More

    ಕೆಎಸ್‌ಆರ್‌ಟಿಸಿ ಪಾಸ್ ಗೊಂದಲ

    ಅವಿನ್ ಶೆಟ್ಟಿ ಉಡುಪಿ

    ಗ್ರಾಮೀಣ ಮಕ್ಕಳ ಶಾಲೆ, ಕಾಲೇಜು ಓಡಾಟಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮ ನೀಡುವ ರಿಯಾಯಿತಿ ದರದ ಪಾಸ್ ಪಡೆಯಲು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಪಾಲಕರು ಸರಿಯಾದ ಮಾಹಿತಿ ಇಲ್ಲದೆ ಪರದಾಡುವಂತಾಗಿದೆ.
    ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಪಾಸ್ ಪ್ರಕ್ರಿಯೆ ಮುಂದೂಡಿ, ಸದ್ಯ ಹಳೆಯ ಪಾಸನ್ನೇ ಪರಿಗಣಿಸುವಂತೆ ಕೆಎಸ್‌ಆರ್‌ಟಿಸಿ ನಿರ್ದೇಶನ ನೀಡಿತ್ತು. ಹಳೆಯ ಪಾಸ್ ಅವಧಿ ಜ.31ಕ್ಕೆ ಮುಗಿಯಲಿದೆ. ವಿದ್ಯಾರ್ಥಿಗಳು ಅರ್ಜಿ ಹಾಕಿ ಹೊಸ ಪಾಸ್ ಪಡೆಯಬೇಕಿದೆ. ಆದರೆ ಈ ಬಗ್ಗೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದು ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಪಾಲಕರ ಆರೋಪ.
    ಕುಂದಾಪುರ ಕೆಎಸ್‌ಆರ್‌ಟಿಸಿ ಡಿಪೊ ವ್ಯಾಪ್ತಿಗೆ ಬರುವ ಗೋಳಿಯಂಗಡಿ ಪರಿಸರದ ಬೆಳ್ವೆ, ಹಾಲಾಡಿ, ಬೇಳಂಜೆ, ಶೇಡಿಮನೆ, ಗಲ್ಬಾಡಿಯಿಂದ ಹೆಬ್ರಿಯಲ್ಲಿರುವ ಶಾಲೆ, ಕಾಲೇಜಿಗೆ ತೆರಳುವ 50ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಮುಂದಿನ ತಿಂಗಳಿನಿಂದ ಹೊಸ ಪಾಸ್ ಕಡ್ಡಾಯ. ಇಲ್ಲದಿದ್ದಲ್ಲಿ ಪೂರ್ಣ ಶುಲ್ಕ ಭರಿಸಬೇಕು ಎಂದು ಬಸ್ ನಿರ್ವಾಹಕರು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ. ವಿದ್ಯಾರ್ಥಿಗಳು, ಪಾಲಕರು ಸೈಬರ್ ಸೆಂಟರ್‌ನಲ್ಲಿ ಪಾಸ್ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿ, ದಾಖಲೆ ಸಹಿತ ಕುಂದಾಪುರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೋದಾಗ ಆದೇಶ ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಡಿಪೋಗೆ ಕರೆ ಮಾಡಿದಾಗ ಸ್ಪಂದನೆಯೇ ಇಲ್ಲ ಎನ್ನುತ್ತಾರೆ ಪಾಲಕರು.

    ಮಂಗಳೂರಲ್ಲಿ ಕೇಳಿ ಅಂತಾರೆ!
    ಗೋಳಿಯಂಗಡಿ, ಬೆಳ್ವೆ, ಸಿದ್ಧಾಪುರದ ಪರಿಸರದ ವಿದ್ಯಾರ್ಥಿಗಳ ಪಾಲಕರು ವಾರದ ಹಿಂದೆ ಕುಂದಾಪುರದ ಡಿಪೊ, ಬಸ್ ನಿಲ್ದಾಣಕ್ಕೆ ಮೂರ್ನಾಲ್ಕು ಸಲ ತೆರಳಿ ಪಾಸ್ ಬಗ್ಗೆ ವಿಚಾರಣೆ ಮಾಡಿದ್ದಾರೆ. ‘ಇನ್ನೂ ಆದೇಶ ಬಂದಿಲ್ಲ. ಮಂಗಳೂರಲ್ಲಿ ಕೇಳಿ’ ಎಂಬ ಉತ್ತರ ಸಿಕ್ಕಿದೆ. ಉಡುಪಿ ಕೆಎಸ್‌ಆರ್‌ಟಿಸಿ ಕಚೇರಿಯಲ್ಲಿ ವಿಚಾರಿಸಿದರೆ, ‘ಕುಂದಾಪುರದಲ್ಲಿಯೇ ಪಾಸ್ ಇದೆ, ಅಲ್ಲಿ ವಿಚಾರಿಸಿ’ ಎಂಬುದು ಉತ್ತರ. ಯಾರೂ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮಾಹಿತಿಯಿಂದ ವಂಚಿತರಾಗುತ್ತಿದ್ದಾರೆ ಎನ್ನುತ್ತಾರೆ ಗೋಳಿಯಂಗಡಿ ನಿವಾಸಿ ಜಯರಾಮ ಶೆಟ್ಟಿ.

    ಸಮಸ್ಯೆ ಇದ್ದಲ್ಲಿ ಸಂಪರ್ಕಿಸಿ
    ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ, ಕೆಎಸ್‌ಆರ್‌ಟಿಸಿ ನಿಗಮದ ಪಾಸ್ ಕೌಂಟರ್‌ನಲ್ಲಿ ರಸೀದಿ ಸಲ್ಲಿಸಿ, ಶುಲ್ಕ ನೀಡಿ ಪಾಸ್ ಪಡೆಯಬಹುದು. ಸಮಸ್ಯೆಗಳಿದ್ದರೆ ಮಂಗಳೂರು ಕೆಎಸ್‌ಆರ್‌ಟಿಸಿ ಡಿವಿಜನ್ ಟ್ರಾಫಿಕ್ ಆಫೀಸರ್ 7760990702, ಅಸಿಸ್ಟೆಂಟ್ ಡಿವಿಜನ್ ಟ್ರಾಫಿಕ್ ಆಫೀಸರ್ 7760990711 ಅವರನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವಿದ್ಯಾರ್ಥಿಗಳಿಗೆ ಪಾಸ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಲವು ಕಡೆ ಗೊಂದಲ ಇರಬಹುದು. ಸಮಸ್ಯೆ ಇದ್ದಲ್ಲಿ ನಿಗಮದ ಕಚೇರಿ ಸಂಪರ್ಕಿಸಬಹುದು. ಗ್ರಾಮೀಣ ಭಾಗದ ವಿದ್ಯಾರ್ಥಿ, ಪಾಲಕರಿಗೆ ಸರಿಯಾಗಿ ಸ್ಪಂದಿಸುವಂತೆ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
    ಎಚ್.ಎಸ್.ಅರುಣ್, ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ

    ಪುತ್ರಿಯ ಬಸ್ ಪಾಸ್‌ಗಾಗಿ ಕುಂದಾಪುರಕ್ಕೆ ಮೂರ್ನಾಲ್ಕು ಬಾರಿ ಹೋಗಬೇಕಾಯಿತು. ಆದೇಶ ಬಂದಿಲ್ಲ. ಮಂಗಳೂರಲ್ಲಿ ಕೇಳಿ ಎಂದರು. ಹಲವರಿಗೆ ಇದೇ ರೀತಿಯ ಸಮಸ್ಯೆಯಾಗಿದೆ.
    -ಜಯರಾಮ ಶೆಟ್ಟಿ, ಗೋಳಿಯಂಗಡಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts