More

    ಕುಂದಗನ್ನಡ ಜಿಲ್ಲೆ ಬೇಡಿಕೆಗೆ ಮರುಜೀವ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಸಚಿವ ಆನಂದ ಸಿಂಗ್ ಪ್ರಬಲ ಒತ್ತಾಸೆಗೆ ರಾಜ್ಯದಲ್ಲಿ 31ನೇ ಜಿಲ್ಲೆ ಅಸ್ತಿತ್ವಕ್ಕೆ ಬಂದಿರುವ ಮಧ್ಯೆಯೇ ಶಿರಸಿ, ಗೋಕಾಕ, ಅಥಣಿ, ಚಿಕ್ಕೋಡಿ ಜಿಲ್ಲೆಗಳ ರಚನೆ ಬೇಡಿಕೆ ಸದ್ದು ಮಾಡುತ್ತಿದೆ. ಇದರ ಜತೆಗೆ ಕುಂದಾಪುರದಲ್ಲಿ ಕುಂದಗನ್ನಡ ಜಿಲ್ಲೆ ರಚನೆಗೆ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
    ಕುಂದಗನ್ನಡ ಜಿಲ್ಲೆ ಹೋರಾಟ ಬಹಳ ಹಿಂದಿನದು. ಉಡುಪಿ ಜಿಲ್ಲೆ ರಚನೆಗೂ ಮೊದಲು ಕುಂದಗನ್ನಡ ಜಿಲ್ಲೆ ರಚನೆಗೆ ಜನ ಒತ್ತಾಯಿಸುತ್ತಿದ್ದರು. ಸರ್ಕಾರದ ಮಟ್ಟಕ್ಕೆ ಈ ಹೋರಾಟದ ಧ್ವನಿ ಮುಟ್ಟಿಸಲು ವಿಫಲವಾಗಿದ್ದರಿಂದ ಸ್ವಲ್ಪ ಹಿನ್ನಡೆಯಾಗಿದ್ದರೂ ಈಗ ಮತ್ತೆ ಪ್ರಬಲ ಸ್ವರ ಹೊರಬರುತ್ತಿದೆ. ಜಿಲ್ಲೆ ರಚನೆಯ ಅನಿವಾರ್ಯತೆ, ಆಗುವ ಪ್ರಯೋಜನ ಕುರಿತು ಹೋರಾಟ ಸಮಿತಿ ತಳಮಟ್ಟದಿಂದ ಹಿಡಿದು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದು, ಹೋರಾಟ ಕಾವು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಮಾಜಿ ಶಾಸಕರು, ಪ್ರಮುಖ ಮುಖಂಡರ ಸೇರ್ಪಡೆಯಿಂದ ಹೋರಾಟ ಸಮಿತಿ ದಿನಗಳೆದಂತೆ ಬಲ ಹೆಚ್ಚಿಸಿಕೊಳ್ಳುತ್ತಿದೆ.

    ಬೊಬ್ಬುಕುದ್ರಲ್ಲಿ ಜಿಲ್ಲಾಧಿಕಾರಿ ಕಚೇರಿ: ನದಿ ಹಾಗೂ ಸಮುದ್ರ ತೀರದ ಬೊಬ್ಬುಕುದ್ರು ಪ್ರವಾಸೋದ್ಯಮಕ್ಕೆ ಉತ್ತಮ ಸ್ಥಳ. ಇಲ್ಲಿಗೆ ಸೇತುವೆ ರಚಿಸಿ ಅಭಿವೃದ್ಧಿ ಮಾಡುವಂತೆ ಜನರ ಅಹವಾಲು ಬಹಳ ಹಿಂದಿನಿಂದಲೇ ಇದೆ. 28 ಎಕರೆ ವಿಶಾಲ ಪ್ರದೇಶದ ಬೊಬ್ಬುಕುದ್ರಲ್ಲಿ ಕುಂದಗನ್ನಡ ಜಿಲ್ಲಾಧಿಕಾರಿ ಕಚೇರಿ ರಚನೆ ಮಾಡಿದರೆ ಅದ್ಭುತ ತಾಣವಾಗಲಿದೆ ಎಂಬ ಅಭಿಪ್ರಾಯಗಳಿವೆ.

    ಯಾವ್ಯಾವ ತಾಲೂಕು ಸೇರ್ಪಡೆ?
    ಭಟ್ಕಳ, ಬೈಂದೂರು, ಕುಂದಾಪುರ, ಪ್ರಸ್ತಾವಿತ ಶಂಕರನಾರಾಯಣ ಹಾಗೂ ಹೆಬ್ರಿ ತಾಲೂಕಿನ ಕೆಲವು ಭಾಗ ಸೇರಿಸಿಕೊಂಡು ಜಿಲ್ಲೆ ರಚನೆ ಮಾಡಬೇಕು ಎಂಬುದು ಸದ್ಯದ ಬೇಡಿಕೆ. ಶಿರೂರಿಂದ ಮಡಾಮಕ್ಕಿ ತನಕದ 94 ಕಿ.ಮೀ. ಉದ್ದದ ತಾಲೂಕು ಕುಂದಾಪುರ. ಭಟ್ಕಳ ಸೇರಿಸಿಕೊಂಡು ಜಿಲ್ಲೆ ರಚನೆಯಾದರೆ ಒಟ್ಟು ಜನಸಂಖ್ಯೆ 10 ಲಕ್ಷ (ಈಗಿನ ಲೆಕ್ಕಾಚಾರ) ಮೀರಲಿದ್ದು, ಜಿಲ್ಲೆಗೆ 100ಕ್ಕೂ ಹೆಚ್ಚು ಗ್ರಾಮಗಳು ಸೇರಬಹುದು.

    ಅಭಿವೃದ್ಧಿಗೆ ವೇಗ ನಿರೀಕ್ಷೆ: ಉಡುಪಿ ಜಿಲ್ಲೆಯಲ್ಲಿ ಒಟ್ಟು 153 ಗ್ರಾಮ ಪಂಚಾಯಿತಿಗಳಿದ್ದು, 3582 ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ಜಿಲ್ಲೆಯನ್ನು ವಿಭಜನೆ ಮಾಡುವುದರಿಂದ ಆಡಳಿತಾತ್ಮಕವಾಗಿ ಅನುಕೂಲ ಎನ್ನುವುದು ವಾದ. ಉತ್ತರ ಕನ್ನಡ ಗಡಿ, ಶಿವಮೊಗ್ಗ ಗಡಿ, ಘಾಟಿ ಪ್ರದೇಶದ ಗ್ರಾಮಗಳು ಜಿಲ್ಲಾ ಕೇಂದ್ರದಿಂದ ನೂರಾರು ಕಿ.ಮೀ. ದೂರದಲ್ಲಿವೆ. ಜಿಲ್ಲೆಯ ಕಟ್ಟ ಕಡೆ ಗ್ರಾಮ ನಿವಾಸಿಗಳು ಉಡುಪಿಗೆ ಬಂದು ತಮ್ಮ ಕೆಲಸ ಕಾರ‌್ಯ ಮಾಡಿಕೊಳ್ಳುವುದು ಸಮಯ ಮತ್ತು ಆರ್ಥಿಕ ಹೊರೆ. ಇನ್ನು 65 ಗ್ರಾಮಗಳ ಕುಂದಾಪುರ ಅತಿ ಹೆಚ್ಚು ವಿಸ್ತೀರ್ಣ ಹೊಂದಿದ ತಾಲೂಕು. ಅತ್ಯಂತ ಕುಗ್ರಾಮಗಳಿದ್ದು, ಮೂಲ ಸಮಸ್ಯೆಯಿಂದ ಮುಕ್ತವಾಗಿಲ್ಲ. ಅತಿ ಹೆಚ್ಚು ನಕ್ಸಲ್ ಸಮಸ್ಯೆ ಎದುರಿಸುತ್ತಿರುವುದು ಕುಂದಾಪುರ ಹಾಗೂ ಬೈಂದೂರು. ಕುಂದಗನ್ನಡ ಜಿಲ್ಲೆಯಾದರೆ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎನ್ನುವುದು ಲೆಕ್ಕಾಚಾರ.

    ಭಟ್ಕಳಕ್ಕೆ ಶಿರಸಿ ದೂರ: ಶಿರಸಿ ಜಿಲ್ಲೆ ರಚನೆ ಹೋರಾಟ ಜೋರಾಗಿದೆ. ಹೊಸ ಜಿಲ್ಲೆಯಾದರೆ ಭಟ್ಕಳವನ್ನು ಅದಕ್ಕೆ ಸೇರಿಸಬೇಕೆಂಬುದು ಲೆಕ್ಕಾಚಾರ. ಶಿರಸಿ- ಭಟ್ಕಳ ನಡುವೆ 140 ಕಿ.ಮೀ. ಅಂತರವಿದೆ. ಶಿರಸಿ ಜಿಲ್ಲೆಗೆ ಭಟ್ಕಳ ಸೇರಿಸಿದರೆ ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಗುತ್ತದೆ. ಶಿರಸಿಗೆ ಸೇರುವುದಕ್ಕಿಂತ ಉತ್ತರ ಕನ್ನಡ ಜಿಲ್ಲೆಯಲ್ಲಿ ಉಳಿಯುವುದು ಉತ್ತಮ ಎನ್ನುವ ಅಭಿಪ್ರಾಯವಿದೆ. ನೂತನ ಜಿಲ್ಲೆಯಾಗಿ ಕುಂದಾಪುರ ರಚನೆಯಾದರೆ ಹೊಸ ಜಿಲ್ಲೆಗೆ ಭಟ್ಕಳ ಸೇರುವುದಕ್ಕೆ ಹೆಚ್ಚಿನ ವಿರೋಧವಿಲ್ಲ. ಭಟ್ಕಳ ಕ್ಷೇತ್ರದ ಜನಪ್ರತಿನಿಧಿಗಳಿಗೂ ಕುಂದಾಪುರ ಜಿಲ್ಲೆಗೆ ಭಟ್ಕಳ ಸೇರುವುದಕ್ಕೆ ಸಹಮತ ಹೊಂದಿದ್ದಾರೆ.

    ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಗಟ್ಟಿ ಧ್ವನಿ ಎತ್ತಿದರೆ ಕುಂದಗನ್ನಡ ಜಿಲ್ಲೆ ರಚನೆ ಕಷ್ಟವೇನೂ ಇಲ್ಲ. ಕುಂದಾಪುರ ಅಭಿವೃದ್ಧಿ ದೃಷ್ಟಿಯಲ್ಲಿ ಕುಂದಗನ್ನಡ ಜಿಲ್ಲೆ ರಚನೆ ಆಗುವವರೆಗೆ ನಮ್ಮ ಹೋರಾಟ ನಿಲ್ಲದು. ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ.
    -ಚಿಟ್ಟೆ ರಾಜಗೋಪಾಲ ಹೆಗ್ಡೆ, ವಿಶೇಷ ಸಲಹೆಗಾರ, ಕುಂದಗನ್ನಡ ಜಿಲ್ಲೆ ಹೋರಾಟ ಸಮಿತಿ

    ಬ್ರಿಟಿಷ್ ಕಾಲದಲ್ಲೇ ಎಲ್ಲ ಅಗತ್ಯ ಸರ್ಕಾರಿ ಕಚೇರಿಗಳು, ಜಿಲ್ಲಾ ಕೇಂದ್ರದ ಸೌಲಭ್ಯ ಕುಂದಾಪುರದಲ್ಲಿತ್ತು. ಇತ್ತೀಚೆಗೆ ಕೆಲವು ಕಚೇರಿಗಳು ಉಡುಪಿಗೆ ಸ್ಥಳಾಂತರವಾಗಿವೆ. ಪ್ರತಿಬಾರಿಯೂ ಇಲ್ಲಿಂದ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಸಚಿವ ಸ್ಥಾನ ನೀಡದೆ ಸರ್ಕಾರಗಳೂ ನಿರ್ಲಕ್ಷಿಸುತ್ತಿವೆ. ಇದೇ ಕಾರಣಕ್ಕೆ ಕುಂದಾಪುರ ಜಿಲ್ಲೆ ಕುರಿತು ಧ್ವನಿ ಎತ್ತುವವರು ಇಲ್ಲದಂತಾಗಿದೆ.
    -ಮುಂಬಾರು ದಿನಕರ ಶೆಟ್ಟಿ, ಸಂಚಾಲಕ, ಕುಂದಾಪುರ ಜಿಲ್ಲಾ ಹೋರಾಟ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts