More

    78 ಅಡಿಗೆ ಕುಸಿದ ನೀರಿನ ಮಟ್ಟ: ಮಳೆಯಾಗದಿದ್ದರೆ ಸಮಸ್ಯೆ ನಿಶ್ಚಿತ

    ಮಂಡ್ಯ: ಜುಲೈ ಪ್ರಾರಂಭವಾದರೂ ಕಾವೇರಿ ಕಣಿವೆಯಲ್ಲಿ ಮಳೆ ಬೀಳದ ಪರಿಣಾಮ ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 78.38 ಅಡಿಗೆ ಕುಸಿದಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಇನ್ನೊಂದು ತಿಂಗಳಲ್ಲಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಕುಡಿವ ನೀರಿಗೆ ಸಮಸ್ಯೆ ಎದುರಾಗುವುದು ನಿಶ್ಚಿತ.
    ಈ ವರ್ಷ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಆಗಲಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಈಗಾಗಲೇ ಕೋಟ್ಯಂತರ ರೂ ಮೌಲ್ಯದ ಬೆಳೆಗಳು ಜಮೀನಿನಲ್ಲಿಯೇ ಒಣಗುತ್ತಿದೆ. ಮತ್ತೊಂದೆಡೆ ಕಾವೇರಿ ಕಣಿವೆ ಅದರಲ್ಲಿಯೂ ಕೊಡಗು ಜಿಲ್ಲೆಯಲ್ಲಿಯೂ ಮಳೆಯಾಗದ ಕಾರಣ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿಲ್ಲ. ಬರೋಬರಿ ಆರು ವರ್ಷದ ಬಳಿಕ ಡ್ಯಾಂನಲ್ಲಿ ಕನಿಷ್ಟ ಮಟ್ಟದ ನೀರಿನ ಸಂಗ್ರಹವಾಗಿದೆ.
    ಈ ನಡುವೆ ಕಳೆದೆರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿರುವುದರಿಂದ ಒಳಹರಿವಿನ ಪ್ರಮಾಣ ಕೇವಲ 1,151 ಕ್ಯುಸೆಕ್ ಇದೆ. 124.80 ಗರಿಷ್ಟ ಮಟ್ಟ ಸಂಗ್ರಹದ ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ಮಂಗಳವಾರ ಬೆಳಗ್ಗೆ 78.38 ಅಡಿಗೆ ತಲುಪಿದೆ. ಡ್ಯಾಂನಿಂದ 310 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಅಂದರೆ ಮೈಸೂರು, ಮಂಡ್ಯ ಜಿಲ್ಲೆಗೆ ಕುಡಿಯುವ ನೀರಿಗಾಗಿ ಪ್ರತಿನಿತ್ಯ 100 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ಇನ್ನು ಬೆಂಗಳೂರಿಗೆ ಕಬಿನಿಯಿಂದ ನೀರು ಪೂರೈಕೆಯಾಗುತ್ತಿದ್ದರೂ, ಅಲ್ಲಿ ಪ್ರಮಾಣ ಕಡಿಮೆಯಾದರೆ ಕೆಆರ್‌ಎಸ್ ಡ್ಯಾಂನಿಂದ ಬಳಕೆ ಮಾಡಿಕೊಳ್ಳಲಾಗುತ್ತದೆ. ಅದರಂತೆ ಜುಲೈ ಅಂತ್ಯದೊಳಗೆ ಉತ್ತಮ ಮಳೆಯಾಗದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ.
    ಇನ್ನು 2017ರ ನಂತರ ಜುಲೈ ತಿಂಗಳ ಮೊದಲ ವಾರದಲ್ಲ್ಲಿ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕುಸಿತ ಕಂಡಿದೆ. ಸಧ್ಯಕ್ಕೆ ನೋಡುವುದಾದರೆ ಅಣೆಕಟ್ಟೆ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಸುಮಾರು 74 ಅಡಿವರೆಗೆ ನೀರು ಸಿಗುವ ಸಾಧ್ಯತೆಯಿದೆ. ಒಂದು ವೇಳೆ ಮಳೆಯಾಗದೇ ಒಳಹರಿವು ಕಡಿಮೆಯಾದರೆ ಕುಡಿಯುವ ನೀರಿಗೆ ಆದ್ಯತೆ ಕೊಡಬೇಕಾಗಿದೆ. ಅಂತೆಯೇ ಅಣೆಕಟ್ಟೆಯಲ್ಲಿ 60 ಅಡಿ ಸಂಗ್ರಹದವರೆಗಷ್ಟೇ ಕುಡಿಯುವ ನೀರಿಗೆ ಬಳಸಬಹುದಾಗಿದ್ದು, ನಂತರ ಸಾಧ್ಯವಿಲ್ಲ.
    ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಆನಂದ ಪ್ರತಿಕ್ರಿಯಿಸಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಇನ್ನೊಂದು ತಿಂಗಳವರೆಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಿಲ್ಲ. ಅಂತೆಯೇ ಅತಂಕ ಪಡುವ ಅಗತ್ಯವಿಲ್ಲ. ಪ್ರಸ್ತುತ ದಿನಗಳಲ್ಲಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಹಿಂದಿನ ವರ್ಷಗಳ ದಾಖಲೆಯಂತೆ ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿ ಅಣೆಕಟ್ಟೆ ತುಂಬಿರುವುದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts