ಚಿಕ್ಕೋಡಿ: ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಹಾಗೂ ಕೃಷ್ಣಾ ತೀರದಲ್ಲಿ ಸುರಿಯುತ್ತಿರುವ ಮಳೆ ಕಡಿಮೆಯಾಗಿದ್ದರಿಂದ ಶುಕ್ರವಾರ ಕೃಷ್ಣಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಎರಡು ಅಡಿ ಇಳಿಕೆಯಾಗಿದೆ. ಇದರಿಂದಾಗಿ ನದಿತಟದ ವಾಸಿಗಳಿಗೆ ಭಾರಿ ಪ್ರವಾಹದ ಆತಂಕ ದೂರವಾಗಿದೆ.
ವೇದಗಂಗಾ ಮತ್ತು ದೂಧಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1,73,500 ಕ್ಯೂಸೆಕ್, ದೂಧಗಂಗಾ ನದಿಯಿಂದ 33,264 ಕ್ಯೂಸೆಕ್ ಸೇರಿ ಒಟ್ಟು 2,06,764 ಕ್ಯೂಸೆಕ್‌ಗೂ ಅಧಿಕ ನೀರು ರಾಜ್ಯದ ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನ ಜಲಾಶಯದಿಂದ ಶುಕ್ರವಾರ ಕೃಷ್ಣಾ ನದಿಗೆ ಮತ್ತೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದಾರೆ.
ಹಿಪ್ಪರಗಿ ಬ್ಯಾರೇಜ್‌ನಿಂದ 2,32,000 ಹಾಗೂ ಆಲಮಟ್ಟಿ ಜಲಾಶಯದಿಂದ 2,50,000 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವುದನ್ನು ನಿಲ್ಲಿಸಲಾಗಿದೆ. ಶನಿವಾರದ ವೇಳೆಗೆ ಕೃಷ್ಣಾ ನದಿ ನೀರಿನ ಹರಿವಿನಲ್ಲಿ ಇನ್ನೂ ಇಳಿಕೆಯಾಗುವ ಲಕ್ಷಣವಿದೆ ಎಂದು ಚಿಕ್ಕೋಡಿ ತಹಸೀಲ್ದಾರ್ ಸುಭಾಷ ಸಂಪಗಾಂವಿ ಅವರು ತಿಳಿಸಿದ್ದಾರೆ.