More

    ಕುಡುಪು ನಾಗ ಸಾನ್ನಿಧ್ಯಕ್ಕೆ ಪರಿಸರ ಸ್ನೇಹಿ ಬನ

    ಮಂಗಳೂರು: ಮುಂದಿನ ನಾಗರ ಪಂಚಮಿಗೆ ಪುರಾಣಪ್ರಸಿದ್ಧ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನಕ್ಕೆ ಪೂರ್ಣಪ್ರಮಾಣದ ನಿಸರ್ಗ ಸ್ನೇಹಿ ನಾಗಬನ ಸಿದ್ಧಗೊಳ್ಳಲಿದೆ.

    ನಾಗಬನದಲ್ಲಿ ಈ ಹಿಂದೆ ಇದ್ದ ಕಾಂಕ್ರೀಟ್ ರಚನೆಗಳನ್ನು ತೆಗೆಯಲಾಗಿದ್ದು, ಹೊಸ ಬನ ಶಿಲೆಕಲ್ಲು, ಮರ ಮತ್ತು ತಾಮ್ರ ಮಾತ್ರ ಬಳಸಿ ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಬನದ ಮಾಡು ಪೂರ್ಣ ಪ್ರಮಾಣದಲ್ಲಿ ಮರ ಮತ್ತು ತಾಮ್ರದ ಹೊದಿಕೆಯಿಂದ ರಚನೆಯಾಗಲಿದೆ.
    ಕರ್ನಾಟದ ಕರಾವಳಿಯ ನಾಗದೇವರ ದೇವಾಲಯಗಳಲ್ಲೇ ಹೆಚ್ಚು ಪ್ರಸಿದ್ಧಿ ಪಡೆದಿರುವ ದೇವಾಲಯಗಳಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನ ಪ್ರಥಮ ಸ್ಥಾನದಲ್ಲಿದ್ದರೆ, ಕುಡುಪು ಕ್ಷೇತ್ರ ಎರಡನೇ ಸ್ಥಾನದಲ್ಲಿದೆ.

    40 ವರ್ಷ ಹಳೇ ಬನ: ಈ ಹಿಂದೆ ಇಲ್ಲಿ ಇದ್ದ 40 ವರ್ಷ ಹಳೇ ನಾಗಬನದ ಕಾಂಕ್ರೀಟ್ ಭಾಗಗಳನ್ನು ತೆಗೆದುಹಾಕಿ ಹೊಸ ಬನ ನಿರ್ಮಿಸುವ ಕಾಮಗಾರಿ ಸಾಗಿದೆ. ಹಳೇ ಬನದಲ್ಲಿದ್ದ 300ಕ್ಕೂ ಅಧಿಕ ಸರ್ಪ ವಿಗ್ರಹಗಳನ್ನು ದೇವಸ್ಥಾನ ಸಮೀಪದ ಪವಿತ್ರ ಭದ್ರಾ ಸರಸ್ವತಿ ತೀರ್ಥ ಕೊಳ ಸಮೀಪ ಇರಿಸಲಾಗಿದ್ದು, ಅವುಗಳಿಗೆ ನಿತ್ಯ ಪೂಜೆ ನಡೆಸಲಾಗುತ್ತಿದೆ.

    ದೀರ್ಘಕಾಲದ ಇತಿಹಾಸ ಹೊಂದಿರುವ ದೇವಸ್ಥಾನದ ಸಮೀಪ ನಾಲ್ಕು ದಶಕಗಳಿಗೂ ಹಿಂದೆ ಕಾಡು ಸವರಿಕೊಂಡು ಭಕ್ತರು ನಾಗನ ಸೇವೆ ನಡೆಸಲು ಈ ಪ್ರದೇಶ ತಲುಪುತ್ತಿದ್ದರು. ಬಳಿಕ ಇಲ್ಲಿಯ ತನಕ ಇದ್ದ ಕಾಂಕ್ರೀಟಿನ ರಚನೆಗಳು ಒಳಗೊಂಡಿರುವ ನಾಗಬನ ನಿರ್ಮಾಣಗೊಂಡಿತ್ತು.
    ಪ್ರತಿದಿನ ಹಾಲು ಮತ್ತು ಸೀಯಾಳ ಅಭಿಷೇಕ ಮಾಡುತ್ತ ಬಂದಿರುವ ಕಾರಣದಿಂದ ಹಳೇ ನಾಗಬನದಲ್ಲಿ ನಾಗದೇವರ ಪ್ರತಿಮೆಗಳು ಇರಿಸಿದ್ದ ಮರದ ಭಾಗಗಳು ದುರ್ಬಲವಾಗಿದ್ದವು.

    ಮುಂದಿನ ನಾಗರಪಂಚಮಿಗೆ ಹೊಸ ನಾಗಬನ ಕಾಮಗಾರಿ ಪೂರ್ಣಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ. ಶಿಲೆ ಕಲ್ಲು, ಮರ ಮುಂತಾದ ಕಾಮಗಾರಿಗೆ ಅಗತ್ಯ ಸಾಮಗ್ರಿ ಪೂರೈಕೆಯಲ್ಲಿ ಸ್ವಲ್ಪ ವಿಳಂಬವಾದ ಕಾರಣ ಕೆಲಸದ ವೇಗ ಸ್ವಲ್ಪ ಕಡಿಮೆಯಾಗಿದೆ. ಹೊಸ ಕಾಮಗಾರಿ ಹಿನ್ನೆಲೆಯಲ್ಲಿ ನಾಗಪ್ರತಿಷ್ಠಾಪನೆ ಹೊರತುಪಡಿಸಿ ಇತರ ಎಲ್ಲ ಪೂಜೆಗಳು ಯಥಾಸ್ಥಿತಿ ನಡೆಯುತ್ತಿವೆ.
    ಕೃಷ್ಣರಾಜ ತಂತ್ರಿ, ಕುಡುಪು ದೇವಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts