More

    ಕೂಳೂರು ಹಳೇ ಸೇತುವೆ ದುರಸ್ತಿ ಸಿದ್ಧತೆ

    – ವೇಣುವಿನೋದ್ ಕೆ.ಎಸ್. ಮಂಗಳೂರು
    ಕೂಳೂರಿನಲ್ಲಿ ಫಲ್ಗುಣಿ ನದಿಗಡ್ಡಲಾಗಿ ನೂತನ ಸೇತುವೆ ಕಾಮಗಾರಿ ಪ್ರಾರಂಭಕ್ಕೆ ಇನ್ನೂ ಸಮಯ ಬೇಕಾಗಿರುವ ಹಿನ್ನೆಲೆಯಲ್ಲಿ ಹಳೇ ಕಮಾನು ಸೇತುವೆಯನ್ನು ದುರಸ್ತಿ ಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮುಂದಾಗಿದೆ.
    38 ಲಕ್ಷ ರೂ. ವೆಚ್ಚದಲ್ಲಿ ಹಳೇ ಕಮಾನು ಸೇತುವೆಯ ನವೀಕರಣ ಕೈಗೊಳ್ಳಲಾಗುವುದು. ಇದಕ್ಕಾಗಿ ಫೆ.20ರಿಂದ 10 ದಿನಗಳ ಕಾಲ ಸೇತುವೆಯಲ್ಲಿ ವಾಹನ ಸಂಚಾರ ನಿಷೇಧಿಸಲು ಗುತ್ತಿಗೆದಾರರು ಕೇಳಿಕೊಂಡಿದ್ದು, ಅದರಂತೆ ಜಿಲ್ಲಾಡಳಿತಕ್ಕೆ ಎನ್‌ಎಚ್‌ಎಐ ಈಗಾಗಲೇ ಪತ್ರ ಬರೆದಿದೆ. ಸೂಕ್ತ ಸಂಚಾರ ಬದಲಾವಣೆಯನ್ನು ಮಾಡಿಕೊಡುವಂತೆ ಕೋರಿಕೊಳ್ಳಲಾಗಿದೆ.

    ಏನೇನು ಕೆಲಸಗಳು?: ಕಮಾನು ಸೇತುವೆ 1952ರಲ್ಲಿ ನಿರ್ಮಾಣಗೊಂಡಿದ್ದು ಸುಮಾರು 68 ವರ್ಷ ಹಳೆಯದಾಗಿದೆ. ಅಲ್ಲಲ್ಲಿ ಕ್ಷೀಣಗೊಂಡಿದ್ದು, ಹಲವೆಡೆ ಮೇಲ್ಭಾಗದ ಕಾಂಕ್ರೀಟ್ ಬಿದ್ದು ಹೋಗಿ ಒಳಭಾಗದ ಕಬ್ಬಿಣದ ತೊಲೆಗಳು ಕಾಣಿಸಿಕೊಂಡಿವೆ. ಸೇತುವೆಯ ಎರಡೂ ಕೊನೆಗಳಲ್ಲಿ ಬದಿಯ ರೈಲಿಂಗ್ ಕೂಡ ಬಿದ್ದು ಹೋಗಿದ್ದು ಅಪಾಯಕರ ಸ್ಥಿತಿಯಲ್ಲಿದೆ. ಸೇತುವೆ ತಳಭಾಗದಲ್ಲೂ ದುರಸ್ತಿ ಮಾಡಲೇಬೇಕಾದ ಪರಿಸ್ಥಿತಿ ಇದೆ.

    ಸಂಪರ್ಕ ರಸ್ತೆ ಸಿದ್ಧ: ಕಮಾನು ಸೇತುವೆ ಮುಚ್ಚಬೇಕಿರುವುದರಿಂದ ಪರ್ಯಾಯ ವ್ಯವಸ್ಥೆಯನ್ನೂ ಎನ್‌ಎಚ್‌ಎಐ ಪೂರ್ಣಗೊಳಿಸಿದೆ. ಉಡುಪಿ ಕಡೆಯಿಂದ ಬರುವ ವಾಹನಗಳು ಕಮಾನು ಸೇತುವೆಗೆ ಮೊದಲೇ ಬಲಕ್ಕೆ ತಿರುಗಿ ಕೂಳೂರು ಹೊಸ ಸೇತುವೆಯಲ್ಲಿ ಸಂಚರಿಸಿ ಸೇತುವೆ ಕಳೆದ ಕೂಡಲೇ ಎಡಕ್ಕೆ ಹಾಕಿರುವ ಹೊಸ ಸಂಪರ್ಕ ರಸ್ತೆಯಲ್ಲಿ ಹೊರಳಿ ಮೇಲ್ಸೇತುವೆ ಮೂಲಕ ಸಾಗಬೇಕು.
    ಕೂಳೂರು-ಪಣಂಬೂರು ರಸ್ತೆ ಹಾಗೂ ಪಣಂಬೂರು ಕೂಳೂರು ರಸ್ತೆ ಎರಡನ್ನೂ ಬೆಸೆಯುವಂತೆ ಅಯ್ಯಪ್ಪ ದೇವಸ್ಥಾನದ ಬಳಿ ಮಧ್ಯೆ ಡಾಮರು ಹಾಕಿ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಉಡುಪಿ ಕಡೆಯಿಂದ ಬರುವ ವಾಹನಗಳು ಫ್ಲೈಓವರ್‌ಗೆ ಸೇರಿ ಪ್ರಯಾಣ ಮುಂದುವರಿಸಬಹುದು. ಇಷ್ಟಾಗಿಯೂ ಪೀಕ್ ಅವರ್‌ಗಳಲ್ಲಿ ಹೊಸ ಸೇತುವೆಯಲ್ಲಿ ವಾಹನ ದಟ್ಟಣೆ ಹೆಚ್ಚುವ ಸಾಧ್ಯತೆ ಇರುವುದರಿಂದ ಭಾರಿ ವಾಹನಗಳನ್ನು ಪರ್ಯಾಯ ಮಾರ್ಗಗಳಲ್ಲಿ ಕಳುಹಿಸುವ ಬಗ್ಗೆ ಜಿಲ್ಲಾಡಳಿತ ಯೋಜಿಸಬೇಕಿದೆ.

    ಸಾಮರ್ಥ್ಯ ಕುಸಿತ: ಹಳೇ ಸೇತುವೆ ಕ್ಷೀಣಗೊಂಡಿರುವುದರಿಂದ ಅದರ ಭಾರ ಧಾರಣಾ ಸಾಮರ್ಥ್ಯ 30 ಟನ್‌ಗೆ ಹಾಗೂ ವಾಹನಗಳ ವೇಗವನ್ನು 15-20 ಕಿ.ಮೀ/ಗಂಟೆಗೆ ಸೀಮಿತಗೊಳಿಸಬೇಕಿದೆ ಎಂದು ಕಳೆದ ವರ್ಷವೇ ಎನ್‌ಎಚ್‌ಎಐ ನೇಮಿಸಿದ್ದ ಕನ್ಸಲ್ಟೆನ್ಸಿಯವರು ವರದಿ ನೀಡಿದ್ದರು. ಆದರೆ ಪ್ರಸ್ತುತ ಎಂದಿನಂತೆ ಲಘು ಹಾಗೂ ಭಾರಿ ವಾಹನಗಳು ಈ ಸೇತುವೆಯ ಮೇಲೆ ಸಂಚರಿಸುತ್ತಿವೆ. ಕಳೆದ ವರ್ಷವೇ ಈ ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸುವಂತೆ ಆಗಿನ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಘೋಷಿಸಿದ್ದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ.

    66 ಕೋಟಿ ರೂ.ನ ಹೊಸ ಸೇತುವೆ: ಕೂಳೂರಿನಲ್ಲಿ ಎರಡೂ ಸೇತುವೆಗಳ ಮಧ್ಯೆ ಹೊಸದಾಗಿ 6 ಲೇನ್‌ನ ಸೇತುವೆ ನಿರ್ಮಾಣದ ಪ್ರಸ್ತಾವ ಪ್ರಸ್ತುತ ಎನ್‌ಎಚ್‌ಎಐ ಪ್ರಧಾನ ಕಚೇರಿಯಲ್ಲಿ ಇದೆ. ಅನುಮೋದನೆ ಸಿಗುವುದಕ್ಕೆ ಕೆಲಕಾಲ ಬೇಕಾಗಬಹುದು. ಟೆಂಡರ್ ಕರೆಯುವುದಕ್ಕೆ ಅನುಮತಿ ಇನ್ನೂ ಸಿಕ್ಕಿಲ್ಲ. ಹೊಸ ಸೇತುವೆ ನಿರ್ಮಾಣಕ್ಕೆ ಎರಡೂವರೆ ವರ್ಷ ಕಾಲ ಬೇಕಾಗುವುದರಿಂದ ಕಮಾನು ಸೇತುವೆಯನ್ನು ಸದೃಢಗೊಳಿಸುವುದಕ್ಕೆ ಉದ್ದೇಶಿಸಲಾಗಿದೆ.

    ಗುತ್ತಿಗೆದಾರರು 10 ದಿನಗಳ ಕಾಲ ಸಂಚಾರ ನಿರ್ಬಂಧಿಸುವಂತೆ ಕೇಳಿರುವುದನ್ನು ಜಿಲ್ಲಾಡಳಿತಕ್ಕೆ ಪತ್ರಮುಖೇನ ತಿಳಿಸಲಾಗಿದೆ. ಅದರಂತೆ ಫೆ.20ರಿಂದ ಸೇತುವೆಯನ್ನು ಮುಚ್ಚಬೇಕಾಗುತ್ತದೆ. ಈ ಕುರಿತು ಜಿಲ್ಲಾಡಳಿತ ಕ್ರಮ ಜರುಗಿಸಬೇಕು.
    – ಶಿಶು ಮೋಹನ್, ಯೋಜನಾ ನಿರ್ದೇಶಕ, ಎನ್‌ಎಚ್‌ಎಐ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts