More

    ಕೂಡಗಿ ಸ್ಥಾವರದಲ್ಲಿ ಕರಗುತ್ತಿದೆ ಕಾರ್ಮಿಕರ ಸಂಖ್ಯೆ

    ಡಿ.ಬಿ. ಕುಪ್ಪಸ್ತ ಗೊಳಸಂಗಿ

    ಲಾಕ್‌ಡೌನ್‌ನಿಂದಾಗಿ ವಿದ್ಯುತ್ ಬೇಡಿಕೆ ಸಂಪೂರ್ಣ ಕುಸಿದಿರುವುದರಿಂದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಚಾಲನೆಯಲ್ಲಿದ್ದ ಮೂರೂ ಘಟಕಗಳು ಸ್ತಬ್ಧಗೊಂಡಿವೆ.
    ಒಂದು ಕಾಲದಲ್ಲಿ 8-10 ರಾಜ್ಯಗಳ ನಾಲ್ಕೈದು ಸಾವಿರ ಸಂಖ್ಯೆಯಲ್ಲಿ ಕಾರ್ಮಿಕರನ್ನು ದುಡಿಸಿಕೊಂಡ ಕೂಡಗಿ ಎನ್‌ಟಿಪಿಸಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಕರೊನಾ ಕಂಪನದಿಂದಾಗಿ ಕೇವಲ 600 ದಿನಗೂಲಿ ಕಾರ್ಮಿಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.
    ಪ್ರಸ್ತುತ ಮೂರು ಘಟಕಗಳಿಂದ ತಲಾ 800 ನಂತೆ 2400 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಕೂಡಗಿ ಸ್ಥಾವರ ಹೊಂದಿದೆ. ಈ ಸ್ಥಾವರದಿಂದ ಕರ್ನಾಟಕ ಸೇರಿ ನೆರೆ ರಾಜ್ಯಗಳಿಗೆ ಸಹಸ್ರಾರು ಮೆಗಾವಾಟ್ ವಿದ್ಯುತ್ ಪೂರೈಸಲಾಗುತ್ತಿತ್ತು. ಆಯಾ ರಾಜ್ಯಗಳಲ್ಲಿ ಚಾಲನೆಯಲ್ಲಿದ್ದ ಕೈಗಾರಿಕೆಗಳ ಜತೆಗೆ ವಾಣಿಜ್ಯೋದ್ಯಮಗಳು ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ವಿದ್ಯುತ್ ಬೇಡಿಕೆಯಲ್ಲೂ ಕುಸಿತ ಕಂಡಿದೆ. ಹೀಗಾಗಿ ಕೂಡಗಿ ಎನ್‌ಟಿಪಿಸಿಯಲ್ಲಿ ಚಾಲ್ತಿಯಲ್ಲಿದ್ದ ಮೂರು ಘಟಕಗಳು ಸ್ತಬ್ಧಗೊಂಡಿವೆ. ಎರಡು ನೂತನ ಘಟಕಗಳ ನಿರ್ಮಾಣ ಕಾರ್ಯವೂ ನಿಂತಿದೆ. ಜತೆಗೆ ಎನ್‌ಟಿಪಿಸಿ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ, ರಸ್ತೆ ಮತ್ತಿತರ ಕಾಮಗಾರಿಗಳನ್ನು ನಡೆಸಬಾರದು. ಬರೀ ವಿದ್ಯುತ್ ಉತ್ಪಾದನೆಗೆ ಮಾತ್ರ ಕೇಂದ್ರ ಸರ್ಕಾರ ಅವಕಾಶ ನೀಡಿದ್ದರಿಂದ ಸ್ಥಾವರ ಈಗ ಭಣಗುಡುತ್ತಿದೆ.
    ನೆರೆ ರಾಜ್ಯ, ನೆರ ಜಿಲ್ಲೆ ಹಾಗೂ ವಿಜಯಪುರ ನಗರದಿಂದ ಬರುತ್ತಿದ್ದ ಸಾವಿರಾರು ಕಾರ್ಮಿಕರಿಗೆ ತಾತ್ಕಾಲಿಕ ಗೇಟ್‌ಪಾಸ್ ನೀಡಿರುವ ಸ್ಥಾವರ ತನ್ನ ವ್ಯಾಪ್ತಿಯ ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಮತ್ತು ಮುತ್ತಗಿ ಗ್ರಾಮಗಳ 600 ಕಾರ್ಮಿಕರಿಗೆ ಮಾತ್ರ ಕೆಲಸ ನೀಡಿದೆ.

    ಮಸೂತಿ ಕಾರ್ಮಿಕರಿಗೆ ಜೀತಿ

    ಕೂಡಗಿ ಎನ್‌ಟಿಪಿಸಿಯಲ್ಲಿ ಕಾರ್ಯ ನಿರ್ವಹಿಸುವ ಕೆಲ ಕಾರ್ಮಿಕರಿಗೆ ಕರೊನಾ ತಗಲುವ ಸಾಧ್ಯತೆ ಇದೆ ಎಂಬ ಗಾಳಿಮಾತನ್ನೇ ನಂಬಿದ ಗೊಳಸಂಗಿ ಸಮೀಪದ ಮಸೂತಿ ಗ್ರಾಮಸ್ಥರು ತಮ್ಮೂರಿನಿಂದ ಸ್ಥಾವರಕ್ಕೆ ತೆರಳುವ ಕಾರ್ಮಿಕರಿಗೆ ದಿಗ್ಬಂಧನ ಹಾಕಿದ್ದಾರೆ.

    ಕರೊನಾ ಕಟ್ಟೆಚ್ಚರದ ಕಾಲಾವಧಿ ಮುಗಿಯುವವರೆಗೂ ತಾವ್ಯಾರೂ ಎನ್‌ಟಿಪಿಸಿ ಕೆಲಸಕ್ಕೆ ಹೋಗುವಂತಿಲ್ಲ. ಹಾಗೊಂದು ವೇಳೆ ಹೋದರೂ ಲಾಕ್‌ಡೌನ್ ಅವಧಿ ಪೂರ್ಣಗೊಳ್ಳುವವರೆಗೂ ಗ್ರಾಮ ಪ್ರವೇಶ ಮಾಡಕೂಡದು ಎಂಬ ಅಘೋಷಿತ ದಿಗ್ಬಂಧನದಿಂದ ಸ್ಥಾವರಕ್ಕೆ ತೆರಳುವ ಅಂದಾಜು 20 ಕಾರ್ಮಿಕರಿಗೆ ಜೀತಿ ಎದುರಾಗಿದೆ.

    5 ರಾಜ್ಯಗಳಲ್ಲಿ ವಿದ್ಯುತ್ ಬೇಡಿಕೆ ಕುಸಿದಿದೆ. ಕೂಡಗಿ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಆಪರೇಷನ್ ಮತ್ತು ಮೆಂಟೇನೆನ್ಸ್ ಹೊರತುಪಡಿಸಿ ಸಿವಿಲ್ ಕಾಮಗಾರಿಗೆ ನಿಷೇಧ ಇರುವುದರಿಂದ 600 ಕಾರ್ಮಿಕರನ್ನು ಮಾತ್ರ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ.
    ಪಿ.ಎ. ಜಾನ್ ಪಿಆರ್‌ಒ, ಎಚ್‌ಆರ್ ವಿಭಾಗ-ಎನ್‌ಟಿಪಿಸಿ ಕೂಡಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts