಲದ ಕಾರಣ ಏಕಕಾಲಕ್ಕೆ ಎಲ್ಲ ರೈತರು ಪಂಪ್‌ಸೆಟ್ ಆರಂಭಿಸುವುದರಿಂದ ಒತ್ತಡ ಹೆಚ್ಚಾಗಿ ಸಮಸ್ಯೆ ಉಂಟಾಗುತ್ತಿದೆ. ಈ ಸಂಬಂಧ ಗ್ರಾಮವಾರು ಸಮಯ ನಿಗದಿಪಡಿಸಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ವಣಗೇರಾ ಗ್ರಾಮವು ವಿತರಣಾ ಕೇಂದ್ರದ ಕೊನೇ ಗ್ರಾಮವಾಗಿರುವುದರಿಂದ ಸಮಸ್ಯೆ ಹೆಚ್ಚುತ್ತಿದೆ. ಬ್ರೇಕರ್ ಅಳವಡಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಬ್ರೇಕರ್ ಅಳವಡಿಸುವುದು ನಿರ್ಮಾಣ ಮತ್ತು ನಿರ್ವಹಣೆ(ಸಿ ಆ್ಯಂಡ್ ಎಂ) ವಿಭಾಗದ ಕೆಲಸವಾಗಿರುವುದರಿಂದ ಪತ್ರ ಬರೆಯಲಾಗಿದೆ ಎಂದರು.

    ಸಮಸ್ಯೆ ಉಂಟಾದಗಲೊಮ್ಮೆ ಇದನ್ನೇ ಹೇಳುತ್ತ ಬಂದಿದ್ದೀರಿ. ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದ ಹೊರತು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು. ಜೆಸ್ಕಾಂ ಅಧಿಕಾರಿ ಪರಿಸ್ಥಿತಿಯನ್ನು ವಿವರಿಸಿ, ಸಮರ್ಪಕ ವಿದ್ಯುತ್ ಪೂರೈಕೆಗೆ ಏಳು ದಿನಗಳ ಕಾಲವಕಾಶ ಕೇಳಿದರು. ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts