More

    ಕೃಷ್ಣಾ ತೀರದಲ್ಲಿ ಪ್ರವಾಹ ಭೀತಿ

    ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದ ಎಲ್ಲ ಗ್ರಾಮಗಳ ಜನರಲ್ಲಿ ಪ್ರವಾಹದ ಭೀತಿ ಇನ್ನೂ ಹೆಚ್ಚಿಸಿದೆ.

    ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಲ್ಲಿ ಮೂರ್ನಾಲ್ಕು ದಿನಗಳಿಂದ ವರುಣನ ಆರ್ಭಟ ಹೆಚ್ಚಾಗಿರುವ ಕಾರಣ ವೇದಗಂಗಾ, ದೂಧಗಂಗಾ, ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕಲ್ಲೋಳ ಬಳಿಯ ಕೃಷ್ಣಾ ನದಿಯಲ್ಲಿ ಸುಮಾರು 3.5 ಅಡಿಯಷ್ಟು ನೀರು ಏರಿಕೆಯಾಗಿದೆ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿರುವ 6 ಕೆಳ ಹಂತದ ಬ್ರಿಡ್ಜ್ ಕಂ ಬಾಂದಾರಗಳು ಮುಳುಗಡೆಯಾಗಿವೆ.

    ಪರ್ಯಾಯ ಮಾರ್ಗ: ದೂಧಗಂಗಾ ನದಿಗೆ ನಿರ್ಮಿಸಿರುವ ಕಾರದಗಾ- ಭೋಜ, ಭೋಜವಾಡಿ- ಕುನ್ನೂರ, ಸಿದ್ನಾಳ-ಅಕ್ಕೋಳ, ಮಲಿಕವಾಡ- ದತ್ತವಾಡ ಹಾಗೂ ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕುನ್ನೂರ-ಬಾರವಾಡ ಹಾಗೂ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಯಡೂರು-ಕಲ್ಲೋಳ ಸೇತುವೆಗಳು ಮುಳುಗಡೆಯಾಗಿದೆ. ಹೀಗಾಗಿ ಸುತ್ತಮುತ್ತಲಿನ ಗ್ರಾಮಗಳ ಜನರು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸುತ್ತಿದ್ದಾರೆ.

    ಮಳೆ ವಿವರ: ಕೊಯ್ನ- 41 ಮಿ.ಮೀ., ನವಜಾ- 81 ಮಿ.ಮೀ., ಮಹಾಬಲೇಶ್ವರ- 29 ಮಿ.ಮೀ., ವಾರಣಾ- 14 ಮಿ.ಮೀ., ಸಾಂಗ್ಲಿ- 13 ಮಿ.ಮೀ., ಕೊಲ್ಲಾಪುರ- 4 ಮಿ.ಮೀ., ಕಾಳಮ್ಮವಾಡಿ- 44 ಮಿ.ಮೀ., ರಾಧಾನಗರಿ- 83 ಮಿ.ಮೀ. ಮಳೆಯಾಗಿದೆ.

    ಪ್ರವಾಹ ಎದುರಿಸಲು ತಾಲೂಕಾಡಳಿತ ಸಿದ್ಧತೆ: ಕೃಷ್ಣಾ ನದಿಗೆ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 53,500 ಕ್ಯೂಸೆಕ್ ಹಾಗೂ ದೂಧಗಂಗಾ ಮತ್ತು ವೇದಗಂಗಾ ನದಿ ಮೂಲಕ 17,952 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ರಾಜ್ಯದ ಗಡಿ ಭಾಗದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಹತ್ತಿರ ಒಟ್ಟು 71,452 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇನ್ನು 1 ಲಕ್ಷ 50 ಸಾವಿರ ಕ್ಯೂಸೆಕ್ ಮೀರಿದರೆ ಕೃಷ್ಣಾ ನದಿ ಪಾತ್ರ ಬಿಟ್ಟು ಹೊರಗೆ ಬರುತ್ತದೆ. ‘ಹೆಚ್ಚಿನ ಪ್ರಮಾಣದಲ್ಲಿ ನದಿಗಳಿಗೆ ನೀರು ಹರಿದು ಬರುತ್ತಿರುವುದರಿಂದ ಪ್ರವಾಹ ಎದುರಿಸಲು ತಾಲೂಕಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ’ ಎಂದು ತಹಸೀಲ್ದಾರ್ ಸುಭಾಷ ಸಂಪಗಾವಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts