More

    ಉಡುಪಿಯಲ್ಲಿ ಈ ಬಾರಿ ಭಕ್ತರಿಲ್ಲದೆ ಕೃಷ್ಣಾಷ್ಟಮಿ

    ಉಡುಪಿ: ಕೃಷ್ಣ ಮಠದಲ್ಲಿ ಪರ್ಯಾಯೋತ್ಸವ ಬಳಿಕ ಅತ್ಯಂತ ವಿಜೃಂಭಣೆಯ ಹಬ್ಬ ಶ್ರೀ ಕೃಷ್ಣಲೀಲೋತ್ಸವ. ಆದರೆ ಈ ಬಾರಿ ಕರೊನಾ ಸಂಕಷ್ಟ ಪರಿಸ್ಥಿತಿಯಲ್ಲಿ ಎಲ್ಲ ಆಚರಣೆಗಳೂ ಸಂಪ್ರದಾಯಕ್ಕೆ ಸೀಮಿತವಾಗಿದ್ದು, ಶ್ರೀಕೃಷ್ಣ ಲೀಲೋತ್ಸವವೂ ಸಾರ್ವಜನಿಕರ ಸಹಭಾಗಿತ್ವವಿಲ್ಲದೆ ಸರಳವಾಗಿ ನಡೆಯಲಿದೆ.

    ಸೆ.10ರಂದು ಬೆಳಗ್ಗೆ 7ರಿಂದ 9ರವರೆಗೆ ಕೃಷ್ಣಾಷ್ಟಮಿ ಪ್ರಯುಕ್ತ ಕೃಷ್ಣ ದೇವರಿಗೆ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಲಕ್ಷ ತುಳಸಿ ಅರ್ಚನೆ ನೆರವೇರಿಸಲಿದ್ದಾರೆ. ಮಹಾಪೂಜೆ ಬಳಿಕ ರಾತ್ರಿ ಪೂಜೆ ಸಮರ್ಪಣೆಗಾಗಿ ಲಡ್ಡು ಮತ್ತು ಚಕ್ಕುಲಿ ಮೊದಲಾದ ಭಕ್ಷ್ಯ ತಯಾರಿಗೆ ಚಾಲನೆ ನೀಡಲಿದ್ದಾರೆ. ಸಾಯಂಕಾಲ ರಾಜಾಂಗಣದಲ್ಲಿ ಪ್ರವಚನ, ರಾತ್ರಿ ಸಂಸ್ಕೃತ ಯಕ್ಷಗಾನ ಪ್ರದರ್ಶನ ನಡೆಯಲಿದೆ. ರಾತ್ರಿ 10ಕ್ಕೆ ಕೃಷ್ಣ ಪೂಜೆ ಪ್ರಾರಂಭವಾಗಲಿದ್ದು, 12.16ಕ್ಕೆ ಕೃಷ್ಣಾರ್ಘ್ಯ ಪ್ರದಾನ ನೆರವೇರಲಿದೆ. ವಿವಿಧ ಮಠಾಧೀಶರು ಹಾಗೂ ಮಠಗಳ ಸಿಬ್ಬಂದಿಗೆ ಮಾತ್ರ ಅರ್ಘ್ಯ ಪ್ರದಾನಕ್ಕೆ ಅವಕಾಶ ನೀಡಲಾಗುತ್ತದೆ.

    100 ಮಂದಿಗೆ ಅನುಮತಿ: ಸೆ.11ರಂದು ಬೆಳಗ್ಗೆ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 3ಕ್ಕೆ ವಿಟ್ಲಪಿಂಡಿ ರಥೋತ್ಸವ ಪ್ರಾರಂಭವಾಗಲಿದ್ದು, ಶ್ರೀಕೃಷ್ಣನ ಮೃಣ್ಮಯ ಮೂರ್ತಿಯನ್ನು ಚಿನ್ನದ ತೇರಿನಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವರ ರಥಗಳೂ ಜತೆಗಿರಲಿವೆ.

    ಮೊಸರು ಕುಡಿಕೆಗಾಗಿ ರಥಬೀದಿಯಲ್ಲಿ ಈಗಾಗಲೇ 12 ಗುರ್ಜಿ ಹಾಗೂ 2 ಮಂಟಪಗಳನ್ನು ನಿರ್ಮಿಸಲಾಗಿದ್ದು, 44 ಮಡಿಕೆಗಳಲ್ಲಿ ಹರಳು, ಮೊಸರು, ಓಕುಳಿ ನೀರು ತುಂಬಿಸಿಡಲಾಗುತ್ತದೆ. ಕೃಷ್ಣ ಮಠದ ಗೋಶಾಲೆಯಲ್ಲಿ ಕಾರ್ಯ ನಿರ್ವಹಿಸುವ ಗೋವಳರು ಈ ಮಡಿಕೆಗಳನ್ನು ಒಡೆದಂತೆ ಕೃಷ್ಣನ ಬಂಗಾರದ ತೇರು ಮುಂದೆ ಸಾಗುತ್ತದೆ. ಉತ್ಸವದಲ್ಲಿ ಈ ಬಾರಿ ಕೇವಲ 100 ಮಂದಿಗೆ ಮಾತ್ರ ಜಿಲ್ಲಾಡಳಿತ ಅನುಮತಿ ನೀಡಿದೆ. ಸಾರ್ವಜನಿಕರಿಗೆ ರಥಬೀದಿ ಪ್ರವೇಶವನ್ನೇ ನಿರ್ಬಂಧಿಸಲಾಗಿದ್ದು, ವಿಟ್ಲಪಿಂಡಿ ಉತ್ಸವದ ಪ್ರಯುಕ್ತ ಹುಲಿವೇಷ ಅಥವಾ ಅಷ್ಟಮಿ ವೇಷಗಳಿಗೂ ಅವಕಾಶವಿಲ್ಲ.

    ಆರು ಯತಿಗಳು ಭಾಗಿ: ಕೋವಿಡ್ ಹಿನ್ನೆಲೆಯಲ್ಲಿ ಆರು ಯತಿಗಳು ಈ ಬಾರಿ ಉಡುಪಿಯಲ್ಲೇ ಚಾತುರ್ಮಾಸ್ಯ ವ್ರತ ಪೂರೈಸಿದ್ದು, ಕೃಷ್ಣಾಷ್ಟಮಿಯಲ್ಲಿ ಭಾಗವಹಿಸಲಿದ್ದಾರೆ. ವಿಟ್ಲಪಿಂಡಿ ಉತ್ಸವದಲ್ಲೂ ಇಷ್ಟು ಮಂದಿ ಯತಿಗಳು ಭಾಗವಹಿಸುತ್ತಿರುವುದು ಈ ಬಾರಿಯ ವಿಶೇಷವಾಗಿದೆ.

    ಮನೆ ಬಾಗಿಲಿಗೆ ಪ್ರಸಾದ: ಕೃಷ್ಣ ಮಠದಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧ ಹಿನ್ನಲೆಯಲ್ಲಿ ಈ ಬಾರಿ ಕೃಷ್ಣಾಷ್ಟಮಿ ಪ್ರಸಾದವನ್ನು ಉಡುಪಿ ನಗರದಲ್ಲಿ ಮನೆ ಹಾಗೂ ಕಚೇರಿಗೆ ತಲುಪಿಸಲು ಮಠದ ಆಡಳಿತ ಮಂಡಳಿ ಚಿಂತನೆ ನಡೆಸಿದೆ. ಇದಕ್ಕಾಗಿ ಮಂಗಳವಾರದಿಂದಲೇ ಸುಮಾರು 1 ಲಕ್ಷ ಉಂಡೆ ಮತ್ತು 1 ಲಕ್ಷ ಚಕ್ಕುಲಿ ತಯಾರಿ ನಡೆಯುತ್ತಿದೆ.

    ಶ್ರೀ ಕೃಷ್ಣಲೀಲೋತ್ಸವ ಉಡುಪಿ ಜನತೆ ಜಾತಿ ಬೇಧವಿಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ಹಬ್ಬ. ಆದರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಈ ಸಂಭ್ರಮ ಇಲ್ಲದಿರುವ ಬಗ್ಗೆ ನಮಗೆಲ್ಲ ಬಹಳ ಖೇದವಾಗುತ್ತಿದೆ. ಭಕ್ತರು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ವೀಕ್ಷಿಸುವ ಮೂಲಕ ಸಹಕರಿಸಬೇಕು.
    – ಗೋವಿಂದರಾಜ್, ವ್ಯವಸ್ಥಾಪಕರು, ಕೃಷ್ಣ ಮಠ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts