More

    ಡಿ.14, 15ರಂದು ನಗರದಲ್ಲಿ ಸಮ್ಮೇಳನ: ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್ ಮಾಹಿತಿ

    ಮಂಡ್ಯ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಿ.14 ಮತ್ತು 15ರಂದು ಸಿರಿಧಾನ್ಯ ಸಂಸ್ಕರಣೆ/ಮೌಲ್ಯಸರಪಳಿ ಕುರಿತು ಕಾರ್ಯಾಗಾರ ಹಾಗೂ ಖರೀದಿದಾರರು-ಮಾರಾಟಗಾರರ ಸಮ್ಮೇಳನ ಆಯೋಜಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್ ಹೇಳಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ನಬಾರ್ಡ್, ವಿಕಸನ ಸಂಸ್ಥೆ ಸಹಯೋಗದಲ್ಲಿ ‘ಆಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆ(ನ್ಯೂಟ್ರಿ ಸಿರಿಧಾನ್ಯ) ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಲಾಗಿದೆ. ಎರಡು ದಿನ ರಾಗಿ-ಸಿರಿಧಾನ್ಯಗಳು, ಅವುಗಳ ಉಪ ಉತ್ಪನ್ನಗಳು, ದೇಸಿ ಅಕ್ಕಿ, ಬೆಲ್ಲ-ಬೆಲ್ಲದ ಇತರೆ ಉತ್ಪನ್ನಗಳು, ತರಕಾರಿಗಳು, ಅಡುಗೆ ಎಣ್ಣೆ ಕಾಳುಗಳು, ಹಪ್ಪಳ, ಉಪ್ಪಿನಕಾಯಿ, ಗಾರ್ಮೆಂಟ್ಸ್ ಉಡುಗೆಗಳು ಸೇರಿದಂತೆ ವಿವಿಧ ವೈವಿಧ್ಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಇರುತ್ತದೆ. ಪ್ರತಿದಿನ 500ಕ್ಕೂ ಹೆಚ್ಚು ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
    ಜಿಲ್ಲೆಯಲ್ಲಿ ವಿವಿಧ ಇಲಾಖೆಗಳು, ನಬಾರ್ಡ್, ಸಂಪನ್ಮೂಲ ಸಂಸ್ಥೆಗಳ ಸಹಯೋಗದಲ್ಲಿ 25ಕ್ಕೂ ಹೆಚ್ಚು ರೈತ ಉತ್ಪಾದಕ ಕಂಪನಿಗಳನ್ನು ರಚಿಸಲಾಗಿದೆ. ಈ ಎರಡೂ ದಿನಗಳ ಸಮ್ಮೇಳನದಲ್ಲಿ ಮಂಡ್ಯ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಂದ ಸುಮಾರು 50ಕ್ಕೂ ಹೆಚ್ಚು ರೈತ ಉತ್ಪಾದಕರ ಕಂಪನಿ ಪ್ರತಿನಿಧಿಗಳು, ಸ್ವ ಸಹಾಯ ಸಂಘ ಆಹಾರ ಸಂಸ್ಕರಣೆದಾರರು ಪ್ರಗತಿಪರ ರೈತರು ಭಾಗವಹಿಸುವರು. ರೈತ ಉತ್ಪಾದಕರ ಕಂಪನಿಗಳು-ಸ್ವಸಹಾಯ ಸಂಘ ಹಾಗೂ ಆಹಾರ ಸಂಸ್ಕರಣೆ-ಮೌಲ್ಯವರ್ಧನೆಯಲ್ಲಿ ತೊಡಗಿರುವವರಿಗೆ ಈ ಸಮ್ಮೇಳನದ ಮೂಲಕ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು, ಉತ್ಪಾದಕರು-ಖರೀದಿಗಾರರ ನಡುವೆ ಸಮನ್ವಯತೆ ಸಾಧಿಸುವುದು ಮತ್ತು ಉತ್ಪಾದಕರಲ್ಲಿ ಆತ್ಮವಿಶ್ವಾಸ ತುಂಬುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
    14ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. 15ರಂದು ಮಾರಾಟ, ಒಡಂಬಡಿಕೆ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಉದ್ಘಾಟಿಸಲಿದ್ದಾರೆ. ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಡಿ.23ರಂದು ರೈತ ದಿನಾಚರಣೆ ಅಂಗವಾಗಿ ಅಂದು ಜಾಗೃತಿ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿ.20, 21, 22ರಂದು ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ ಬೆಂಗಳೂರಿನಲ್ಲಿ ನಡೆಯಲಿದೆ. ಆತ್ಮನಿರ್ಭರ ಭಾರತ ಯೋಜನೆಯಲ್ಲಿ ಜಿಲ್ಲೆಯಲ್ಲಿ 129 ಜನರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 90 ಜನರಿಗೆ 8.31 ಕೋಟಿ ರೂ ಸಾಲ ಮಂಜೂರು ಮಾಡಲಾಗಿದೆ. ಗುಣಮಟ್ಟದ ಬೆಲ್ಲ ತಯಾರಿಕೆಗೆ ಒತ್ತು ನೀಡಲಾಗಿದ್ದು, ಸಂಸ್ಕರಣೆ, ಗುಣಮಟ್ಟ ಪರಿಶೀಲನೆಗೆ ಒಳಪಡಿಸಿ ಪ್ರಮಾಣ ಪತ್ರ ಪಡೆಯಲಾಗುತ್ತದೆ ಎಂದು ಹೇಳಿದರು.
    ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್, ಕೃಷಿ ಇಲಾಖೆ ಉಪನಿರ್ದೇಶಕಿ ಮಮತಾ, ನಬಾರ್ಡ್ ಡಿಡಿಎಂ ಹರ್ಷಿತಾ, ವಿಕಸನ ಸಂಸ್ಥೆಯ ಮಹೇಶ್‌ಚಂದ್ರಗುರು, ಕಾರಸವಾಡಿ ಮಹದೇವು, ರಾಘವೇಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts