More

    ರಾ.ಹೆ.169 ಅಗಲಕ್ಕೆ 3ನೇ ಅಧಿಸೂಚನೆ!

    – ವೇಣುವಿನೋದ್ ಕೆ.ಎಸ್, ಮಂಗಳೂರು
    ಎರಡು ಬಾರಿ ಅಧಿಸೂಚನೆ ಅರ್ಧಕ್ಕೇ ಮೊಟಕುಗೊಂಡ ಬಳಿಕ ಮಂಗಳೂರು-ಮೂಡುಬಿದಿರೆ ಮಧ್ಯೆ ರಾಷ್ಟ್ರೀಯ ಹೆದ್ದಾರಿ 169 ಅಗಲಗೊಳಿಸುವ ಕಾಮಗಾರಿಗೆ ಮೂರನೇ ಬಾರಿಗೆ ಅಧಿಸೂಚನೆ ಹೊರಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಜ್ಜಾಗಿದೆ.
    3 ಎ ಅಧಿಸೂಚನೆಯ ಕರಡನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಭೂಸ್ವಾಧೀನ ಅಧಿಕಾರಿಗಳು ಕಳುಹಿಸಿದ್ದು, ಅಲ್ಲಿಂದ ಅನುಮೋದನೆ ಪಡೆದ ಬಳಿಕ ಅಧಿಸೂಚನೆ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಮಂಗಳೂರಿನ ಕುಲಶೇಖರಿಂದ ಮೂಡುಬಿದಿರೆವರೆಗೆ 45 ಮೀಟರ್ ಅಗಲದ ಹೆದ್ದಾರಿಗಾಗಿ ಸರ್ವೇ ಆಗಿದೆ. ಆದರೆ, ಮಂಗಳೂರು ನಗರ ವ್ಯಾಪ್ತಿಯಲ್ಲಿ ಮಾತ್ರ ಇದಕ್ಕೆ ವಿನಾಯಿತಿ ನೀಡಿ 30 ಮೀಟರ್‌ಗೇ ಮಿತಿಗೊಳಿಸಬೇಕು ಎನ್ನುವ ವಾದವನ್ನು ಭೂ ಮಾಲೀಕರು ಮುಂದಿಟ್ಟಿದ್ದಾರೆ.

    ಯಾಕಾಗಿ ವಿಳಂಬ?: 2016ರಲ್ಲಿ ಮೊದಲ ಬಾರಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಪ್ರಕ್ರಿಯೆ ಸಕಾಲದಲ್ಲಿ ಪೂರ್ಣಗೊಳ್ಳದೆ ರದ್ದುಗೊಂಡಿತ್ತು. ನಿಯಮಾನುಸಾರ ಒಂದು ವರ್ಷದಲ್ಲಿ 3ಡಿ ಅಧಿಸೂಚನೆಯಾಗದಿದ್ದರೆ ಪ್ರಕ್ರಿಯೆ ರದ್ದಾಗುತ್ತದೆ. ಆ ಬಳಿಕ 2018ರಲ್ಲಿ ಮತ್ತೊಮ್ಮೆ ಅಧಿಸೂಚನೆಗೆ ಪ್ರಕ್ರಿಯೆ ನಡೆದರೂ ಕೇಂದ್ರದಿಂದ 3(ಡಿ) ಹೊರಡಿಸಲಾಗದೆ ಬಾಕಿಯಾಯಿತು. 2019ರಲ್ಲಿ ಮತ್ತೆ ಅಧಿಸೂಚನೆ ಮಾಡುವಂತೆ ಎನ್‌ಎಚ್‌ಎಐ ನಿರ್ದೇಶಿಸಿದಂತೆ ಭೂಸ್ವಾಧೀನ ಅಧಿಕಾರಿಗಳು ಈಗಾಗಲೇ ಕರಡು ಅಧಿಸೂಚನೆಯನ್ನು ಕೇಂದ್ರ ಕಚೇರಿಗೆ ಕಳುಹಿಸಿದ್ದಾರೆ. ಹೆದ್ದಾರಿ ಅಗಲಕ್ಕೆ 45 ಮೀ. ಭೂಸ್ವಾಧೀನ ಮಾಡುವ ಕುರಿತು ಸ್ಥಳೀಯರಿಂದ ಭೂಸ್ವಾಧೀನ ಮಾಡುವ ಬಗ್ಗೆ ವಿವಾದ ಉಂಟಾಗಿ ವಿಳಂಬಕ್ಕೆ ಕಾರಣವಾಯಿತು. 2018ರಲ್ಲೂ ಸರ್ವೆ ನಡೆದು, ಜಂಟಿ ಮಾಪನ ಪ್ರಮಾಣಪತ್ರ ಸಿದ್ಧಪಡಿಸಿ ಅಧಿಸೂಚನೆ ಹೊರಡಿಸಿ ಗ್ರಾಮಸ್ಥರಿಗೆ ಆಕ್ಷೇಪ ಸಲ್ಲಿಸಲು 3(ಸಿ) ಮೂಲಕ ನೋಟಿಸ್ ನೀಡಲಾಗಿತ್ತು. ಜಮೀನು ಕಳೆದುಕೊಳ್ಳುವವರ ವಿಚಾರಣೆಯೂ ನಡೆದಿತ್ತು. ಬಳಿಕ ರಾ.ಹೆ.ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಭೂಸ್ವಾಧೀನಾಧಿಕಾರಿಗಳು ಆನ್‌ಲೈನ್ ಮೂಲಕ ಅಧಿಸೂಚನೆಯನ್ನು ಕಳುಹಿಸಿದ್ದರು. ಇದು ನವದೆಹಲಿಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಕೆಯಾಗಿದ್ದು, 2019ರ ಅ.25ಕ್ಕೆ ಅಂತಿಮ ಅಧಿಸೂಚನೆ ಪ್ರಕಟಿಸಬೇಕಾಗಿತ್ತು. ಆದರೆ ಇದು ಕಾರ್ಯಗತವಾಗದೆ ಪ್ರಕ್ರಿಯೆ ರದ್ದಾಗಿದೆ.

    ನಗರ ವ್ಯಾಪ್ತಿಗೆ 30 ಮೀಟರ್ ಇರಲಿ: ಸೊಲ್ಲಾಪುರ-ಮಂಗಳೂರು ಹೆದ್ದಾರಿಯ ಭಾಗವಾಗಿರುವ ಕುಲಶೇಖರ-ಮೂಡುಬಿದಿರೆಯ ನಗರ ವ್ಯಾಪ್ತಿಯ ಕುಲಶೇಖರ- ವಾಮಂಜೂರುವರೆಗಿನ 2.5 ಕಿ.ಮೀಟರನ್ನು 30 ಮೀಟರ್‌ಗೇ ಸೀಮಿತಗೊಳಿಸಬೇಕು ಎನ್ನುವ ಒತ್ತಾಯವನ್ನು ಈ ಭಾಗದ ಭೂ ಮಾಲೀಕರ ಸಮಿತಿ ಮುಂದಿಟ್ಟಿದೆ. ಮೂರು ವರ್ಷದಿಂದಲೂ ಈ ಅಧಿಸೂಚನೆ ಹೊರಡಿಸಲಾಗಿರುವ ಜಮೀನಿನ ಉದ್ದಕ್ಕೂ ಪರಭಾರೆ, ಭೂಪರಿವರ್ತನೆ ಅಥವಾ ಅಡವು ಮಾಡುವಂತಿಲ್ಲ ಎಂಬ ನಿಯಮವಿದೆ. ಅಭಿವೃದ್ಧಿ ಕೂಡ ಮಾಡುವಂತಿಲ್ಲ. ಇದರಿಂದಾಗಿ ಹೆದ್ದಾರಿಯ ಇಕ್ಕೆಲಗಳ ಭೂ ಮಾಲೀಕರು ಸಮಸ್ಯೆ ಎದುರಿಸುತ್ತಿದ್ದಾರೆ. ಹೆದ್ದಾರಿ ನೆಪದಲ್ಲಿ ಕಳೆದ ಹಲವು ವರ್ಷದಿಂದ ಏನೂ ಮಾಡಲಾಗದ ಪರಿಸ್ಥಿತಿ ಎದುರಾಗಿದೆ. ದ.ಕ ಜಿಲ್ಲೆಯ ಪದವು, ಕುಡುಪು, ತಿರುವೈಲು, ಅಡ್ಡೂರು, ತೆಂಕುಳಿಪಾಡಿ, ಮೂಳೂರು, ಕಂದಾವರ, ಮೂಡುಪೆರಾರ, ಬಡಗ ಉಳಿಪಾಡಿ, ತೆಂಕ ಎಡಪದವು, ಬಡಗ ಎಡಪದವು, ತೆಂಕ ಮಿಜಾರು, ಬಡಗ ಮಿಜಾರು, ತೋಡಾರು, ಪುತ್ತಿಗೆ, ಮಾರ್ಪಾಡಿ, ಪಡುಮಾರ್ನಾಡು, ಬೆಳುವಾಯಿ. ಉಡುಪಿ ಜಿಲ್ಲೆಯ ಕಾಂತಾವರ ಹಾಗೂ ಸಾಣೂರು ಗ್ರಾಮಗಳನ್ನೊಳಗೊಂಡಂತೆ ಈ ಹೆದ್ದಾರಿ ಅಗಲ ಆಗಲಿದೆ.

    ಕೈಕಂಬದಲ್ಲಿ ಟೋಲ್: ಮೂರನೇ ಹಂತದ ಭೂಸ್ವಾಧೀನದ ಅಧಿಸೂಚನೆ ಮಾಡುವ ಸಂದರ್ಭ ಟ್ರಕ್ ಯಾರ್ಡ್ ಹಾಗೂ ಟೋಲ್ ಬೂತ್ ನಡೆಸಲು ಹೆಚ್ಚುವರಿ ಭೂಮಿ ಖರೀದಿಸಲು ಪ್ರಾಧಿಕಾರ ಸೂಚಿಸಿದೆ. ಕೈಕಂಬ ಸಮೀಪ ಟೋಲ್‌ಬೂತ್ ಹಾಗೂ ಸಾಣೂರು ಸಮೀಪ ಟ್ರಕ್‌ಯಾ ರ್ಡ್ ನಡೆಸಲು ಪ್ರಾಧಿಕಾರ ನಿರ್ಧರಿಸಿದೆ. ಈಗಾಗಲೇ 45 ಮೀ. ಅಗಲದಲ್ಲಿ ಭೂಮಿ ಖರೀದಿಸಲಾಗಿದ್ದು, ಡ್ರೈನೇಜ್, ಸರ್ವಿಸ್ ರಸ್ತೆ ಹಾಗೂ 4 ಪಥದ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.

    20ರಂದು ಸಭೆ: ಭೂಮಾಲೀಕರ ಹಲವು ಬೇಡಿಕೆಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಜ.20ರಂದು ಹೆದ್ದಾರಿ ಅಗಲೀಕರಣ ಭೂಮಾಲೀಕರ ಹೋರಾಟ ಸಮಿತಿಯ ಸಭೆ ಕರೆದಿದ್ದಾರೆ.

    ಕುಲಶೇಖರ-ಮೂಡುಬಿದಿರೆ ಹೆದ್ದಾರಿ ಸುಧಾರಣಾ ಯೋಜನೆಗಾಗಿ ಮತ್ತೊಮ್ಮೆ 3ಎ ಅಧಿಸೂಚನೆಗಾಗಿ ಎನ್‌ಎಚ್‌ಎಐಗೆ ಕರಡು ಸಲ್ಲಿಸಿದ್ದೇವೆ. ಬಂದ ಕೂಡಲೇ ಅಧಿಸೂಚನೆ ಪ್ರಕಟಗೊಳ್ಳುತ್ತದೆ. ಬಳಿಕ ಉಳಿದ ಪ್ರಕ್ರಿಯೆಗಳು ನಡೆಯಲಿವೆ. ಈಗಾಗಲೇ ಸಮೀಕ್ಷೆ ಸಹಿತ ಇತರ ಕೆಲಸಗಳು ಆಗಿರುವುದರಿಂದ ವಿಳಂಬವಾಗದು.
    -ಮೇಘನಾ ಆರ್, ಹೆದ್ದಾರಿ ವಿಶೇಷ ಭೂಸ್ವಾಧೀನ ಅಧಿಕಾರಿ, ಮಂಗಳೂರು

    2016ರಲ್ಲಿ ಆಗಿನ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಗರವ್ಯಾಪ್ತಿಯನ್ನು 30 ಮೀಟರ್‌ಗೇ ಸೀಮಿತ ಮಾಡಲು ನಿರ್ಧರಿಸಲಾಗಿತ್ತು. ಆದರೆ ಆ ಬಳಿಕ ಪ್ರಾಧಿಕಾರದ ಅಧಿಕಾರಿಗಳು ತಮ್ಮಷ್ಟಕ್ಕೇ 45 ಮೀಟರ್‌ಗೆ ಯೋಜನೆ ರೂಪಿಸಿದ್ದಾರೆ, ಇದು ಸರಿಯಲ್ಲ. ನಿಜಕ್ಕೂ ನಗರ ವ್ಯಾಪ್ತಿಯಲ್ಲಿ ಕನಿಷ್ಠ ಭೂಮಿ ಹೊಂದಿರುವ ನಮಗೆ ತೊಂದರೆಯಾಗುತ್ತದೆ. ಇಲ್ಲಿ 45 ಮೀಟರ್ ಅಗತ್ಯವೂ ಇಲ್ಲ.
    ಪ್ರಕಾಶ್ಚಂದ್ರ, ಸಂಚಾಲಕ, ರಾ.ಹೆ.ಭೂಮಾಲೀಕರ ಹೋರಾಟ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts