More

    ಇಂದಿನಿಂದ ಕುಕ್ಕೆ ಕ್ಷೇತ್ರದಲ್ಲಿ ಜಾತ್ರೋತ್ಸವ, 20ರಂದು ಚಂಪಾ ಷಷ್ಠಿ ಮಹಾರಥೋತ್ಸವ

    ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾರ್ತಿಕ ಬಹುಳ ದ್ವಾದಶಿಯ ದಿನ ಡಿ.12ರಂದು ವಾರ್ಷಿಕ ಜಾತ್ರೆ ಆರಂಭವಾಗಲಿದ್ದು, 20ರಂದು ಮುಂಜಾನೆ ದೇವರ ಚಂಪಾ ಷಷ್ಠಿ ಮಹಾರಥೋತ್ಸವ ನೆರವೇರಲಿದೆ.

    ಶುಕ್ರವಾರ ದೇವಸ್ಥಾನದ ಗರ್ಭಗುಡಿಯಿಂದ ಮೂಲ ಮೃತ್ತಿಕೆ ಸಂಗ್ರಹಿಸಿ ಭಕ್ತರಿಗೆ ವಿತರಿಸಲಾಯಿತು. ವರ್ಷದಲ್ಲಿ ಒಂದು ಬಾರಿ ಮಾತ್ರ ಪವಿತ್ರ ಮಹಾಪ್ರಸಾದ ತೆಗೆಯಲಾಗುತ್ತಿದ್ದು, ಇದನ್ನು ಪಡೆಯಲು ಬೆಳಗ್ಗಿನಿಂದಲೇ ಭಕ್ತರು ಸಾಲು ನಿಂತಿದ್ದರು. ಇನ್ನು ಜಾತ್ರೋತ್ಸವ ಮುಗಿದ ನಂತರವೇ ಭಕ್ತರಿಗೆ ಮೃತ್ತಿಕಾ ಪ್ರಸಾದ ನೀಡಲಾಗುತ್ತದೆ.

    ಶನಿವಾರ ಜಾತ್ರೆ ಆರಂಭದ ಸಂಕೇತವಾಗಿ ರಾಮ -ಲಕ್ಷ್ಮಣ ಎಂಬ ಎರಡು ದೊಡ್ಡ ಜೋಡಿ ಕೊಪ್ಪರಿಗೆಗಳನ್ನು ಏರಿಸಿ, ಪೂಜೆ ನೆರವೇರಿಸಲಾಗುತ್ತದೆ. ರಾತ್ರಿ ಶೇಷ ವಾಹನಯುಕ್ತ ಬಂಡಿ ಉತ್ಸವ ನಡೆಯಲಿದೆ.

    13ರಂದು ಶೇಷ ವಾಹನಯುಕ್ತ ಬಂಡಿ ಉತ್ಸವ, 14ರಂದು ಲಕ್ಷದೀಪೋತ್ಸವ, 15ರಂದು ಶೇಷವಾಹನೋತ್ಸವ, 16ರಂದು ಅಶ್ವವಾಹನೋತ್ಸವ, 17ರಂದು ಮಯೂರ ವಾಹನೋತ್ಸವ, 18ರಂದು ಚೌತಿ ಹೂವಿನ ತೇರಿನ ಉತ್ಸವ, 19ರಂದು ತೈಲಾಭ್ಯಂಜನ, ರಾತ್ರಿ ಪಂಚಮಿ ರಥೋತ್ಸವ, 20ರಂದು ಮಹಾರಥೋತ್ಸವ, 21ರಂದು ಅವಭೃತೋತ್ಸವ ಮತ್ತು ನೌಕಾವಿಹಾರ ನೆರವೇರಲಿದೆ. 26ರಂದು ಕೊಪ್ಪರಿಗೆ ಇಳಿಯುವುದರ ಮೂಲಕ ಜಾತ್ರೋತ್ಸವ ಸಮಾಪನಗೊಳ್ಳಲಿದೆ. ಈ ದಿನ ರಾತ್ರಿ ನೀರಿನಲ್ಲಿ ಬಂಡಿ ಉತ್ಸವ ನೆರವೇರಲಿದ್ದು, ಪುರುಷರಾಯ, ಹೊಸಳಿಗಮ್ಮ ಹಾಗೂ ಪರಿವಾರ ದೈವಗಳ ನಡಾವಳಿ ನಡೆಯಲಿದೆ.

    ಸರ್ಪ ಸಂಸ್ಕಾರ ಇಲ್ಲ: ಚಂಪಾ ಷಷ್ಠಿ ಜಾತ್ರೋತ್ಸವ ಪ್ರಯುಕ್ತ ಡಿ.12ರಿಂದ 26ರಂದು ಕೊಪ್ಪರಿಗೆ ಇಳಿಯುವವರೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಸೇವೆ ಇರುವುದಿಲ್ಲ. ಇತರ ಸೇವೆಗಳು ಎಂದಿನಂತೆ ನಡೆಯಲಿವೆ. ಚಂಪಾ ಷಷ್ಠಿ ದಿನ ಆಶ್ಲೇಷಾ ಬಲಿ ಮತ್ತು ನಾಗ ಪ್ರತಿಷ್ಠಾಪನೆ ಸೇವೆಗಳು ನಡೆಯುವುದಿಲ್ಲ. ಅಮಾವಾಸ್ಯೆಯಂದು ಲಕ್ಷದೀಪೋತ್ಸವ ನಡೆಯಲಿದ್ದು, ಶುದ್ಧ ಚೌತಿ, ಪಂಚಮಿ ಮತ್ತು ಷಷ್ಠಿಯಂದು ಮಹಾಭಿಷೇಕ ಸೇವೆ ಇರುವುದಿಲ್ಲ. ಈ ದಿನಗಳಲ್ಲಿ ರಾತ್ರಿ ಪ್ರಾರ್ಥನೆ ಸೇವೆಯೂ ನೆರವೇರುವುದಿಲ್ಲ. ಪಂಚಮಿ ದಿನ ಮಧ್ಯಾಹ್ನ ಮತ್ತು ರಾತ್ರಿ ಪ್ರಾರ್ಥನೆ ಇರುವುದಿಲ್ಲ. ಷಷ್ಠಿ ದಿನ ಮಧ್ಯಾಹ್ನ ಪ್ರಾರ್ಥನೆ ಇಲ್ಲ, ರಾತ್ರಿ ಪ್ರಾರ್ಥನೆ ಇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts