More

    ಕುಷ್ಟಗಿ ಬಂದ್‌ಗೆ ವ್ಯಕ್ತವಾಯಿತು ವ್ಯಾಪಕ ಬೆಂಬಲ, ಅವಮಾನಕ್ಕೆ ಭುಗಿಲೆದ್ದ ಆಕ್ರೋಶ

    ಕುಷ್ಟಗಿ: ಅಂಬೇಡ್ಕರರ ಭಾವಚಿತ್ರಕ್ಕೆ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಬುಧವಾರ ಕರೆ ನೀಡಿದ್ದ ಕುಷ್ಟಗಿ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.

    ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದರು. ಸಾರಿಗೆ ಬಸ್‌ಗಳು ಘಟಕದಿಂದ ಹೊರ ಬರಲಿಲ್ಲ. ಇನ್ನು ವಿವಿಧ ಖಾಸಗಿ ವಾಹನಗಳ ಓಡಾಟವೂ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು. ಯುವಕರು ಬೈಕ್ ರ‌್ಯಾಲಿ ಮುಖಾಂತರ ಘೋಷಣೆ ಕೂಗುತ್ತ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ್ದು ಕಂಡುಬಂತು.

    ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜತೆ ವಾಲ್ಮೀಕಿ, ಹಾಲುಮತ ಸೇರಿದಂತೆ ವಿವಿಧ ಸಮುದಾಯದ ಜನ ಬಂದ್‌ಗೆ ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ಬುತ್ತಿಬಸವೇಶ್ವರ ದೇವಸ್ಥಾನ ಆವರಣದಲ್ಲಿ ಸಭೆ ಸೇರಿದ ಪ್ರತಿಭಟನಾಕಾರರು, ತಪ್ಪಿತಸ್ಥರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಮುಸ್ಲಿಮರು ಅಂಬೇಡ್ಕರರ ಭಾವಚಿತ್ರವಿರುವ ಧ್ವಜದೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ಮಲ್ಲಯ್ಯ, ಮಾರುತಿ, ಕನಕದಾಸ, ವಾಲ್ಮೀಕಿ ವೃತ್ತದ ಮೂಲಕ ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಅಂಬೇಡ್ಕರರಿಗೆ ಅಪಮಾನ ಮಾಡಿರುವವರ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

    ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಟೈಯರ್‌ಗೆ ಬೆಂಕಿ ಹಚ್ಚಲು ಕೆಲವರು ತಯಾರಿ ನಡೆಸುತ್ತಿದ್ದ ವೇಳೆ ಪೊಲೀಸರು ಹಚ್ಚದಂತೆ ತಾಕೀತು ಮಾಡಿದ್ದರು. ಆದಾಗ್ಯೂ ಟೈಯರ್ ತಂದು ರಸ್ತೆ ಮೇಲಿಟ್ಟು ಬೆಂಕಿ ಹಚ್ಚಲು ಯತ್ನಿಸಿದಾಗ ಪೊಲೀಸರೇ ಟೈಯರ್‌ಗಳನ್ನು ಕಿತ್ತೊಗೆದಿದ್ದರು. ಪೊಲೀಸರ ವಿರೋಧದ ಮಧ್ಯೆ ಕೆಲವರು ಟೈಯರ್‌ಗಳನ್ನು ತಂದವರೇ ಬೆಂಕಿ ಹಚ್ಚಿ ಘೋಷಣೆ ಕೂಗಿದರು. ಸ್ಥಳಕ್ಕೆ ಆಗಮಿಸಿದ ಗಂಗಾವತಿ ಉಪ ವಿಭಾಗದ ಡಿವೈಎಸ್‌ಪಿ ಆರ್.ಎಸ್.ಉಜ್ಜನಕೊಪ್ಪ, ಸಿಪಿಐ ನಿಂಗಪ್ಪ ರುದ್ರಪ್ಪ ಗೋಳೋಳ ಪ್ರತಿಭನಕಾರರ ವಿರುದ್ಧ ಹರಿಹಾಯ್ದರು. ಸಂಬಂಧಿಸಿದ ವಿಡಿಯೋ ತರಿಸಿಕೊಂಡು ಬೆಂಕಿ ಹಚ್ಚಿದವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts