More

    ಸಂತೆಗೆ ಸಮಸ್ಯೆ ಸುಂಕ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಸಾಮಗ್ರಿ ಹರಡಿ ವ್ಯಾಪಾರ ಮಾಡುವುದರಿಂದ ರಸ್ತೆ ಅಸ್ತವ್ಯಸ್ಥ… ಮಳೆಗಾಲದಲ್ಲಿ ಮಾರುಕಟ್ಟೆಯಲ್ಲಿ ಮೊಣಕಾಲು ತನಕ ನೀರು… ಕುಡಿಯಲು ಶುದ್ಧ ನೀರು ಸಿಗದು… ಬಾಯಿ ತೆರೆದ ಗಟಾರಕ್ಕೆ ಬಿದ್ದರೆ ಆಸ್ಪತ್ರೆಗೆ ದಾಖಲಾಗಬೇಕಾದ ಸ್ಥಿತಿ… ಇದು ಉಡುಪಿ ಜಿಲ್ಲೆಯ ಅತಿ ದೊಡ್ಡ ಕುಂದಾಪುರದ ಶನಿವಾರ ಸಂತೆಯ ವ್ಯಥೆ. ಕುಂದಾಪುರ ಸಂತೆಗೆ ಬೇರೆ ಜಿಲ್ಲೆಗಳಿಂದ, ಗ್ರಾಮೀಣ ಭಾಗದಿಂದ ಬಂದವರು ವಹಿವಾಟು ನಡೆಸುತ್ತಾರೆ. ಐದು ಸಾವಿರಕ್ಕೂ ಅಧಿಕ ಗ್ರಾಹಕರು ಬರುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ಇಲ್ಲಿ ಶೌಚಗೃಹವಿಲ್ಲ. ಸಂತೆ ಮಾರುಕಟ್ಟೆ ಮೂಲೆಯಲ್ಲಿದ್ದು, ವ್ಯಾಪಾರಸ್ಥರಿಗೂ ಅನುಕೂಲವಾಗಿಲ್ಲ. ರಸ್ತೆ ಹೊಂಡಗುಂಡಿಯಿಂದ ಕೂಡಿದ್ದು ಅಲ್ಲೇ ಪಾರ್ಕಿಂಗ್, ವ್ಯಾಪಾರಸ್ಥರ ಅಂಗಡಿ ತೆರೆಯುವುದರಿಂದ ಸಂಚಾರಕ್ಕೆ ಹೆಣಗಾಡಬೇಕು. ಸಂತೆಯಲ್ಲಿ 150ಕ್ಕೂ ಅಧಿಕ ಅಂಗಡಿ ತೆರೆದುಕೊಳ್ಳುತ್ತದೆ. ಹೈವೇ ತಡೆಬೇಲಿ ಒಂದು ಕಡೆ ತೆರವು ಮಾಡಿ, ಅದಕ್ಕೆ ಗೇಟ್ ಅಳವಡಿಸಿ, ಸಂತೆ ದಿನ ಮಾತ್ರ ತೆರೆದು ಉಳಿದ ದಿನ ಬೀಗ ಹಾಕುವ ವ್ಯವಸ್ಥೆ ಮಾಡಿದರೆ ಉತ್ತಮ ಎಂಬುದು ವ್ಯಾಪಾರಸ್ಥರ ಅಭಿಪ್ರಾಯ. ಸಂತೆ ಮೈದಾನದ ರಸ್ತೆ ದುರಸ್ತಿಗೆ ಟೆಂಡರ್ ಆಗಿದ್ದು, ತಕ್ಷಣ ಕಾಮಗಾರಿ ಅರಂಭಿಸಲಾಗುತ್ತದೆ. ಎನ್‌ಎಚ್ ರಸ್ತೆ ವಿಸ್ತರಣೆ ಸಮಸ್ಯೆ ಪರಿಹಾರಕ್ಕೆ ರಸ್ತೆ ಗುತ್ತಿಗೆ ಪಡೆದವರ ಜತೆ ಮಾತುಕತೆ ನಡೆಸಿ, ಸರ್ವೀಸ್ ರಸ್ತೆ ಹಾಗೂ ಕಬ್ಬಿಣದ ಸ್ಕೈವಾಕ್ ನಿರ್ಮಾಣಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ. ಸರ್ವೀಸ್ ರಸ್ತೆಯಲ್ಲಿ ಬಸ್ ಸಂಚಾರ ಆರಂಭವಾಗಲಿದ್ದು, ಸಂತೆ ಬಳಿ ಬಸ್ ನಿಲ್ದಾಣ ನಿರ್ಮಿಸಿ ಸಂತೆಗೆ ಬರುವವರಿಗೆ ಅನುಕೂಲ ಮಾಡಿ ಕೊಡಲಾಗುತ್ತದೆ ಎಂದು ಎಪಿಎಂಸಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

    ಗ್ರಾಹಕರ ಸಂಖ್ಯೆ ಇಳಿಮುಖ
    ಹಿಂದೆ ಹೊಸ ಬಸ್ ನಿಲ್ದಾಣದಲ್ಲಿ ಸಂತೆ ನಡೆಯುತ್ತಿದ್ದು, ಜಾಗದ ಇಕ್ಕಟ್ಟು ಹಾಗೂ ಬಸ್ ನಿಲ್ದಾಣದ ಹಿನ್ನೆಲೆಯಲ್ಲಿ ಸಂತೆ ಎಪಿಎಂಸಿ ಯಾರ್ಡಿಗೆ ಸ್ಥಳಾಂತರವಾಗಿದೆ. ಹಿಂದೆ ಪುರಸಭೆಯೇ ಸಂತೆ ನಿರ್ವಹಿಸುತ್ತಿತ್ತು. ಎಪಿಎಂಸಿ ಯಾರ್ಡಿಗೆ ಸ್ಥಳಾಂತರ ನಂತರ ಎಂಪಿಎಂಸಿ ನೋಡಿಕೊಳ್ಳುತ್ತಿದ್ದು, ಸಂತೆ ತ್ಯಾಜ್ಯ ಇನ್ನಿತರ ನಿರ್ವಹಣೆಗೆ ಪುರಸಭೆಗೆ ಎಪಿಎಂಸಿ 90 ಸಾವಿರ ರೂ. ಕೊಡುತ್ತಿದೆ. ಸಂತೆ ನಿರ್ವಹಣೆಗೆ ಎಪಿಎಂಸಿ ಸಂಗ್ರಹಿಸುವ ನಿರ್ವಹಣಾ ಶುಲ್ಕ 60 ಸಾವಿರ..ರೂ.! ಈ ಸಮಸ್ಯೆಗಳ ಮಧ್ಯೆ ಹೈವೇ ವಿಸ್ತರಣೆ ಸಂತೆಗೆ ಬರುವ ವ್ಯಾಪಾರಸ್ಥರು, ಹಾಗೂ ಗ್ರಾಹಕರ ಸಂಖ್ಯೆಯಲ್ಲಿ ಶೇ.10ರಷ್ಟು ಕಡಿತಗೊಳಿಸಿದೆ.

    ಸಂತೆ ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು. ವಾಹನ ನಿಲುಗಡೆ ಮಾಡುವುದರಿಂದ ಜಾಗ ಇಕ್ಕಟ್ಟಾಗಿ ಸಮಸ್ಯೆ ಆಗುತ್ತಿದೆ. ಸಂತೆಯಲ್ಲಿರುವ ಗಟಾರಗಳನ್ನು ಮುಚ್ಚಬೇಕು. ಸುರಕ್ಷತೆಗಾಗಿ ಕಬ್ಬಿಣದ ಬೇಲಿ ನಿರ್ಮಿಸಿದ್ದು, ಇದರಿಂದ ವ್ಯಾಪಾರಕ್ಕೆ ಹಿನ್ನಡೆಯಾಗಿದ್ದು, ಸ್ಕೈವಾಕ್ ಮಾಡಿದರೆ ಉತ್ತಮ.
    ರಾಘವೇಂದ್ರ ಪ್ರಭು, ವ್ಯಾಪಾರಿ

    ಬಳೆ ಮಾರಾಟ ಶೆಡ್ ಸೀಟ್ ಒಡೆದಿದ್ದರಿಂದ ಮಳೆಗಾಲದಲ್ಲಿ ನೀರು ಒಳಗೆ ಬಂದರೆ ವ್ಯಾಪಾರ ಕಷ್ಟವಾಗುತ್ತದೆ. ಮಳೆಗಾದಲ್ಲಿ ಸಂತೆ ಒಳಗೆ ಮೊಣಕಾಲ ತನಕ ನೀರಿರುತ್ತದೆ. ಸೋರುವ ಮಾಡು, ದುರಸ್ತಿ ಜತೆ, ಮಳೆಗಾಲದಲ್ಲಿ ನೀರು ಸರಾಗ ಹೋಗುವಂತೆ ವ್ಯವಸ್ಥೆ ಮಾಡಬೇಕು. ಸಂತೆ ಸ್ಥಳದಿಂದ ಶೌಚಗೃಹ ದೂರವಿದ್ದು, ಸಂತೆಗೆ ಬರುವವರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಸಂತೆ ಬಳಿಯಲ್ಲೇ ಶೌಚಗೃಹ ಮಾಡಿಕೊಟ್ಟರೆ ಉತ್ತಮ.
    ಜ್ಯೋತಿ, ಬಳೆ ವ್ಯಾಪಾರಿ ಮಹಿಳೆ

    ಸಂತೆಯಿಂದ ನಮಗೆ ತಿಂಗಳಿಗೆ 50ರಿಂದ 60 ಸಾವಿರ ಸುಂಕ ಸಂಗ್ರಹ ಆಗುತ್ತದೆ. ಆದರೆ ನಾವು ಪುರಸಭೆಗೆ 98 ಸಾವಿರ ರೂ. ಕಸ ವಿಲೇವಾರಿಗೆ ಕಟ್ಟುತ್ತ್ತಿದ್ದೇವೆ. 25 ಲಕ್ಷ ರೂ. ವೆಚ್ಚದಲ್ಲಿ ಹೆಚ್ಚುವರಿ ಶೌಚಗೃಹ ನಿರ್ಮಿಸಲಾಗುತ್ತದೆ. ಸಣ್ಣ ವ್ಯಾಪಾರಸ್ಥರು, ರೈತರಿಗೆ, ತಲೆ ಹೊರೆಯವರಿಗೆ ಸಂತೆ ಸುಂಕ ಸಂಗ್ರಹ ಮಾಡುವುದಿಲ್ಲ. ಸಂತೆ ಪಾರ್ಕಿಂಗ್ ಬದಲಿ ವ್ಯವಸ್ಥೆಗೆ ಸಿದ್ಧತೆ ಮಾಡುತ್ತಿದ್ದು, ಮುಂದಿನ ವಾರ ಪಾರ್ಕಿಂಗ್ ವ್ಯವಸ್ಥೆ ಆಗುತ್ತದೆ.
    ಶರತ್‌ಕುಮಾರ್ ಶೆಟ್ಟಿ, ಅಧ್ಯಕ್ಷ, ಎಪಿಎಂಸಿ, ಕುಂದಾಪುರ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts