More

    ಕೂಡಲಸಂಗಮ: ಸನಾತನ ಧರ್ಮದ ಆಧಾರದ ಮೇಲೆ ಅನುಭವ ಮಂಟಪ ನಿರ್ಮಿಸಲು ಸರ್ಕಾರ ಹೊರಟ್ಟಿದೆ. ಶರಣರ ಧರ್ಮಕ್ಕೆ ಸನಾತನ ಧರ್ಮ ತಗಲು ಹಾಕುವ ಕಾರ್ಯವನ್ನು ಸರ್ಕಾರ ಮಾಡಬಾರದು ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

    ಕೂಡಲಸಂಗಮದಲ್ಲಿ 34ನೇ ಶರಣ ಮೇಳದ 2ನೇ ದಿನ ಬುಧವಾರ ರಾತ್ರಿ ನಡೆದ ಬಸವ ಧರ್ಮ ಮಹಾಜಗದ್ಗುರು ಪೀಠದ 29ನೇ ಪೀಠಾರೋಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಅನುಭವ ಮಂಟಪಕ್ಕೆ ಸರ್ಕಾರ ಅನುದಾನ ಕೊಟ್ಟಿರುವುದು ಸಂತೋಷದ ಸಂಗತಿ ಎಂದು ಹೇಳಿದರು.

    ಸನಾತನ, ವೈಧಿಕ ಧರ್ಮ ದಿಕ್ಕರಿಸಿ ಬಂದಿದ್ದೇ ಶರಣ ಧರ್ಮ. ಶರಣ ಧರ್ಮದ ಮರುಸೃಷ್ಟಿಯೇ ಅನುಭವ ಮಂಟಪ. ಪೀಠಾರೋಹಣ ಎಂದರೇ ರಂಜಿತ ಅಲ್ಲ, ಆಡಂಬರ, ವೈಭವವೂ ಅಲ್ಲ. ಸಮಾಜದ ಸಮಸ್ಯೆಗಳಿಗೆ ಉತ್ತರ ಕೊಡುವುದು. ಪೀಠ ಎಂದರೇ ಕುಳಿತುಕೊಳ್ಳುವುದು ಅಲ್ಲ ನಮ್ಮ ಧರ್ಮದ ಇತಿಹಾಸ ತಿಳಿಸುವುದು. ಯುವಕರಿಗೆ ಪೀಠದ ಬಗ್ಗೆ ತಿಳಿಸುವ ಕಾರ್ಯವನ್ನು ಮಾಡಬೇಕು. ಜಗತ್ತಿನಲ್ಲಿ ಎರಡು ಪೀಠಗಳು ಇದ್ದು ಒಂದು ಅಕ್ಕಮಹಾದೇವಿ ಅನುಭಾವ ಪೀಠವಾದರೆ ಇನ್ನೊಂದು ಬಸವ ಧರ್ಮ ಪೀಠ. ತತ್ವಕ್ಕಾಗಿ ಜಂಗಮ ದೀಕ್ಷೆ ಪಡೆಯುವವರು ವಿರಳ. ಪ್ರಸ್ತುತ ಬಸವ ಧರ್ಮ ಪೀಠದಲ್ಲಿ ಅನೇಕರು ಜಂಗಮ ದೀಕ್ಷೆ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ. ಲಿಂಗಾಯತ ಧರ್ಮ ಉಳಿಸಿ ಬೆಳೆಸುವ ಕಾರ್ಯವನ್ನು ಮಠಾಧೀಶರು ಮಾಡಬೇಕು ಎಂದರು.

    ಬಸವಧರ್ಮ ಮಹಾಜಗದ್ಗುರು ಪೀಠದ 29ನೇ ಪೀಠಾರೋಹಣ ಸ್ವೀಕರಿಸಿ ಜಗದ್ಗುರು ಮಾತೆ ಗಂಗಾದೇವಿ ಮಾತನಾಡಿ, ಸರ್ಕಾರ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವವರೆಗೂ ನಿರಂತರ ಹೋರಾಟ ನಡೆಯುವುದು. ಹೈದರಾಬಾದ, ಪುಣೆಯಲ್ಲಿ ಲಿಂಗಾಯತ ಸಮಾವೇಶ ಹಮ್ಮಿಕೊಳ್ಳುವ ಯೋಜನೆ ರೂಪಿಸುತ್ತಿದ್ದೇವೆ. ಕೆಲವೇ ದಿನಗಳಲ್ಲಿ ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಹೇಳಿದರು.

    ಬಸವ ಧರ್ಮ ಪೀಠದ ಉಪಾಧ್ಯಕ್ಷ ಮಹಾದೇಶ್ವರ ಸ್ವಾಮೀಜಿ ಮಾತನಾಡಿ, ಮಾತೆ ಗಂಗಾದೇವಿ ಅವರ ನಾಯಕತ್ವದಲ್ಲಿ ಬಸವ ಧರ್ಮ ಪೀಠದ ಎಲ್ಲ ಜಂಗಮ ಮೂರ್ತಿಗಳು ನಡೆಯಬೇಕಿದೆ. ಮಾತಾಜಿ ಅವರ ಸಂಕಲ್ಪದಂತೆ ಕೂಡಲಸಂಗಮದಲ್ಲಿ 300 ಅಡಿ ಉದ್ದ, 200 ಅಡಿ ಅಗಲದ ಶಾಶ್ವತ ಸಭಾಭವನ ನಿರ್ಮಿಸಲಾಗುತ್ತಿದೆ ಎಂದರು.

    ಸಮಾರಂಭದ ಉದ್ಘಾಟನೆಯನ್ನು ಹಾವೇರಿ ವೈದ್ಯ ಮುರಳೀಧರ ಮಾಡಿದರು. ಸಚ್ಚಿದಾನಂದ ಚಟ್ನಳ್ಳಿ ಬಸವ ಧರ್ಮದ ತ್ರಿರತ್ನಗಳು ವಿಷಯ ಕುರಿತು ಉಪನ್ಯಾಸ ನೀಡಿದರು. ಕಲಬುರ್ಗಿಯ ನಿವೃತ್ತ ಕೆ.ಎ.ಎಸ್. ಅಧಿಕಾರಿ ದಿವಾಕರ್ ಶರಣಪ್ಪ ಅವರಿಗೆ ಶರಣ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಸವ ಧರ್ಮ ಪೀಠದ ಎಲ್ಲ ಜಂಗಮಮೂರ್ತಿಗಳು, ಬಸವ ವಾಹಿನಿ ಮುಖ್ಯಸ್ಥ ಈ. ಕೃಷ್ಣಪ್ಪ ಮುಂತಾದವರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts