More

    ಭಾರಿ ಮಳೆಯಿಂದ ಅಂತರ್ಜಲ ಭರಪೂರ, ಕೂಡ್ಲಿಗಿ ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ

    ವಿಜಯವಾಣಿ ವಿಶೇಷ ಕೂಡ್ಲಿಗಿ
    ಅತಿ ಹೆಚ್ಚು ಕೆರೆಗಳು ಮತ್ತು ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಕೀರ್ತಿಗೆ ಪಾತ್ರವಾಗಿದ್ದ ತಾಲೂಕಿನ ಹಿರೆಕೆರೆ 12 ವರ್ಷಗಳ ನಂತರ ತುಂಬಿದ್ದು, ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ.

    ಬರ ಪೀಡಿತ ತಾಲೂಕಿನಲ್ಲಿ ಪ್ರಸಕ್ತ ವಷರ್ದ ಉತ್ತಮ ಮಳೆಯಿಂದಾಗಿ ಇರುವ ಕೆರೆಗಳು ಭರ್ತಿಯಾಗಿವೆ. ಇನ್ನೂ ಗೋಕಟ್ಟೆಗಳು, ಚೆಕ್‌ಡ್ಯಾಮ್‌ಗಳು, ಕೃಷಿ ಹೊಂಡಗಳು ಭರಪೂರವಾಗಿ ತುಂಬಿ ಹರಿಯುತ್ತಿವೆ. ಏಪ್ರಿಲ್ ನಿಂದ ಅಕ್ಟೋಬರ್‌ವರೆಗೂ ನಿಲ್ಲದ ಮುಸಲ ಧಾರೆಗೆ ಕೃಷಿಕರು ಸಂತಸಗೊಂಡಿದ್ದು, ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದಾರೆ.

    ಸತತ ಮಳೆಯಿಂದ ಅನೇಕ ಗ್ರಾಮಗಳ ಕೊಳೆವೆ ಬಾವಿಗಳಲ್ಲಿ ನೀರು ಅಧಿಕ ಪ್ರಮಾಣದಲ್ಲಿ ಲಭಿಸುವಂತಾಗಿದೆ. ಸೋವೆನಹಳ್ಳಿ, ಶಿವಪುರ, ಚೌಡಪುರ, ಕ್ಯಾಸನೆಕೆರೆ ಹಾಗೂ ಮಲ್ಲಪುರ ಗ್ರಾಮಗಳಲ್ಲಿನ ರೈತರ ಕೊಳವೆ ಬಾವಿಯಿಂದ ನೀರಿನ ಸೆಲೆ ತಾನಾಗಿ ಉಕ್ಕುತ್ತಿದೆ. ರೈತರುಪಂಪ್ ಸೆಟ್‌ಗಳನ್ನು ಮೇಲೆತ್ತುತ್ತಿದ್ದಾರೆ. ಇನ್ನೂ ಐದಾರು ವಷರ್ ಉತ್ತಮ ಬೆಳೆ ಪಡೆಯಬಹುದು ಎಂದು ಚೌಡಾಪುರ ಗ್ರಾಮದ ರೈತ ಸಿದ್ದಲಿಂಗಪ್ಪ ಹೇಳುತ್ತಾರೆ. ಅದರಂತೆ ಜಂಗಮ ಸೋವೆನಹಳ್ಳಿಯಲ್ಲೂ ಕೊಳವೆ ಬಾವಿಗಳಲ್ಲಿ ನೀರು ಉಕ್ಕುತ್ತಿವೆ. ಅಂತರ್ಜಲ ಹೆಚ್ಚಾಗಿದ್ದರಿಂದ ಫ್ಲೋರೈಡ್ ಅಂಶ ಕಡಿಯಾಗಿದೆ. ಇದರಿಂದ ಯೋಗ್ಯ ನೀರು ಸೇವಿಸುವಂತಾಗಿದೆ ಎಂದು ಗ್ರಾಮಸ್ಥರಾದ ನಂದಿ ವಿರೂಪಾಕ್ಷಿ ಸಂತಸ ವ್ಯಕ್ತ ಪಡಿಸಿದ್ದಾರೆ.

    600 ಅಡಿ ಆಳದಲ್ಲಿತ್ತು ನೀರು!: ಸದಾ ಬರವನ್ನೇ ಎದುರಿಸುತ್ತ ಬಂದಿದ್ದ ಕೂಡ್ಲಿಗಿ ತಾಲೂಕು ಸಂಪೂರ್ಣ ಮಳೆಯಾಶ್ರಿತ ಪ್ರದೇಶವಾಗಿದ್ದು, ಕೈಗಾರಿಕೆಗಳಿಲ್ಲದ ಕಾರಣ ಜನ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. 54 ಕೆರೆಗಳು ಈ ತಾಲೂಕಿನಲ್ಲಿದ್ದರೂ ಯಾವತ್ತೂ ಅವರು ತುಂಬಿರಲಿಲ್ಲ. ರೈತರು ಕೊಳವೆ ಬಾವಿ ಕೊರೆಯಿಸಿ ಕೃಷಿ ಮಾಡುತ್ತಿದ್ದಾರೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. 600 ಅಡಿ ಆಳದಲ್ಲಿ ನೀರು ಸಿಕ್ಕಿದ್ದು, ಕುಡಿಯಲು ಯೋಗ್ಯವಲ್ಲದ ನೀರು ಅಧಿಕವಾಗಿದೆ. ನೀರಿನಲ್ಲಿ ಅರ್ಸೆನಿಕ್ ಹಾಗೂ ಪ್ಲೋರೈಡ್ ಅಂಶ ಹೆಚ್ಚು. ಅನಿವಾರ್ಯವಾಗಿ ಇದೇ ನೀರನ್ನು ಸೇವಿಸುವ ಇಲ್ಲಿನ ಜನ ಚಿಕ್ಕ ವಯಸ್ಸಿನಲ್ಲೇ ಮುದುಕರಂತೆ ಕಾಣುತ್ತಾರೆ. ಅಂಗ ಊನತೆ, ಅನಾರೋಗ್ಯ ಇಲ್ಲಿನ ಜನರನ್ನು ಕಾಡುತ್ತಿದೆ. ಈಗ ಮಳೆಯಿಂದಾಗಿ ನೀರಿನ ಸೆಲೆ ಮೇಲೆ ಬಂದಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಐದು ವರ್ಷಗಳಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಅವಶ್ಯವಿದ್ದ ಕಡೆ ಅರಣ್ಯ ಪ್ರದೇಶಗಳಲ್ಲಿ ಗೋಕಟ್ಟೆ, ಚೆಕ್‌ಡ್ಯಾಮ್ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ. ಅದರಂತೆ ನರೇಗಾದಲ್ಲೂ ಕೆರೆ ಹಾಗೂ ಕಟ್ಟೆಗಳ ಹೂಳನ್ನು ತಗೆದಿರುವುದು ಸಹಾಯವಾಗಿದೆ. ಇದರಿಂದಾಗಿ ಕೆರೆ-ಕುಂಟೆಗಳ ಮರುಪೂರಣವಾಗಿದೆ. ಭೂಮಿ ನೀರನ್ನು ಹೀರಿಕೊಳ್ಳಲು ಸಹಕಾರಿಯಾಗಿದ್ದು, ಅಂತರ್ಜಲ ಪ್ರಮಾಣ ಹೆಚ್ಚಾಗಿದೆ.
    | ಎಂ.ಬಸವರಾಜ, ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ, ಕಕ್ಕುಪ್ಪಿ

    ಪ್ರಸಕ್ತ ಸಾಲಿನಲ್ಲಿ ಮಳೆ ವಾಡಿಕೆಗಿಂತ ಹೆಚ್ಚಿಗೆ ಸುರಿದಿದೆ. ಕೆರೆ-ಕಟ್ಟೆ, ಕೃಷಿ ಹೊಂಡಗಳು ಭರ್ತಿಯಾಗಿವೆ. ಅಂತರ್ಜಲ ಮರುಪೂರಣವಾಗಿದೆ. ಅಕ್ಟೋಬರ್‌ನಲ್ಲಿ ವಾಡಿಕೆ ಮಳೆ 53.5 ಮಿ.ಮೀ.ಆಗಬೇಕಿತ್ತು. ಆದರೆ, 113.8 ಮಿ.ಮೀ. ಮಳೆಯಾಗಿದೆ. ಇದರಿಂದ ಸಹಜವಾಗಿ ಕೊಳವೆ ಬಾವಿಗಳಿಂದ ನೀರು ಬರುತ್ತಿವೆ.
    | ಅನಿಲ್ ಕುಮಾರ್, ಕೃಷಿ ಸಹಾಯಕ ನಿರ್ದೇಶಕ, ಕೂಡ್ಲಿಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts