More

    ಅನೈತಿಕ ತಾಣವಾದ ಕುಮಾರವ್ಯಾಸ ಮೈದಾನ; ಮಂಟಪದ ಜಾಗದಲ್ಲಿ ವಾಹನ ನಿಲುಗಡೆ 

    |ಸತೀಶ್ ಕಂದಗಲ್​ಪುರ ಬೆಂಗಳೂರು

    ರಾಜಾಜಿನಗರದಲ್ಲಿರುವ ಕುಮಾರವ್ಯಾಸ ವೇದಮಂಟಪ ಉದ್ಯಾನ ಮತ್ತು ಆಟದ ಮೈದಾನವನ್ನು ಕಳೆದ 5 ವರ್ಷಗಳಿಂದ ಬಿಬಿಎಂಪಿ ನಿರ್ವಹಣೆ ಮತ್ತು ಅಭಿವೃದ್ಧಿ ಮಾಡದೆ ನಿರ್ಲಕ್ಷ್ಯವಹಿಸಿರುವುದರಿಂದ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ನಗರದಲ್ಲಿ 1,100ಕ್ಕೂ ಅಧಿಕ ಉದ್ಯಾನ ಹಾಗೂ 500ಕ್ಕೂ ಅಧಿಕ ಸಣ್ಣ ಪುಟ್ಟ ಮೈದಾನಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ವಾರ್ಷಿಕ ಕೋಟ್ಯಂತರ ರೂ.ಗಳನ್ನು ಪಾಲಿಕೆ ಖರ್ಚು ಮಾಡುತ್ತದೆ. ಆದರೆ, ಕೆಲ ಉದ್ಯಾನಗಳ ನಿರ್ವಹಣೆಯಲ್ಲಿ ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ.

    ರಾಜಾಜಿನಗರದ 4ನೇ ಬ್ಲಾಕ್​ನ 6ನೇ ಮುಖ್ಯ ರಸ್ತೆಯಲ್ಲಿರುವ ಕುಮಾರವ್ಯಾಸ ವೇದ ಮಂಟಪವು ಸಂಗೀತ, ವೇದಾಧ್ಯಯನ ಹಾಗೂ ಷಟ್ಪದಿಗಳನ್ನು ವಾಚನ ಮಾಡಲು ವೇದಿಕೆಯಾಗಿತ್ತು. ಜತೆಗೆ, ಪಕ್ಕದಲ್ಲಿರುವ ಮೈದಾನ ಸೇರಿ ವ್ಯಾಸ ಮಂಟಪದ ಮುಂಭಾಗ ಯೋಗಭ್ಯಾಸವನ್ನೂ ಮಾಡಲಾಗುತ್ತಿತ್ತು. ವಾಯುವಿಹಾರಿಗಳಿಗೂ ಅನುಕೂಲವಾಗಿತ್ತು. ಬಹು ಉಪಯೋಗಿ ಮೈದಾನವೀಗ ಪಾಲಿಕೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅನೈತಿಕ ಚಟುವಟಿಕೆ ತಾಣವಾಗುತ್ತಿದೆ.

    ಕಸದ ರಾಶಿ, ಕಾರುಗಳ ರ್ಪಾಂಗ್: ಕುಮಾರವ್ಯಾಸ ಮಂಟಪ ಮತ್ತು ಆಟದ ಮೈದಾನವಾಗಿ ಎರಡು ವಿಭಾಗ ಮಾಡಲಾಗಿದೆ. ಒಂದರಲ್ಲಿ ಶಟಲ್ ಬ್ಯಾಡ್ಮಿಂಟನ್ ಮೈದಾನ ನಿರ್ವಿುಸಲಾಗಿದೆ. ವ್ಯಾಸ ಮಂಟಪವಿದ್ದ ಸ್ಥಳದಲ್ಲಿ ಕಸ ಮತ್ತು ಕಟ್ಟಡ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಮೈದಾನದಲ್ಲಿ ಅಕ್ಕಪಕ್ಕದ ಕಾಲೇಜಿನ ವಿದ್ಯಾರ್ಥಿಗಳು ಆಟವಾಡುತ್ತಾರೆ. ಜತೆಗೆ, ಇಲ್ಲಿ ಹಾಕಲಾಗಿರುವ ಬೆಂಚ್​ಗಳಲ್ಲಿ ಕೆಲವರು ಮದ್ಯಪಾನ ಸೇವನೆ ಮಾಡಿ ಮಲಗಿರುತ್ತಾರೆ. ಇನ್ನೊಂದು ಭಾಗದಲ್ಲಿರುವ ಕಟ್ಟಡ ತ್ಯಾಜ್ಯ ಸುರಿದ ಸ್ಥಳದಲ್ಲಿ ಸಂಜೆ ಮತ್ತು ರಾತ್ರಿ ವೇಳೆ ಬೀಡಿ-ಸಿಗರೇಟ್ ಸೇವನೆ, ಮದ್ಯಪಾನ ಮಾಡುವುದು, ಗಾಂಜಾ ಸೇವನೆಯಂತಹ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಸುತ್ತಲಿನ ಜನರು ಮೈದಾನದೊಳಗೆ ತ್ಯಾಜ್ಯ ಬಿಸಾಡುತ್ತಿದ್ದಾರೆ. ಮತ್ತೊಂದೆಡೆ, ಖಾಲಿ ಜಾಗದಲ್ಲಿ ಕಾರುಗಳನ್ನು ನಿಲ್ಲಿಸಲಾಗುತ್ತಿದೆ.

    ಮುರಿದು ಬಿದ್ದ ಕಾಂಪೌಂಡ್: ಈ ಮೈದಾನದ ಸುತ್ತಲೂ ಹತ್ತು ವರ್ಷಗಳ ಹಿಂದೆ ಕಾಂಪೌಂಡ್ ನಿರ್ವಿುಸಿ ಅದರ ಮೇಲೆ ಕಬ್ಬಿಣದ ಜಾಲರಿಗಳನ್ನು ಅಳವಡಿಸಲಾಗಿತ್ತು. ಈಗ ಕಾಂಪೌಂಡ್ ಮತ್ತು ಜಾಲರಿ ಕಿತ್ತುಹೋಗಿದೆ. ಕಾರು ನಿಲುಗಡೆಗೆ ಅನುಕೂಲಕ್ಕಾಗಿ ಮೈದಾನಕ್ಕೆ ನಿರ್ವಿುಸಲಾಗಿದ್ದ ಗೇಟ್ ಮುರಿದು ಹಾಕಲಾಗಿದೆ. ಮತ್ತೊಂದೆಡೆ ಕಬ್ಬಿಣದ ಜಾಲರಿ ಮುರಿದು ಕದ್ದೊಯ್ದಿದ್ದಾರೆ. ಮೈದಾನದ ಮರಗಳ ರೆಂಬೆ- ಕೊಂಬೆಗಳು ಮುರಿದು ಬಿದ್ದಿದ್ದು, ಜನರು ಓಡಾಡಲು ಭಯ ಪಡುವ ವಾತಾವರಣವಿದೆ. ಜತೆಗೆ, ಈಗ ಜಾಗ ಮಲ- ಮೂತ್ರ ವಿಸರ್ಜನೆ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿ ಸುರಿಯಲಾಗುತ್ತಿರುವ ತ್ಯಾಜ್ಯ ಹಾಗೂ ಮಲ-ಮೂತ್ರ ವಿಸರ್ಜನೆ ಯಿಂದ ಸುತ್ತಲೂ ದುರ್ವಾಸನೆ ಬೀರುತ್ತಿದೆ.

    ಮೈದಾನದಲ್ಲಿ ವಾಣಿಜ್ಯ ಕಟ್ಟಡ: ಕುಮಾರವ್ಯಾಸ ಮಂಟಪ ಮತ್ತು ಮೈದಾನವನ್ನು ಸಾರ್ವ ಜನಿಕ ಉಪಯೋಗಕ್ಕೆ ಬಳಕೆ ಮಾಡಬೇಕು. ಆದರೆ, ಪಾಲಿಕೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮೈದಾನ ಕಾಂಪೌಂಡ್ ಒಳಗಡೆ ಹಾಪ್​ಕಾಮ್್ಸ, ನಂದಿನಿ ಮಿಲ್ಕ್ ಪಾರ್ಲರ್ ಮತ್ತು ಸಾರ್ವಜನಿಕ ಶೌಚಗೃಹ ನಿರ್ಮಾಣ ಮಾಡಿ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ಚಿಕ್ಕ ದೇವಾಲಯ ಮತ್ತು ಅಶ್ವತ್ಥ ಕಟ್ಟೆ ನಿರ್ಮಾಣ ಮಾಡಿ ಮೈದಾನದ ಸ್ವರೂಪವನ್ನೇ ಹಾಳು ಮಾಡಿದ್ದಾರೆ.

    ಕುಮಾರವ್ಯಾಸ ಮಂಟಪದಲ್ಲಿ ರಾಘವೇಂದ್ರರಾಯ, ಗಂಗಮ್ಮ ಕೇಶವಮೂರ್ತಿ, ಮುತ್ತೂರು ಕೃಷ್ಣಮೂರ್ತಿ, ವಾಸುದೇವರಾಯ, ಇಂದ್ರಾಣಿ, ಕಮಲಮ್ಮ ಸೇರಿ ಹಲವರು ಗಮಕ ಮತ್ತು ಷಟ್ಪದಿಗಳ ವಾಚನ ಮಾಡುತ್ತಿದ್ದರು. ಈಗ ಮಂಟಪವು ಕಾರು ನಿಲ್ಲಿಸುವ ನಿಲ್ದಾಣವಾಗಿದೆ. ಪಾಲಿಕೆ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ.

    | ಹೆಸರೇಳಲಿಚ್ಛಿಸದ ಸ್ಥಳೀಯ ನಾಗರಿಕ

    ಕೋರ್ಟ್ ಕೇಸ್ ನೆಪ: ಪಾಳು ಬಿದ್ದಿರುವ ಆಟದ ಮೈದಾನದಲ್ಲಿ ನಿರ್ವಿುಸಲಾದ ಹಾಪ್​ಕಾಮ್್ಸ ಮಳಿಗೆ ಗೋಡೆಯ ಮೇಲೆ, ‘ಈ ಆಟದ ಮೈದಾನದಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ಮಾಡದಿರಲು ಮಾನ್ಯ ಉಚ್ಛ ನ್ಯಾಯಾಲಯದ ನಿರ್ದೇಶನವಿರುತ್ತದೆ. ರಿಟ್ ಅರ್ಜಿ ಸಂಖ್ಯೆ- 4764/2018’ ಎಂದು ಬರೆಯಲಾಗಿದೆ. ಆದರೆ, ಮೈದಾನದಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಾಣ ಮಾಡದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದವರೇ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಪ್ರಕರಣವನ್ನು 2018ರಲ್ಲಿಯೇ ಮುಕ್ತಾಯಗೊಳಿಸಲಾಗಿದೆ. ಆದರೆ, ಮುಗಿದ ಹೋದ ನ್ಯಾಯಾಲಯ ಪ್ರಕರಣದ ನೆಪವೊಡ್ಡಿ ಪಾಲಿಕೆ ಅಧಿಕಾರಿಗಳು ಮೈದಾನ ಅಭಿವೃದ್ಧಿ ಮಾಡದೆ ಸ್ಥಳೀಯರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

    ಮೈದಾನದ ಅಭಿವೃದ್ಧಿಗೆ ಅನುದಾನ

    ಬಿಡುಗಡೆ ಆಗಿದೆ. ಕೂಡಲೇ ಟೆಂಡರ್ ಕರೆದು ಅಭಿವೃದ್ಧಿ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತದೆ.

    | ಬಾಲಗಂಗಾಧರಯ್ಯ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts