More

    ಕೆಎಸ್​ಸಿಎನಲ್ಲಿ ಕನ್ನಡ ಮರೀಚಿಕೆ: ಕನ್ನಡದಲ್ಲಿಲ್ಲ ಪತ್ರ ವ್ಯವಹಾರ ದೂರು ದಾಖಲು

    | ದೇವರಾಜ್ ಎಲ್. ಬೆಂಗಳೂರು

    ರಾಜ್ಯದೆಲ್ಲೆಡೆ ಕನ್ನಡದ ಅಭಿಯಾನ ನಡೆಯುತ್ತಿದೆ. ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಹಕ್ಕೊತ್ತಾಯಗಳು ಕೇಳಿ ಬರುತ್ತಿರುವ ಮಧ್ಯೆಯೇ ಕನ್ನಡ ಭಾಷೆ ಬಳಕೆ ಮಾಡದೆ, ಕನ್ನಡ ಕ್ರೀಡಾಪಟುಗಳಿಗೂ ಪ್ರೋತ್ಸಾಹ ನೀಡದೆ, ಕರ್ನಾಟಕದ ಸೌಲಭ್ಯವನ್ನು ಮಾತ್ರ ‘ದಿ ಕರ್ನಾಟಕ ಕ್ರಿಕೆಟ್ ಸ್ಟೇಟ್ ಅಸೋಸಿಯೇಷನ್’(ಕೆಎಸ್​ಸಿಎ) ಬಳಕೆ ಮಾಡುಕೊಳ್ಳುತ್ತಿದೆ ಎಂಬ ಆರೋಪಕ್ಕೆ ತುತ್ತಾಗಿದೆ.

    ರಾಜ್ಯದಲ್ಲಿ ಕನ್ನಡಿಗರಿಗೆ ಮೀಸಲಾಗಿರುವ ಯಾವುದೇ ಸೌಲಭ್ಯ ನೀಡಬೇಕಾದಲ್ಲಿ ಕನಿಷ್ಠ 10 ವರ್ಷ ಕರ್ನಾಟಕದಲ್ಲಿ ನೆಲಸಿರಬೇಕೆಂಬ ನಿಯಮ ಇದೆ. ಈ ನಿಯಮವನ್ನೇ ರಾಜ್ಯದಲ್ಲಿ ಸಿಇಟಿ ಸೀಟು ಪಡೆಯುವುದಕ್ಕೂ ಅನ್ವಯಿಸಲಾಗುತ್ತದೆ. ಬೆಂಗಳೂರಿನಲ್ಲಿ ಸರ್ಕಾರ ನಿವೇಶನ ಪಡೆಯಬೇಕಾದಲ್ಲಿ ಕನಿಷ್ಠ 5 ವರ್ಷ ಬೆಂಗಳೂರಿನಲ್ಲಿ ನೆಲಸಿರಬೇಕೆಂಬ ನಿಯಮ ಇದೆ.

    ಹೀಗಿರುವಾಗ ಕೆಎಸ್​ಸಿಎ ನೀಡುವ ತರಬೇತಿಯಲ್ಲಿ ಕೇವಲ ಎರಡು ವರ್ಷ ಕರ್ನಾಟಕದಲ್ಲಿ ವ್ಯಾಸಂಗ ಮಾಡಿದರೆ ಸಾಕು ಎಂಬ ನಿಯಮ ವಿಧಿಸಿದೆ. ಇದನ್ನೇ ಲಾಭವಾಗಿ ಮಾಡಿಕೊಂಡಿರುವ ಹೊರರಾಜ್ಯದ ಅಭ್ಯರ್ಥಿಗಳು ದುಡ್ಡುಕೊಟ್ಟು ಸುಲಭವಾಗಿ ಪ್ರಮಾಣಪತ್ರ ತಂದು ಕ್ರೀಡಾ ತರಬೇತಿಯಲ್ಲಿ ನುಸುಳುತ್ತಿದ್ದಾರೆಂಬ ಆರೋಪ ಇದೆ. ಈ ಸಂಬಂಧ ಆರ್​ಟಿಐ ಕಾರ್ಯಕರ್ತ ಮರಿಲಿಂಗನಗೌಡ ಮಾಲಿಪಾಟೀಲ್ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ.

    ಅಭ್ಯರ್ಥಿ ಅನರ್ಹ

    ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಮಧ್ಯಪ್ರದೇಶದ ಇಂದೋರ್​ಗೆ ತೆರಳಿದ್ದ ಕರ್ನಾಟಕದ 19 ವರ್ಷದೊಳಗಿನವರ ತಂಡದ ಆಟಗಾರ ಸಂಜಯ್ ಅಶ್ವಿನ್ ಅವರನ್ನು ಬಿಸಿಸಿಐ ಅನರ್ಹಗೊಳಿಸಿತ್ತು. ಅಭ್ಯರ್ಥಿ ನೀಡಿರುವ ವಿಳಾಸದ ದಾಖಲೆಗಳು ಸೂಕ್ತವಿಲ್ಲ ಎಂದು ತಿಳಿಸಿತ್ತು. ಇದು ದಾಖಲೆಗಳನ್ನು ತಿದ್ದುಪಡಿ ಮಾಡಿರುವುದಕ್ಕೆ ಸಾಕ್ಷಿ ಎಂಬಂತಾಗಿದೆ ಎಂದು ಮರಿಲಿಂಗನ ಗೌಡ ಆರೋಪಿಸಿದ್ದಾರೆ.

    ಕನ್ನಡ ವ್ಯವಹರಿಸುವುದಿಲ್ಲ

    ಕೆಎಸ್​ಸಿಎನಲ್ಲಿ ಕನ್ನಡ ಎಂಬುದು ಮರಿಚೀಕೆಯಾಗಿದೆ. ಕನ್ನಡದಲ್ಲಿ ಪತ್ರ ವ್ಯವಹಾರ ನಡೆಸುವುದಿಲ್ಲ. ಕನ್ನಡದಲ್ಲಿ ಲೆಟರ್ ಹೆಡ್ ಸಹ ಹೊಂದಿಲ್ಲ. ಕನ್ನಡ ಆಟಗಾರರಿಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಕೆಎಸ್​ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಕೇರಳದವರಾಗಿದ್ದು, ಅಲ್ಲಿಯವರನ್ನೇ ಕರೆತಂದು ಮಿಂಚುವಂತೆ ಮಾಡುತ್ತಿದ್ದಾರೆ. ಉದಾಹರಣೆಗೆ ಕರಣ್ ನಾಯರ್ ಮತ್ತು ದೇವದತ್ತ ಪಡಿಕಲ್ ಮೂಲತಃ ಕೇರಳದವರು ಎಂಬುದನ್ನು ದೂರಿನಲ್ಲಿ ಮರಿಲಿಂಗನ ಗೌಡ ಉಲ್ಲೇಖಿಸಿದ್ದಾರೆ.

    ಕನ್ನಡ ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ

    ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕರ್ನಾಟಕ ಕ್ರಿಕೆಟ್ ವಲಯದಲ್ಲಿ ಕನ್ನಡಿಗರು ಅಥವಾ ಕನ್ನಡವನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವಕ್ತಾರ ಹಾಗೂ ಖಜಾಂಚಿ ವಿನಯ್ ಮೃತ್ಯುಂಜಯ ಹೇಳಿದ್ದಾರೆ. ಕೆಎಸ್​ಸಿಎ ವಲಯದಲ್ಲಿ ಕನ್ನಡ ಹಾಗೂ ಕನ್ನಡಿಗರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರ ದಾಖಲಾಗಿರುವ ಬಗ್ಗೆ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ ಅವರು, ಕೆಎಸ್​ಸಿಎಗೆ ಯಾವುದೇ ನೋಟಿಸ್ ಬಂದಿಲ್ಲ. ಒಂದು ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ನೋಟಿಸ್ ಬಂದರೂ ಸೂಕ್ತ ರೀತಿಯಲ್ಲಿ ಉತ್ತರ ನೀಡಲಾಗುವುದು ಎಂದು ಹೇಳಿದರು. ಕೆಎಸ್​ಸಿಎ ಪದಾಧಿಕಾರಿಗಳ ಕೊಠಡಿಗಳಿಗೆ ಕನ್ನಡದಲ್ಲಿಯೇ ನಾಮಫಲಕಗಳ ಹಾಕಲಾಗಿದೆ. ಆಡಳಿತದಲ್ಲೂ ಬಹುತೇಕ ಕನ್ನಡದಲ್ಲಿಯೇ ವ್ಯವಹಾರ ನಡೆಯುತ್ತಿದೆ. ಸಂಪರ್ಕಕ್ಕೆ ಸುಲಭವಾಗುವ ದೃಷ್ಟಿಯಿಂದ ಇಂಗ್ಲಿಷ್​ನಲ್ಲಿ ಲೆಟರ್​ಹೆಡ್ ಬಳಸುತ್ತಿದ್ದು, ಸದ್ಯದಲ್ಲಿಯೇ ಕನ್ನಡದಲ್ಲೂ ಉಪಯೋಗಿಸಲಾಗುವುದು ಎಂದರು.

    ಯಾರು ಏನಂತಾರೆ?

    ಕೆಎಸ್​ಸಿಎನಲ್ಲಿ ಕನ್ನಡಿಗರೇತರರೇ ಹೆಚ್ಚಾಗಿದ್ದಾರೆ. ಕನ್ನಡದ ಆಟಗರರಿಗೆ ಬೆಲೆ ಇಲ್ಲದಂತಾಗಿದೆ. ತನಿಖೆ ನಡೆಸಿದಲ್ಲಿ ಸಾಕಷ್ಟು ಸತ್ಯಗಳು ಹೊರ ಬರಲಿದೆ. ಕನ್ನಡ ವಿರೋಧಿ ಸಂಸ್ಥೆ ಮೇಲೆ ಕಠಿಣ ಕ್ರಮ ಜರುಗಿಸಬೇಕು.

    |ಮರಿಲಿಂಗನಗೌಡ ಮಾಲಿಪಾಟೀಲ್, ಸಾಮಾಜಿಕ ಕಾರ್ಯಕರ್ತ

    ದೂರು ಬಂದಿದೆ. ಕಳೆದ ವಾರದಿಂದ ನಾನು ಕನ್ನಡಕ್ಕಾಗಿ ನಾವು ಎಂಬ ಅಭಿಯಾನದಲ್ಲಿ ಸಕ್ರಿಯನಾಗಿದ್ದು, ದೂರು ಪರಿಶೀಲಿಸಲು ಬಿಡುವು ಆಗಿಲ್ಲ. ಆನಂತರ ನೋಡಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ.

    |ಟಿ.ಎಸ್. ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

    ವಿನೂ ಮಂಕಡ್ ಟೂರ್ನಿಯಲ್ಲಿ ಕರ್ನಾಟಕದ 19 ವಯೋಮಿತಿ ತಂಡದ ಆಟಗಾರ ಸಂಜಯ್ ಅಶ್ವಿನ್ ಅವರನ್ನು ಬಿಸಿಸಿಐ ಅನರ್ಹಗೊಳಿಸುವುದಕ್ಕೆ ತಾಂತ್ರಿಕ ಕಾರಣ ಇದೆ. ಬಿಸಿಸಿಐ ಜತೆ ಮಾತುಕತೆ ಹಂತದಲ್ಲಿದ್ದು, ಸಮಸ್ಯೆಗೆ ಶೀಘ್ರವೇ ಪರಿಹಾರ ಸಿಗಲಿದೆ.

    |ವಿನಯ್ ಮೃತ್ಯುಂಜಯ, ಕೆಎಸ್​ಸಿಎ ಖಜಾಂಚಿ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts