More

    ಬಿಎಸ್‌ವೈ ಬಹಳ ಕೆಟ್ಟ ಸಿಎಂ; ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ

    ಬಡವರಿಗೆ ಆಹಾರಧಾನ್ಯದ ಕಿಟ್‌ಗಳ ವಿತರಣೆ

    ಕುಕನೂರು: ಹಲವು ಜನಪರ ಯೋಜನೆ ಸ್ಥಗಿತಗೊಳಿಸಿರುವ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಬಹಳ ಕೆಟ್ಟ ಸಿಎಂ ಆಗಿದ್ದು, ಸುಳ್ಳು ಹೇಳುತ್ತ ಅಧಿಕಾರ ನಡೆಸುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದರು.

    ಎಪಿಎಂಸಿಯಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ವತಿಯಿಂದ ಯಲಬುರ್ಗಾ ಕ್ಷೇತ್ರದ ಜನತೆಗೆ 10,500 ಆಹಾರಧಾನ್ಯದ ಕಿಟ್‌ಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಅನ್ನಭಾಗ್ಯ ಯೋಜನೆಯ 7 ಕೆ.ಜಿ. ಅಕ್ಕಿ ವಿತರಣೆ ಕಡಿತಗೊಳಿಸಿರುವ ಅವರು, ಕೃಷಿಭಾಗ್ಯ, ನೀರಾವರಿ, ತುಂತುರು ಹನಿ ನೀರಾವರಿ, ಕೆರೆತುಂಬಿಸುವ ಯೋಜನೆ, ಸಾಲಮನ್ನಾ, ಬಿಲ್ಡಿಂಗ್, ಬ್ರಿಡ್ಜ್ ಕಟ್ಟಡ ಕಾಮಗಾರಿ ಮೊದಲಾದ ಕೆಲಸ ಸ್ಥಗಿತಗೊಳಿಸಿದ್ದಾರೆ. ಸಿಎಂ ಆಗುತ್ತಿದ್ದಂತೆ ಹಸಿರು ಶಾಲು ಹಾಕಿಕೊಳ್ಳುವುದು ಮಾತ್ರ ಯಡಿಯೂರಪ್ಪಗೆ ಗೊತ್ತು. ರೈತರಿಗೆ ಸಹಾಯ ಮಾಡುವುದು ಗೊತ್ತಿಲ್ಲ ಎಂದು ಕುಟುಕಿದರು.

    2020, ನಂವೆಂಬರ್ 20ರಂದು ತಜ್ಞರ ಸಮಿತಿ ಕರೊನಾ 2ನೇ ಅಲೆ ಬಗ್ಗೆ ವರದಿ ನೀಡಿತ್ತು. ಅದನ್ನು ನಿರ್ಲಕ್ಷಿಸಿದ್ದರಿಂದ ಸಾವಿರಾರು ಜನ ಸಾಯುವಂತಾಯಿತು. ಇದಕ್ಕೆ ಬಿಜೆಪಿ ಸರ್ಕಾರ ನೇರ ಕಾರಣ. ಚಾಮರಾಜನಗರದಲ್ಲಿ ಕ್ಷಿಜನ್ ಕೊರತೆಯಿಂದ ಒಂದೇ ದಿನ 36 ಜನ ಸತ್ತಿರುವುದು ರಾಜ್ಯ ತಲೆತೆಗ್ಗಿಸುವ ವಿಚಾರ. ಪ್ರಧಾನಿ ನರೇಂದ್ರ ಮೋದಿ, ಅಚ್ಚೇದಿನ್ ಆಯೇಗಾ ಎಂದು ಬಿಲ್ಡಪ್ ಕೊಟ್ತಿದ್ದಾರೆ. ಅಡುಗೆ ಎಣ್ಣೆ 160 ರೂ., ಪೆಟ್ರೋಲ್ 100 ರೂ., ಡೀಸೆಲ್ 91 ರೂ., ಅಡುಗೆ ಅನಿಲ 950 ರೂ.ಆಗಿದೆ. ಆದರೆ, ಕಾಂಗ್ರೆಸ್ ಸದಾ ಜನರ ಮಧ್ಯೆ ಇದ್ದು ಜನರ ಕಷ್ಟಕ್ಕೆ ಮಿಡಿಯುತ್ತದೆ ಎಂದರು.

    ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಧ್ಯೇಯ ಜನಪರ ಕಾರ್ಯ. ಯಾವುದೇ ರೀತಿಯಲ್ಲಿ ರಾಜಕೀಯ ಉದ್ದೇಶದಿಂದ ಆಹಾರ ಧಾನ್ಯ ಕಿಟ್‌ಗಳನ್ನು ವಿತರಣೆ ಮಾಡುತ್ತಿಲ್ಲ. 11 ಬಾರಿ ಚುನಾವಣೆ ಎದುರಿಸಿದ್ದೇನೆ. 9 ಬಾರಿ ಜನ ನನ್ನನ್ನು ಬೆಂಬಲಿಸಿದ್ದಾರೆ. ಅಭಿವೃದ್ಧಿ ಕಾರ್ಯಕ್ಕೆ ರಾಜ್ಯದಲ್ಲಿ ಮತ್ತೊಮ್ಮೆ ಮಾಜಿ ಸಿಎಂ ಸಿದ್ದರಾಮಯ್ಯನವರಂಥವರು ಸಿಎಂ ಆಗಬೇಕು. ಸದ್ಯದ ಬಿಜೆಪಿ ಸರ್ಕಾರ ಅತ್ಯಂತ ಕೀಳು ಸರ್ಕಾರ ಎಂದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, ಶಾಸಕರಾದ ಅಮರೇಗೌಡ ಬಯ್ಯಪುರ, ಭೈರತಿ ಸುರೇಶ, ಕುಕನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚಂಡೂರು, ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಪ್ರಮುಖರಾದ ಕಾಸೀಂಸಾಬ್ ತಳಕಲ್, ನಾರಾಯಣಪ್ಪ ಹರಪನ್ಹಳ್ಳಿ, ರೆಹೆಮಾನ್‌ಸಾಬ್ ಮಕ್ಕಪ್ಪನವರ್, ಗಗನ ನೋಟಗಾರ ಇತರರಿದ್ದರು.

    ಹಾಲಪ್ಪ ಆಚಾರ್ ನಮ್ಮ ಗಿರಾಕಿ : ಈ ಹಿಂದೆ ನಾನು ಕೊಪ್ಪಳ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಈಗಿನ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ನಮ್ಮ ಜತೆಗೆ ಇದ್ದರು. ರಾಯರೆಡ್ಡಿ ಜತೆ ಇದ್ದ ಗಿರಾಕಿ ಈ ಹಾಲಪ್ಪ ಆಚಾರ್. ರಾಯೆರೆಡ್ಡಿ ಹೋದ ಮೇಲೆ ಈ ಅವಧಿಯಲ್ಲಿ ಯಾವ ಕೆಲಸ ಆಗಿಲ್ಲ. ಮಾಜಿ ಸಚಿವ ಬಸವರಾಜ ರಾಯರೆಡ್ಡಿ 10,500 ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಎಂದರು.


    ಯಲಬುರ್ಗಾ ಕ್ಷೇತ್ರ ಅಂದ ಕೂಡಲೇ ನನಗೂ ಹೊಟ್ಟೆಕಿಚ್ಚು ಬರುತ್ತದೆ. ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮಾಡಿದಷ್ಟು ಅಭಿವೃದ್ಧಿ ಕಾರ್ಯಗಳನ್ನು ನಾನು ಸಿಎಂ ಆಗಿದ್ರೂ ನನ್ನ ಕ್ಷೇತ್ರದಲ್ಲಿ ಮಾಡಿಲ್ಲ. ಯಲಬುರ್ಗಾ ಕ್ಷೇತ್ರದಲ್ಲಿ ಬಸವರಾಜ ರಾಯರೆಡ್ಡಿ ಮಾಡಿದಷ್ಟು ಕೆಲಸವನ್ನು ಕರ್ನಾಟಕದಲ್ಲಿ ಯಾವ ಶಾಸಕರೂ ಮಾಡಿಲ್ಲ.
    | ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts