More

    54 ಕುಗ್ರಾಮಕ್ಕೆ 4ಜಿ ಮೊಬೈಲ್ ಟವರ್; ಬಿ.ವೈ.ರಾಘವೇಂದ್ರ

    ಶಿವಮೊಗ್ಗ: ಕೇಂದ್ರ ಸರ್ಕಾರ ಆತ್ಮನಿರ್ಭರ ಯೋಜನೆಯಡಿ 54 ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆ 4ಜಿ ಟವರ್‌ಗಳನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮಂಜೂರು ಮಾಡಿದ್ದು ನವೆಂಬರ್ ಅಂತ್ಯದೊಳಗೆ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.
    ಬೈಂದೂರು ಸೇರಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ 96 ಕುಗ್ರಾಮಗಳನ್ನು ಗುರುತಿಸಿ 4ಜಿ ಟವರ್ ನಿರ್ಮಿಸಲು ಮನವಿ ಸಲ್ಲಿಸಿದ್ದು ದೂರಸಂಪರ್ಕ ವ್ಯವಸ್ಥೆಯಲ್ಲಿನ ಅಭಿವೃದ್ಧಿ ಮತ್ತು ಸುಧಾರಣಾ ದೃಷ್ಟಿಯಿಂದ ಮನವಿಗೆ ಸ್ಪಂದಿಸಿರುವ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು ಮೊದಲ ಹಂತದಲ್ಲಿ 54 ಗ್ರಾಮಗಳಲ್ಲಿ ಬಿಎಸ್‌ಎನ್‌ಎಲ್ 4 ಜಿ ಟವರ್ ಸ್ಥಾಪಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಸಂತಸ ವ್ಯಕ್ತಪಡಿಸಿದರು.
    ಎರಡನೇ ಹಂತದಲ್ಲಿ ಇನ್ನುಳಿದ ಗ್ರಾಮಗಳನ್ನು ಆಯ್ದುಕೊಂಡು ಶೀಘ್ರವೇ ಈ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಜತೆಗೆ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಬ್ಯಾಟರಿ ಬ್ಯಾಕ್‌ಅಪ್ ಇಲ್ಲದೆ ದೂರಸಂಪರ್ಕ ವ್ಯವಸ್ಥೆಯಲ್ಲಿ ತೊಂದರೆ ಆಗುತ್ತಿರುವುದನ್ನು ಸಚಿವರ ಗಮನಕ್ಕೆ ತರಲಾಗಿತ್ತು. ಅದಕ್ಕೂ ಸ್ಪಂದಿಸಿರುವ ಅವರು 25 ಬ್ಯಾಟರಿ ಸೆಟ್‌ಗಳ ಮಂಜೂರಾತಿ ನೀಡಿದ್ದಾರೆ. ಅಲ್ಲದೆ ಇನ್ನೂ 100 ಬ್ಯಾಟರಿ ಸೆಟ್‌ಗಳ ಮಂಜೂರಾತಿಗೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ ಎಂದರು.
    ದೂರ ಸಂಪರ್ಕ ಕ್ಷೇತ್ರದಲ್ಲಿ ಹಲವಾರು ಸುಧಾರಣಾ ಕ್ರಮಗಳು ಜಾರಿಯಲ್ಲಿದ್ದು ಶಿವಮೊಗ್ಗ ಕ್ಷೇತ್ರದಲ್ಲಿ ಭಾರತ್ ನೆಟ್ ವ್ಯವಸ್ಥೆಯಡಿ ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಸುಧಾರಿತ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗುತ್ತಿದೆ. ಈಗಾಗಲೇ 151 ಗ್ರಾಪಂಗಳಿಗೆ ನೀಡಲಾಗಿದೆ. ಉಳಿದ ಗ್ರಾಪಂಗಳಿಗೂ ಶೀಘ್ರವೇ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಬಿಎಸ್‌ಎನ್‌ಎಲ್‌ನ ಪ್ರಧಾನ ವ್ಯವಸ್ಥಾಪಕ ಧನಂಜಯಕುಮಾರ್ ತ್ರಿಪಾಟಿ, ಡಿಜಿಎಂಗಳಾದ ಕೃಷ್ಣ ಮೊಗೇರ, ಎಚ್.ಎಸ್.ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts