More

    ಕೃಷಿ ಆಸಕ್ತ ಪರಿಶಿಷ್ಟ ಕುಟುಂಬಕ್ಕೆ ಸಿಕ್ಕಿಲ್ಲ ಸರ್ಕಾರಿ ಸವಲತ್ತು

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಪರಿಶಿಷ್ಟ ಜಾತಿಗೆ ಸೇರಿದ ಹಕ್ಲಾಡಿ ಗುಡ್ಡೆ ಹಿರಿಯ ನಾಗರಿಕ ಜಿ.ಎಚ್. ನಾರಾಯಣ(70) ಮತ್ತು ಪತ್ನಿ ಚಂದು (60) ಜೀವನೋಪಾಯಕ್ಕಾಗಿ ಮಾಡಿದ ಕೃಷಿ ಹೊಟ್ಟೆ ತುಂಬುವ ಬದಲು ನಿತ್ಯದ ಬದುಕನ್ನೇ ಕಿತ್ತುಕೊಳ್ಳುತ್ತಿದೆ. ತಮ್ಮ ಜಮೀನಿನಲ್ಲಿ ನೆಟ್ಟ 80 ತೆಂಗು ಮತ್ತು 60 ಅಡಕೆ ಗಿಡ ಫಸಲು ನೀಡುವ ಹಂತದಲ್ಲಿದ್ದು, ನೀರಿನ ಅಭಾವದಿಂದ ಕೃಷಿ ಉಳಿಸಿಕೊಳ್ಳಲು ಪತಿ ಹಾಗೂ ಪತ್ನಿ ಸಮೀಪದ ಸಾರ್ವಜನಿಕ ಕೊಳವೆ ಬಾವಿಯಿಂದ ನಿತ್ಯ ನೀರು ತಂದು ಸುರಿಯುವುದು ಅನಿವಾರ್ಯವಾಗಿದೆ.

    ಕಷ್ಟಪಟ್ಟು ಕೂಲಿಯಿಂದ ಉಳಿಸಿದ ಹಣದಲ್ಲಿ ಮಾಡಿದ ಕೃಷಿ ಉಳಿಸಲು ಹರಸಾಹಸ ಪಡುವಂತಾಗಿದೆ. ಡಾಂಬರು ಕೆಲಸಕ್ಕೆ ಹೋಗುತ್ತಿದ್ದ ನಾರಾಯಣ ಕೆಲಸ ಬಿಟ್ಟಿದ್ದು, ಜೀವನೋಪಾಯಕ್ಕೆ ಮನೆ ಬಳಿ ಸಣ್ಣದೊಂದು ಗೂಡಂಗಡಿ ಇಟ್ಟಿದ್ದಾರೆ. ಪತ್ನಿ ಮಳಿ ಆಯುವ ಕೆಲಸ ಬಿಟ್ಟು ಅಡಕೆ, ತೆಂಗಿನ ಮರಗಳಿಗೆ ನೀರುಣಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

    ಬಾವಿಯಲ್ಲಿ ಆರಂಭದಲ್ಲಿ ತೆಂಗು, ಅಡಕೆಗೆ ಸಾಕಾಗುವಷ್ಟು ನೀರು ಸಿಗುತ್ತಿತ್ತು. ಶೇಡಿ ಮಣ್ಣು ಬಂದಿದ್ದರಿಂದ ಬಾವಿ ಜರಿದು ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಪ್ರಸಕ್ತ ಫೆಬ್ರವರಿ ಮೊದಲ ವಾರದಲ್ಲಿಯೇ ನೀರು ತಳ ಸೇರಿದೆ. ಆದುದರಿಂದ ಕೊಳವೆ ಬಾವಿಯಿಂದ ನೀರು ಹೊತ್ತು ಗಿಡಗಳಿಗೆ ಹುಯ್ಯಬೇಕಿದೆ.
    ಸರ್ಕಾರ ಪರಿಶಿಷ್ಟ ಜಾತಿ, ಪಂಗಡ ಕುಟುಂಬಗಳಿಗೆ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ಯೋಜನೆ, ಸಹಾಯ ಜಾರಿಗೆ ತಂದರೂ ಆಸಕ್ತ ಕೃಷಿಕರಿಗೆ ಪ್ರಯೋಜನ ಸಿಗುತ್ತಿಲ್ಲ. ಸಬ್ಸಿಡಿ ಮೂಲಕ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಬಾವಿಗೆ ಸಾಲ ಸೌಲಭ್ಯವಿದ್ದರೂ ಅದು ಉಳ್ಳವರ ಪಾಲು.

    ಬೇರೆ ಕಡೆಯಿಂದ ಪ್ರತಿದಿನ ನೀರೆತ್ತಿ ಉಣಿಸಿದರೂ ತಂಗಿನ ಹೆಡೆ ಬಾಡುತ್ತಿರುವುದು, ಅಡಕೆ ಸೊರಗುವುದನ್ನು ಕಂಡು ಮನಸ್ಸಿಗೆ ಹಚ್ಚಿಕೊಂಡು ಚಂದು ಆರೋಗ್ಯ ಹಾಳು ಮಾಡಿಕೊಂಡಿದ್ದರು. ನಿರಂತರ ಚಿಕಿತ್ಸೆ ಮೂಲಕ ಚೇತರಿಸಿಕೊಂಡು ಈಗ ಮತ್ತೆ ನೀರು ಸಾಗಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

    ಬಾವಿಯಲ್ಲಿ ಆರಂಭದಲ್ಲಿ ಸಾಕಷ್ಟು ನೀರು ಸಿಗುತ್ತಿದ್ದು, ಕಾಲಾಂತರದಲ್ಲಿ ಬಾವಿಯಲ್ಲಿ ಶೇಡಿ ಮಣ್ಣಿದ್ದರಿಂದ ಕುಸಿದಿದೆ. ಗಂಗಾಗಲ್ಯಾಣ ಯೋಜನೆಯಲ್ಲಿ ಕೊಳವೆಬಾವಿಗೆ ಅರ್ಜಿ ಹಾಕಿದರೂ ನಮಗೆ ಸಿಕ್ಕಿಲ್ಲ. ಬಾವಿ ದುರಸ್ತಿಗೂ ಹಣ ಸಿಕ್ಕಿಲ್ಲ. ಬಾವಿಯಲ್ಲಿ ನೀರು ಬತ್ತುವುದರಿಂದ ಮಾಡಿದ ಕೃಷಿ ಹಾಳಾಗದಂತೆ ಮಳೆಗಾಲದ ತನಕ ಅಡಕೆ, ತೆಂಗಿನ ಮರದ ಜೀವ ಉಳಿಸಿಕೊಳ್ಳಲು ಕೊಳವೆ ಬಾವಿಯಿಂದ ಪತ್ನಿ ನೀರು ತಂದು ಹಾಕುವ ಕೆಲಸ ಪ್ರತಿದಿನ ಮಾಡುತ್ತಾಳೆ. ಕೊಳವೆ ಬಾವಿ ಅಥವಾ ಬಾವಿ ದುರಸ್ತಿಗೆ ಸಹಕಾರ ನೀಡಿದರೆ ಕೃಷಿ ಉಳಿಸಿಕೊಳ್ಳಲು ಸಾಧ್ಯ.
    ಜಿ.ಎಚ್. ನಾರಾಯಣ, ಹಕ್ಲಾಡಿಗುಡ್ಡೆ

    ಒಂದು ಎಕರೆಗೂ ಮಿಕ್ಕ ಜಾಗವಿದ್ದರೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಗಂಗಾ ಕಲ್ಯಾಣ ಯೋಜನೆಯಲ್ಲಿ ಬಾವಿಗೆ 2.50 ಲಕ್ಷ ರೂಪಾಯಿವರೆಗೆ ಸಾಲ ಸಿಗುತ್ತಿದ್ದು, ಕಡಿಮೆ ಬಡ್ಡಿ ಹಾಗೂ ಸಬ್ಸಿಡಿ ಸಿಗುತ್ತದೆ. ಫಲಾನುಭವಿ ಕುಟುಂಬ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಸಲ್ಲಿಸಿದರೆ ಸಾಲ ಸೌಲಭ್ಯಕ್ಕೆ ಸಹಕಾರ ನೀಡಲಾಗುತ್ತದೆ. ಮೂಲ ನಿವಾಸಿಗಳಿಗೆ ಐಟಿಡಿಪಿಯಲ್ಲಿ ಮನೆ ಸೌಲಭ್ಯವಿದ್ದು, ಪರಿಶಿಷ್ಟರು ಸಂಬಂಧಪಟ್ಟ ಗ್ರಾಪಂ ಮೂಲಕ ಮನೆಗೆ ಸಹಾಯ ಪಡೆಯಲು ಸಾಧ್ಯವಿದ್ದು, ಎಸ್‌ಸಿ ಜನರಿಗೆ ಮನೆ ದುರಸ್ತಿಗೆ ಗ್ರಾಪಂ ಅನುದಾನ ನೀಡುತ್ತಿದ್ದು, ಅದರಿಂದ ಮನೆ ಸಂಪೂರ್ಣ ಮಾಡಲಾಗುವುದಿಲ್ಲ.
    ವಿಶ್ವನಾಥ ಶೆಟ್ಟಿ, ಐಟಿಡಿಪಿ ಅಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts