More

    ಬಸ್ ನಿಲ್ದಾಣದಲ್ಲಿ ಆಸರೆ ಪಡೆದ ಕುಟುಂಬ: ನೆರವಿನ ನಿರೀಕ್ಷೆಯಲ್ಲಿರುವ ಫಾತಿಮಾ

    ಕುಷ್ಟಗಿ: ತಾಲೂಕಿನ ನಿಲೋಗಲ್ ಗ್ರಾಮದ ಫಾತಿಮಾ ತಮ್ಮ ತಾಯಿ ಹುಸೇನಬಿ ಜತೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಆಸರೆ ಪಡೆದಿದ್ದಾರೆ. ಕಳೆದ 6 ದಿನಗಳಿಂದ ಬಸ್ ನಿಲ್ದಾಣದಲ್ಲಿ ವಾಸವಿದ್ದ ಕುಟುಂಬವನ್ನು ದಾನಿಗಳು ನೆರವಿನಿಂದ ಬಾಡಿಗೆ ಮನೆಗೆ ಸೇರಿಸಲಾಗಿದೆ.

    ಜೀವನ ನಡೆಸುತ್ತಿರುವ ಕುಟುಂಬಕ್ಕೆ ಆಸರೆ ಇಲ್ಲ

    ಮನೆ, ಜೀವನೋಪಾಯಕ್ಕೆ ಕೆೆಲಸ, ಒಪ್ಪತ್ತಿನ ಊಟವೂ ಇಲ್ಲದೇ ಜೀವನ ನಡೆಸುತ್ತಿರುವ ಕುಟುಂಬಕ್ಕೆ ಆಸರೆ ಇಲ್ಲದಂತಾಗಿದೆ. ಕಳೆದ 20ವರ್ಷಗಳ ಹಿಂದೆ ಜೀವನೋಪಾಯಕ್ಕೆಂದು ಪಟ್ಟಣಕ್ಕೆ ಆಗಮಿಸಿದ್ದರು. ಫಾತಿಮಾಳ ಪತಿ ನಿಧನ ನಂತರ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾ ತಾಯಿಯ ಆರೈಕೆ ಮಾಡುತ್ತಿದ್ದಳು.

    ಮನೆ ಬಾಡಿಗೆ ಪಾವತಿಸಲಾಗದೇ ಬಸ್ ನಿಲ್ದಾಣದಲ್ಲಿ ಆಸರೆ

    ಅನಾರೋಗ್ಯಕ್ಕೆ ತುತ್ತಾದ ತಾಯಿ ಚಿಕಿತ್ಸೆ ಹಾಗೂ ಮನೆ ಬಾಡಿಗೆ ಪಾವತಿಸಲಾಗದೇ ಬಸ್ ನಿಲ್ದಾಣದಲ್ಲಿ ಆಸರೆ ಪಡೆದಿದ್ದಾರೆ. ಸ್ವಗ್ರಾಮದಲ್ಲಿ ಮನೆ, ಜಮೀನು ಇಲ್ಲದ ಕಟುಂಬಕ್ಕೆ ಪಡಿತರ ಚೀಟಿ ಮಾತ್ರ ಇದೆ. ದೃಷ್ಟಿ ಕಳೆದುಕೊಂಡ ತಾಯಿಯ ಜತೆ ಜೀವನ ನಿರ್ವಹಣೆಗೆ ಕಷ್ಟಪಡುತ್ತಿರುವ ಫಾತಿಮಾ ಸದ್ಯ ನೆರವಿಗೆ ಅಂಗಲಾಚಿದ್ದಾರೆ.


    ಹಸಿವು ನೀಗಿಸಿದ ಸಾರಿಗೆ ಸಿಬ್ಬಂದಿ

    ಕಳೆದ 6 ದಿನಗಳಿಂದ ವಾಸವಿದ್ದ ಫಾತಿಮಾ ಹಾಗೂ ತಾಯಿಯ ಹಸಿವನ್ನು ಸಾರಿಗೆ ಸಿಬ್ಬಂದಿ ನೀಗಿಸಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಚಾಲಕರು, ನಿರ್ವಾಹಕರು ತಾವು ತಂದ ಬುತ್ತಿಯನ್ನು ನಿರ್ಗತಿಕ ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ವಿಷಯ ತಿಳಿದ ಶಾಸಕ ದೊಡ್ಡನಗೌಡ ಪಾಟೀಲ್ ಸಮಸ್ಯೆ ಆಲಿಸಿ 10 ಸಾವಿರ ರೂ. ಧನ ಸಹಾಯ ಮಾಡಿದ್ದಾರೆ.

    ಪುರಸಭೆ ಸದಸ್ಯ ನಾಗರಾಜ ಹಿರೇಮಠ, ಭಗತ್ ಸಿಂಗ್ ಸಂಸ್ಥೆಯ ಅಧ್ಯಕ್ಷ ವಜೀರ ಅಲಿ ಗೋನಾಳ ನೆರವಿನ ಹಸ್ತ ಚಾಚಿದ್ದಾರೆ. ದಾನಿಗಳು ನೀಡಿದ ತಾತ್ಕಾಲಿಕ ನೆರವಿನಿಂದಾಗಿ ಫಾತಿಮಾ ಹಾಗೂ ತಾಯಿಯನ್ನು ಬಾಡಿಗೆ ಮನೆ ಸೇರಿಸಲಾಗಿದೆ ಎಂದು ಬಸ್ ನಿಲ್ದಾಣದ ಹಮಾಲಿ ದುರುಗಪ್ಪ ತಿಳಿಸಿದ್ದಾರೆ.


    ಬಸ್ ನಿಲ್ದಾಣದಲ್ಲಿ ನಿರ್ಗತಿಕ ಕುಟುಂಬ ವಾಸವಿರುವ ವಿಷಯ ಗಮನಕ್ಕಿಲ್ಲ. ಪುರಸಭೆ ಮುಖ್ಯಾಧಿಕಾರಿಯೊಂದಿಗೆ ಚರ್ಚಿಸಿ ಸೂರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ವೃದ್ಧೆಗೆ ಮಾಸಾಶನ ಮಂಜೂರಾಗಿರುವ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
    ರಾಘವೇಂಧ್ರರಾವ್, ತಹಸೀಲ್ದಾರ್ ಕುಷ್ಟಗಿ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts