ರಟ್ಟಿಹಳ್ಳಿ: ಕಳೆದ ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮದಿಂದಾಗಿ ತಾಲೂಕಿನ ರೈತರ ಜೀವನಾಡಿಯಾಗಿರುವ ಕುಮದ್ವತಿ ನದಿಯು ಮೈದುಂಬಿ ಹರಿಯುತ್ತಿದೆ.
ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ ಭರ್ತಿಯಾಗಿದೆ. ಈ ಜಲಾಶಯದಿಂದ ಹರಿಯುವ ನೀರು ತಾಲೂಕಿನ ಐತಿಹಾಸಿಕ ಮದಗದ ಕೆರೆಯ ಮೂಲಕ ಕೋಡಿಯಾಗಿ ಕುಮದ್ವತಿ ನದಿಗೆ ಸೇರುತ್ತದೆ. ಕುಮದ್ವತಿ ತಾಲೂಕಿನ ತಿಪ್ಪಾಯಿಕೊಪ್ಪ, ಮಾಸೂರು, ಹಿರೇಮೊರಬ, ಎಲಿವಾಳ, ರಟ್ಟಿಹಳ್ಳಿ, ಬಡಾಸಂಗಾಪುರ ಮೂಲಕ ರಾಣೆಬೆನ್ನೂರ ತಾಲೂಕಿನ ಮುದೇನೂರು ಗ್ರಾಮದ ಬಳಿ ತುಂಗಾಭದ್ರಾ ನದಿಗೆ ಸೇರುತ್ತದೆ. ಈ ನದಿಯಿಂದಾಗಿ ಈ ಭಾಗದಲ್ಲಿ ಸಾವಿರಾರು ಹೆಕ್ಟೇರ್ ಜಮೀನುಗಳಿಗೆ ಉಪಯುಕ್ತವಾಗಿದೆ.
4 ಬಾಂದಾರಗಳ ನಿರ್ಮಾಣ: ಕುಮದ್ವತಿ ನದಿ ಮಳೆಗಾಲದಲ್ಲಿ ಮೈದುಂಬಿ ಹರಿದು ಸುಮಾರು 4-5 ತಿಂಗಳಲ್ಲಿ ನೀರು ಬರಿದಾಗುತ್ತದೆ. ನದಿಯ ನೀರು ಸಂಗ್ರಹಿಸಲು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ 17 ಕೋಟಿ ರೂಪಾಯಿ ವೆಚ್ಚದಲ್ಲಿ ನದಿಯ 16 ಕಿ.ಮೀ. ವ್ಯಾಪ್ತಿಯಲ್ಲಿ ಮಾಸೂರು, ಹಿರೇಮೊರಬ, ರಟ್ಟಿಹಳ್ಳಿ ಮತ್ತು ಹಿರೇಮಾದಪುರ ಬಳಿ ಸೇತುವೆ ಸಹಿತ ಬಾಂದಾರ ನಿರ್ಮಾಣ ಮಾಡಲಾಗಿದೆ. ಈ ಬಾಂದಾರಗಳಿಗೆ ಮಳೆಗಾಲ ಮುಕ್ತಾಯದ ವೇಳೆ ಗೇಟ್‌ಗಳನ್ನು ಅಳವಡಿಸಿದರೆ, ನೀರು ಸಂಗ್ರಹವಾಗಿ ವರ್ಷಪೂರ್ತಿ ತಾಲೂಕಿನ ರೈತರಿಗೆ ಅನುಕೂಲವಾಗಲಿದೆ.
ಈಗಾಗಲೇ 3 ಕಡೆ ಸೇತುವೆ ಸಹಿತ ಬಾಂದಾರ ನಿರ್ಮಾಣ ಕಾಮಗಾರಿ ಮುಕ್ತಾಯವಾಗಿದೆ. ಹಿರೇಮಾದಪುರ ಬಳಿ ಕಾಮಗಾರಿ ಪ್ರಗತಿಯಲ್ಲಿದೆ. ಗೇಟ್‌ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳೆಗಾಲ ಮುಕ್ತಾಯದ ವೇಳೆಗೆ ಎಲ್ಲ ಬಾಂದಾರಗಳಿಗೆ ಗೇಟ್‌ಗಳನ್ನು ಅಳವಡಿಸಲಾಗುವುದು.
I ಮಂಜುನಾಥ ಬಡಿಗೇರ, ಸಹಾಯಕ ಇಂಜಿನಿಯರ್ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ಹಾನಗಲ್ಲ.