ಕುಶಾಲನಗರ: ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಕಾಯಕಲ್ಪ ನೀಡಲು ಕೈಜೋಡಿಸಿದ ದಾನಿಗಳನ್ನು ಶುಕ್ರವಾರ ಆಸ್ಪತ್ರೆ ಆವರಣದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಅನುದಾನದಿಂದ ಆಸ್ಪತ್ರೆ ಆವರಣಕ್ಕೆ ಇಂಟರ್‌ಲಾಕ್ ಟೈಲ್ಸ್ ಹಾಕಿಸಲಾಗಿದೆ. ಹೊರ ರೋಗಿಗಳು ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ಟಿವಿಯನ್ನು ಬಿಎಸ್‌ಆರ್ ಸಂಸ್ಥೆಯ ಜಗದೀಶ್ ನೀಡಿದ್ದಾರೆ. ಆರ್ಯ ವೈಶ್ಯ ಮಂಡಳಿಯಿಂದ 50 ಸಾವಿರ ರೂ.ಮೌಲ್ಯದ ಕುರ್ಚಿಗಳನ್ನು ನೀಡಲಾಗಿದೆ. ಕನ್ನಿಕಾ ಸಹಕಾರ ಸಂಘದಿಂದ ಆಸ್ಪತ್ರೆ ಆವರಣದಲ್ಲಿ 3 ಲಕ್ಷ ರೂ.ವೆಚ್ಚದಲ್ಲಿ ಹೂತೋಟ ನಿರ್ಮಾಣ ಮಾಡಿದ್ದಾರೆ ಎಂದು ದಾನಿಗಳ ಕಾರ್ಯವನ್ನು ಸ್ಮರಿಸಲಾಯಿತು.
ಜಿಪಂ ಮಾಜಿ ಅಧ್ಯಕ್ಷ ವಿ.ಎಂ.ವಿಜಯ ಮಾತನಾಡಿ, ಕುಶಾಲನಗರ ಆಸ್ಪತ್ರೆ ಯಾವುದೇ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲ ಎಂದು ಶ್ಲಾಘಿಸಿದರಲ್ಲದೆ, ಸರ್ಕಾರದ ಅನುದಾನ ಬಳಸಿಕೊಂಡು ಇನ್ನು ಹೆಚ್ಚು ಅಭಿವೃದ್ಧಿಯಾಗಬೇಕೆಂದರು.
ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ಮಾತನಾಡಿ, ಕುಶಾಲನಗರ ತಾಲೂಕು ಘೋಷಣೆ ಆಗಿರುವುದರಿಂದ ನೂತನ ತಾಲೂಕಿಗೆ ಅನುದಾನ ಬಿಡುಗಡೆಯಾದಾಗ ಈ ಆಸ್ಪತ್ರೆ 100 ಹಾಸಿಗೆಗಳ ತಾಲೂಕು ಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಲಿದೆ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಸದಸ್ಯ ಬಿ.ಅಮೃತರಾಜ್, ಜಿ ಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿದರು.
ಜಿಪಂ ಸದಸ್ಯರಾದ ಕೆ.ಪಿ.ಚಂದ್ರಕಲಾ, ಶ್ರೀನಿವಾಸ್, ಮಂಜುಳಾ, ತಾಪಂ ಅಧ್ಯಕ್ಷೆ ಪುಷ್ಪಾವತಿ, ಪಪಂ ಮುಖ್ಯಾಧಿಕಾರಿ ಸುಜಯ್ ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್, ವೈದ್ಯರಾದ ಡಾ.ಆನಂದ, ಡಾ.ಅಂಜಲಿ, ಡಾ.ಮಧುಸೂದನ್, ಹಿರಿಯರಾದ ಎಸ್.ಎನ್.ನರಸಿಂಹಮೂರ್ತಿ, ಸಿಬ್ಬಂದಿ ಬಿ.ನಟರಾಜ್, ಬಾಲಸುಬ್ರಹ್ಮಣ್ಯಂ, ಸ್ಟುಡಿಯೋ ಬಾಬು, ಅನಿಲ್, ಸುರೇಶ್ ಬಾಬು, ಎಸ್.ಎನ್.ನಾಗೇಂದ್ರ ಮತ್ತಿತರರಿದ್ದರು.