More

    ಕುಕ್ಕುವಾಡ ಕಾರ್ಖಾನೆಯಲ್ಲಿ ನಡೆಯದ ಸಭೆ

    ದಾವಣಗೆರೆ: ಕಾರ್ಖಾನೆ ಸೂಸುವ ಬೂದಿ ಹಾಗೂ ಕಬ್ಬಿನ ಹಣ ಪಾವತಿಯಲ್ಲಿನ ವ್ಯತ್ಯಾಸದ ಆರೋಪ ಸಂಬಂಧ ಕುಕ್ಕ್ಕುವಾಡದ ದಾವಣಗೆರೆ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಜಿಲ್ಲಾಡಳಿತವೇ ನಿಶ್ಚಯಿಸಿದ್ದ ಚರ್ಚೆ ಸೋಮವಾರ ನಡೆಯಲಿಲ್ಲ. ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಿಲ್ಲದೆ ಸಭೆ ನಡೆಸುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರ ಪಟ್ಟಿನಂತೆ ಜಿಲ್ಲಾಧಿಕಾರಿ, ರಸ್ತೆಯಲ್ಲೇ ಸಭೆ ನಡೆಸಲು ಯತ್ನಿಸಿದರಾದರೂ ಯಾವುದೇ ಪರಿಹಾರಗಳಿಲ್ಲದೆ ಗೊಂದಲದಲ್ಲೇ ಮುಕ್ತಾಯಗೊಂಡಿತು.

    ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಮಧ್ಯಾಹ್ನ 3-30 ಕ್ಕೆ ಕರೆದಿದ್ದ ಸಭೆಗೆ ರೈತರು ಮತ್ತು ಕಾರ್ಖಾನೆಯ ಚೇರ‌್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನು ಆಹ್ವಾನಿಸಲಾಗಿತ್ತು. ಚೇರ‌್ಮನ್ ಎಸ್.ಎಸ್. ಗಣೇಶ್ ಒಂದು ಗಂಟೆ ಮುನ್ನವೇ ಬಂದು ಕಾರ್ಖಾನೆ ಒಳಗೆ ಕೂತಿದ್ದರು. ಸಕಾಲಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು ಬಂದು ಅಧಿಕಾರಿಗಳಿಗಾಗಿ ಕಾದರು.

    ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್ಪಿ ಸಿ.ಬಿ.ರಿಷ್ಯಂತ್ ಇಬ್ಬರೂ ಸಂಜೆ 4-15ರ ವೇಳೆಗೆ ಆಗಮಿಸಿ, ರೈತರನ್ನು ಸಂಪರ್ಕಿಸದೆಯೇ ಚೇರ‌್ಮನ್ ಬಳಿ ಹೋದರು. ಹೊರಗೆ ಬಂದ ಪೊಲೀಸರು ‘ಗ್ರಾಪಂ ಕಚೇರಿಯಲ್ಲೇ ಸಭೆ ನಡೆಯಲಿದೆ. ಅಲ್ಲಿ ಕೂರಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ’ ಎಂದು ರೈತರಿಗೆ ಹೇಳಿದರು.

    ರೈತರು ಕಾರಣ ಕೇಳಿದರೂ ಉತ್ತರ ಬರಲಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಕಾರ್ಖಾನೆಯಿಂದ ಹೊರಬಂದು ಗ್ರಾಪಂ ಕಚೇರಿ ಬಳಿ, ಜಿಲ್ಲಾಧಿಕಾರಿ ಕಾರಿನೆದುರು ಕೂತು ಪ್ರತಿಭಟನೆ ನಡೆಸಿದರು. ನಂತರ ತಹಸೀಲ್ದಾರ್ ಡಾ.ಅಶ್ವತ್ಥ ರೈತರ ಜತೆ ಮಾತನಾಡಲು ಬಂದರಾದರೂ ‘ನಾವು ಡಿಸಿಯೊಂದಿಗೆ ಸಭೆ ಮಾಡಲು ಬಂದಿದ್ದೇವೆ’ ಎಂದರು.

    ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ, ಗ್ರಾಪಂ ಕಚೇರಿ ಒಳಗೆ ಸಭೆ ಮಾಡುವುದಾಗಿ ಕರೆದರೂ ರೈತರು ಕೂತ ಸ್ಥಳದಿಂದ ಕದಲಲಿಲ್ಲ. ಕಾರ್ಖಾನೆ ಆವರಣದಲ್ಲಿ ಸಭೆ ಕರೆಯುವುದಾಗಿ ನೀವೇ ಹೇಳಿದ್ದಿರಿ. ಈಗ ಗ್ರಾಪಂ ಕಚೇರಿಯಲ್ಲಿ ಸಭೆ ಮಾಡುವುದಾಗಿ ಹೇಳುತ್ತಿದ್ದೀರಲ್ಲ, ಚೇರ‌್ಮನ್ ಬರದೆ ಸಭೆ ಮಾಡುತ್ತೀರಾ? ಇದು ಖಾಸಗಿ ಜಾಗ ಎಂದು ನಿಮಗೆ ಮೊದಲೇ ತಿಳಿದಿರಲಿಲ್ಲವೆ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಸಭೆ ಕರೆಯುವಂತೆ ನಾವು ಕೇಳಿದರೂ ನೀವೇಕೆ ಕ್ರಮವಹಿಸಲಿಲ್ಲ ಎಂದು ಪ್ರಶ್ನಿಸಿದರು.

    ಅದಕ್ಕೆ ಉತ್ತರಿಸಿದ ಡಿಸಿ, ತಾವು ಕಾರ್ಖಾನೆ ಒಳಗೆ ಪರಿಶೀಲನೆ ನಡೆಸಿದ್ದು ಬೂದಿ ಮತ್ತು ತ್ಯಾಜ್ಯ ನೀರನ್ನು ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾಗಿ ಹೇಳಿದರು. ರೈತರು ಮತ್ತು ಕಾರ್ಖಾನೆ ಎಂಡಿ ನಡುವೆ ಸಭೆ ನಡೆಸಬೇಕಾದ ನೀವು ಕಾರ್ಖಾನೆಯವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ ಈಗ ರೈತರ ಬಳಿ ಬಂದಿದ್ದೀರಿ. ಇದು ಸರಿಯಲ್ಲ ಎಂದು ರೈತ ಒಕ್ಕೂಟದ ಮುಖಂಡ ಬಿ.ಎಂ.ಸತೀಶ್ ಕೊಳೇನಹಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.

    ನಿಮ್ಮ ಬೇಡಿಕೆಯಂತೆ ಪರಿಶೀಲನೆ ನಡೆಸಿದ್ದೇನೆ. ಕಾರ್ಖಾನೆ ಚಿಮಣಿ ಮೂಲಕ ಹೊರಸೂಸುವ ಬೂದಿಯಿಂದ ವಾಯು ಮಾಲಿನ್ಯ ಮತ್ತು ಹಳ್ಳಕ್ಕೆ ಬಿಡುವ ರಾಸಾಯನಿಕಯುಕ್ತ ತ್ಯಾಜ್ಯ ನೀರಿನಿಂದ ಜಲಮಾಲಿನ್ಯವಾಗಿರುವುದು ಸತ್ಯ. ಇದನ್ನು ನಿಯಂತ್ರಿಸಲು ಕ್ರಮ ವಹಿಸುತ್ತೇನೆ. ಇತರೆ ಬೇಡಿಕೆಗಳ ಬಗ್ಗೆ ಸಕ್ಕರೆ ಆಯುಕ್ತರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಲು ಕೋರುತ್ತೇನೆ ಎಂದು ಡಿಸಿ ಹೇಳಿದರು. ಅದಕ್ಕೆ ಪ್ರತಿಭಟನಾಕಾರರು ಒಪ್ಪಲಿಲ್ಲ. ಸಭೆ ಕರೆಯುವುದಾಗಿ ಹೇಳುತ್ತಲೇ ಡಿಸಿ ಅಲ್ಲಿಂದ ತೆರಳಿದರು.

    ಜಿಲ್ಲಾಧಿಕಾರಿಯಿಂದ ರೈತರಿಗೆ ಸಮಂಜಸ ಉತ್ತರ ಸಿಕ್ಕಿಲ್ಲ. ಒಂದೆರಡು ದಿನದಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದು ಕೊಳೇನಹಳ್ಳಿ ಸತೀಶ್ ಮಾಧ್ಯಮಗಳಿಗೆ ತಿಳಿಸಿದರು.

    ಈ ಸಂದರ್ಭದಲ್ಲಿ ಹದಡಿ ಹಾಲಪ್ಪ, ಬಲ್ಲೂರು ಬಸವರಾಜಪ್ಪ, ಕುಕ್ಕುವಾಡದ ರುದ್ರೇಗೌಡ್ರು, ಬಲ್ಲೂರು ರವಿಕುಮಾರ್, ಕನಗೊಂಡನಹಳ್ಳಿ ವೈ.ಎನ್.ತಿಪ್ಪೇಸ್ವಾಮಿ, ಗಣೇಶ್, ಚನ್ನಪ್ಪ, ಪರಮೇಶ್ವರಪ್ಪ, ಎಸ್. ಕರಿಬಸಪ್ಪ, ಎಸ್.ನಿಂಗಪ್ಪ, ಕೊಳೇನಹಳ್ಳಿ ಕೆ ಶರಣಪ್ಪ, ಕೆ ಶಾಂತಪ್ಪ, ಅಮಟಿ ನಾಗರಾಜ, ಸ್ವಾಮಿಲಿಂಗಪ್ಪ, ರೇಣುಕಾ, ನಾಗರಸನಹಳ್ಳಿ ರುದ್ರೇಶ, ಗೌಡ್ರು ಷಣ್ಮುಖ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts