More

    ಡಿ.12ರಿಂದ ಕುಕ್ಕೆ ಸುಬ್ರಹ್ಮಣ್ಯ ಜಾತ್ರೆ

    ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.12ರಿಂದ 26ರವರೆಗೆ ಚಂಪಾಷಷ್ಠಿ ಮಹೋತ್ಸವ ನಡೆಯಲಿದೆ.

    11ರಂದು ಮೂಲ ಮೃತ್ತಿಕಾ ಪ್ರಸಾದ ತೆಗೆಯಲಾಗುವುದು. 12ರಂದು ಕೊಪ್ಪರಿಗೆ ಏರುವುದರ ಮೂಲಕ ಜಾತ್ರೆ ಆರಂಭವಾಗಲಿದ್ದು, ರಾತ್ರಿ ಶೇಷ ವಾಹನಯುಕ್ತ ಬಂಡಿ ಉತ್ಸವ, 13ರಂದು ಶೇಷ ವಾಹನಯುಕ್ತ ಬಂಡಿ ಉತ್ಸವ, 14ರಂದು ಲಕ್ಷದೀಪೋತ್ಸವ, 15ರಂದು ಶೇಷ ವಾಹನೋತ್ಸವ, 16ರಂದು ಅಶ್ವವಾಹನೋತ್ಸವ, 17ರಂದು ಮಯೂರ ವಾಹನೋತ್ಸವ ನಡೆಯಲಿದೆ.

    18ರಂದು ಚೌತಿ ಹೂವಿನ ತೇರಿನ ಉತ್ಸವ, 19ರಂದು ಮಾರ್ಗಶಿರ ಶುದ್ಧ ಪಂಚಮಿ ದಿನ ತೈಲಾಭ್ಯಂಜನ, ರಾತ್ರಿ ಪಂಚಮಿ ರಥೋತ್ಸವ, 20ರಂದು ಮಾರ್ಗಶಿರ ಶುದ್ಧ ಷಷ್ಠಿ ಬೆಳಗ್ಗೆ ಚಂಪಾಷಷ್ಠಿ ಮಹಾರಥೋತ್ಸವ, 21ರಂದು ಅವಭೃತೋತ್ಸವ ಮತ್ತು ನೌಕಾವಿಹಾರ, 26ರಂದು ಕೊಪ್ಪರಿಗೆ ಇಳಿಯುವುದರ ಮೂಲಕ ಜಾತ್ರೋತ್ಸವ ಸಮಾಪನಗೊಳ್ಳಲಿದೆ. ರಾತ್ರಿ ನೀರಿನಲ್ಲಿ ಬಂಡಿ ಉತ್ಸವ ನೆರವೇರಲಿದ್ದು, ಪುರುಷರಾಯ, ಹೊಸಳಿಗಮ್ಮ ಹಾಗೂ ಪರಿವಾರ ದೈವಗಳ ನಡಾವಳಿ ನಡೆಯಲಿದೆ.

    ಬ್ರಹ್ಮರಥೋತ್ಸವ ಸೇವಾ ರಶೀದಿ ಇಲ್ಲ: ಈ ಬಾರಿ ಕೋವಿಡ್ ನಿಯಮಗಳನ್ನು ಅನುಸರಿಸಿಕೊಂಡು ಸಂಪ್ರದಾಯದಂತೆ ಚಂಪಾಷಷ್ಠಿ ಜಾತ್ರೋತ್ಸವ ನೆರವೇರಿಸಲು ನಿರ್ಧರಿಸಲಾಗಿದೆ ಎಂದು ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಸಕ ಎಸ್.ಅಂಗಾರ ತಿಳಿಸಿದ್ದಾರೆ. ದೇವಳದಿಂದ ಸಂಪ್ರದಾಯ ಪ್ರಕಾರವಾಗಿ ವರ್ಷದಲ್ಲಿ ಒಂದು ಬಾರಿ ಮಾತ್ರ ಎಳೆಯುತ್ತಿದ್ದ ಬ್ರಹ್ಮರಥೋತ್ಸವದಲ್ಲಿ ರಶೀದಿ ಮಾಡಿ ಬ್ರಹ್ಮರಥೋತ್ಸವ ಸೇವೆ ನೆರವೇರಿಸಲು ಈ ಹಿಂದೆ ಭಕ್ತರಿಗೆ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ಕೋವಿಡ್ ಹಿನ್ನೆಲೆ ಈ ಹಿಂದಿನಂತೆ ರಶೀದಿ ಮಾಡಿ ಬ್ರಹ್ಮರಥೋತ್ಸವ ಸೇವೆ ನೆರವೇರಿಸಲು ಭಕ್ತರಿಗೆ ಅವಕಾಶವಿಲ್ಲ. ದೇವರ ಬ್ರಹ್ಮರಥ ಸೇರಿದಂತೆ ಇತರ ರಥಗಳನ್ನು ಎಳೆದು ಹಾಗೂ ಉತ್ಸವಗಳಲ್ಲಿ ಕೋವಿಡ್ ನಿಯಮಗಳಿಗೆ ಅನುಸಾರವಾಗಿ ಭಾಗವಹಿಸಬಹುದು. ಪರಂಪರೆ ಮತ್ತು ಸಂಪ್ರದಾಯಗಳಿಗೆ ಧಕ್ಕೆ ಬಾರದಂತೆ ಜಾತ್ರೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts