More

  ಕೂನಗಲ್ ಸರ್ಕಾರಿ ಪ್ರೌಢಶಾಲೆಗೆ ಬೇಕಿದೆ ಶೌಚಗೃಹ

  ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ: ಸುಂದರ ಪ್ರಕೃತಿ, ಕಾನನ, ಹಸಿರೇ ನಮ್ಮ ಉಸಿರು, ಸ್ವಚ್ಛ ಪರಿಸರ ನಮ್ಮೆಲ್ಲರ ಹೊಣೆೆ ಎಂದು ಮಕ್ಕಳಿಗೆ ಬೋಧನೆ ಮಾಡುವ ಶಾಲೆಯಲ್ಲಿಯೇ ಶೌಚಗೃಹವಿಲ್ಲದ ಪರಿಸ್ಥಿತಿ ಇದೆ.

  ರಾಮನಗರದಿಂದ 4 ಕಿ.ಮೀ ದೂರದಲ್ಲಿರುವ ಕೈಲಾಂಚ ಹೋಬಳಿ ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಯ ಕೂನಗಲ್ ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜಿನ ವಿದ್ಯಾರ್ಥಿಗಳು ಶೌಚಗೃಹವಿಲ್ಲದೆ ಪರದಾಡುತ್ತಿದ್ದಾರೆ.

  ಇತ್ತೀಚೆಗೆ ರಾಮನಗರ ಜಿಲ್ಲಾಡಳಿತ, ತಾಪಂ ಆರಂಭಿಸಿರುವ ಸ್ವಚ್ಛ ಶುಕ್ರವಾರ ಯೋಜನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಆದರೆ, ಈ ಶಾಲೆಯ ಸ್ಥಿತಿ ಯೋಜನೆಗೆ ವಿರುದ್ಧವಾದಂತಿದೆ. ಕೂನಗಲ್ ಶಾಲೆ ಸುಂದರ ಪ್ರಕೃತಿ ಮಡಿಲಲ್ಲಿದ್ದು, ಉತ್ತಮ ಕೊಠಡಿಗಳು, ವಿಶಾಲ ಆಟದ ಮೈದಾನ ಹೊಂದಿದೆ. ಪ್ರಥಮ ಮತ್ತು ದ್ವಿತೀಯ ಪಿಯು ಕಾಲೇಜಿನಲ್ಲಿ 60 ವಿದ್ಯಾರ್ಥಿಗಳಿದ್ದರೆ, ಪ್ರೌಢಶಾಲೆಯಲ್ಲಿ 60 ಹೆಣ್ಣು ಮಕ್ಕಳು, 40 ಗಂಡುಮಕ್ಕಳು ಸೇರಿ ಒಟ್ಟು 100 ವಿದ್ಯಾರ್ಥಿಗಳಿದ್ದಾರೆ. ಶಾಲೆಯಲ್ಲಿರುವ ಒಂದು ಶೌಚಗೃಹ ಹಳೆಯದಾಗಿದ್ದು, ಶಿಥಿಲಗೊಂಡಿದೆ. ವಿದ್ಯಾರ್ಥಿಗಳು ಶೌಚಕ್ಕಾಗಿ ಸುತ್ತಮುತ್ತಲ ಬಯಲನ್ನೇ ಆಶ್ರಯಿಸಿದ್ದಾರೆ. ಶಿಕ್ಷಕರಿಗೂ ಇದೇ ಸಮಸ್ಯೆ ಎದುರಾಗಿದೆ.

  ಪ್ರೌಢಶಾಲೆ ಆವರಣದಲ್ಲೇ ಪಿಯು ಕಾಲೇಜು ಇದ್ದು, ಕಾಲೇಜಿಗೆ ಶೌಚಗೃಹ ಇಲ್ಲ. ಹೀಗಾಗಿ ಇರುವ ಒಂದು ಶೌಚಗೃಹವನ್ನು ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಬಳಸಬೇಕಾಗಿದೆ. ಇದನ್ನು ಹೆಣ್ಣುಮಕ್ಕಳ ಬಳಕೆಗೆ ಮೀಸಲಿರಿಸಲಾಗಿದೆ. ಇಲ್ಲಿನ ವಾಸ್ತವ ಸ್ಥಿತಿ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆಯಲಾಗಿದೆ.
  ಶಶಿಕಲಾ ಮುಖ್ಯಶಿಕ್ಷಕಿ, ಕೂನಗಲ್, ಸರ್ಕಾರಿ ಪ್ರೌಢಶಾಲೆ

  ಗ್ರಾಮೀಣ ಮಟ್ಟದಲ್ಲಿ ಕಾಲೇಜು ಪ್ರಾರಂಭಿಸಿರುವ ಶಿಕ್ಷಣ ಇಲಾಖೆ ಮಕ್ಕಳಿಗೆ ಮೂಲಸೌಲಭ್ಯ ಒದಗಿಸಬೇಕು. ಸ್ಥಳೀಯ ಗ್ರಾಪಂ ಸಂಪೂರ್ಣ ಸಹಕಾರ ನೀಡಿದ್ದರೂ ಪದವಿಪೂರ್ವ ಶಿಕ್ಷಣ ಇಲಾಖೆ ಮಾತ್ರ ಶೌಚಗೃಹ ನಿರ್ಮಾಣಕ್ಕೆ ಮುಂದಾಗಿಲ್ಲ. ಇದು ಶಿಕ್ಷಣ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.
  ಗಾಣಕಲ್ ನಟರಾಜ್
  ಅಧ್ಯಕ್ಷ, ತಾಪಂ, ರಾಮನಗರ

  ಶಾಲೆಯ ಪಕ್ಕ ಬೆಟ್ಟಗುಡ್ಡದ ಬಯಲೇ ಶೌಚಗೃಹವಾಗಿದೆ. ಗ್ರಾಮಸಭೆ, ಶಿಕ್ಷಣ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಶೌಚಗೃಹದ ಅಗತ್ಯದ ಮನವರಿಕೆ ಮಾಡುತ್ತಲೇ ಇದ್ದರೂ ಸಮಸ್ಯೆ ಯಾರ ಅರಿವಿಗೂ ಬಂದಂತಿಲ್ಲ.
  ಮದನ್
  9ನೇ ತರಗತಿ ವಿದ್ಯಾರ್ಥಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts