More

    ಭಕ್ತರಿಗೆ ತೆರೆದುಕೊಂಡ ಉಡುಪಿ ಕೃಷ್ಣ ಮಠ

    ಉಡುಪಿ: ಕರೊನಾ ಲಾಕ್‌ಡೌನ್‌ನಿಂದಾಗಿ ಮಾರ್ಚ್ 22ರಿಂದ ಕೃಷ್ಣ ಮಠಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಸೋಮವಾರ ಕೋವಿಡ್ ಮಾರ್ಗಸೂಚಿ ಪ್ರಕಾರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನೂರಾರು ಭಕ್ತರು ಸೇವೆ ನೆರವೇರಿಸಿದ್ದಾರೆ.

    ಮಧ್ಯಾಹ್ನ 2ರಿಂದ ಸಾಯಂಕಾಲ 5ರ ತನಕ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ದ್ವಾರದಲ್ಲಿ ಸ್ಯಾನಿಟೈಸರ್ ನೀಡಿ ಮತ್ತು ಜ್ವರ ತಪಾಸಣೆ ನಡೆಸಲಾಗುತ್ತಿದೆ. ದೈಹಿಕ ಅಂತರ ಪಾಲಿಸುವ ನಿಟ್ಟಿನಲ್ಲಿ 10 ಜನರಂತೆ ದೇಗುಲದ ಒಳಗೆ ಬಿಡುವ ವ್ಯವಸ್ಥೆ ಜಾರಿಯಲ್ಲಿದೆ. ಮೊದಲ ದಿನ ಸ್ಥಳೀಯರಲ್ಲದೆ ಕಾರವಾರ, ಶಿರಸಿ, ತಮಿಳುನಾಡಿನಿಂದ ಆಗಮಿಸಿದ ಯಾತ್ರಾರ್ಥಿಗಳೂ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

    ‘ಸದ್ಯ ಸಾಮಾನ್ಯ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಕೌಂಟರಿನಲ್ಲಿ ಪ್ರಸಾದ ಸ್ವೀಕರಿಸಬಹುದು. ಭೋಜನ ಪ್ರಸಾದ ಮತ್ತು ತೀರ್ಥ ಪ್ರಸಾದವನ್ನು ಪರಿಸ್ಥಿತಿ ಗಮನಿಸಿ ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು. ದೇವಳ ಪ್ರವೇಶಕ್ಕೆ ಮಾಸ್ಕ್ ಕಡ್ಡಾಯ. ಸಾಮಾಜಿಕ ಅಂತರವನ್ನು ಎಲ್ಲರೂ ಪಾಲಿಸಬೇಕು’ ಎಂದು ಕೃಷ್ಣ ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ.

    ಎಣ್ಣೆ ಬದಲು ಎಳ್ಳು: ಕೃಷ್ಣ ಮಠದಲ್ಲಿ ದೀಪಕ್ಕೆ ಹೊರಗಿನಿಂದ ತಂದ ಎಳ್ಳೆಣ್ಣೆ ನಿಷೇಧಿಸಲಾಗಿದೆ. ಎಣ್ಣೆ ಕಲಬೆರಕೆ ಆಗದಿರಲಿ ಎಂಬ ದೃಷ್ಟಿಯಿಂದ ಪರ್ಯಾಯ ಶ್ರೀಗಳು ಸ್ಥಳೀಯ ಗಾಣದಿಂದ ತಯಾರಿಸಿದ ಶುದ್ಧ ಎಳ್ಳೆಣ್ಣೆ ಬಳಕೆಗೆ ಉದ್ದೇಶಿಸಿದ್ದು, ಭಕ್ತರು ಎಣ್ಣೆಯ ಬದಲು ಎಳ್ಳು ಒಪ್ಪಿಸಬಹುದು. ಮಠದ ಕೌಂಟರಿನಲ್ಲೂ ಎಳ್ಳು ಲಭ್ಯ. ಇದನ್ನು ದೇವರ ಮುಂಭಾಗದಲ್ಲಿ ಇಟ್ಟಿರುವ ಬುಟ್ಟಿಗೆ ಹಾಕಬೇಕು. ಇದನ್ನು ಗಾಣಕ್ಕೆ ಕೊಟ್ಟು ಶುದ್ಧ ಎಣ್ಣೆಯನ್ನೇ ದೇವರ ದೀಪಕ್ಕೆ ಅರ್ಪಿಸಲಾಗುತ್ತದೆ.

    ಉತ್ತರ ದ್ವಾರದಿಂದ ಮಠಕ್ಕೆ ಪ್ರವೇಶ: ಕೃಷ್ಣ ಮಠಕ್ಕೆ ರಾಜಾಂಗಣದ ಬಳಿ ಇರುವ ಉತ್ತರದ್ವಾರದ ಮೂಲಕ ಪ್ರವೇಶ ಕಲ್ಪಿಸುವ ಹೊಸ ದಾರಿ ಭಕ್ತರಿಗೆ ವಿಭಿನ್ನ ಅನುಭವ ನೀಡಿದೆ. ವಿಶೇಷ ದಾರಿಯನ್ನು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಮಧ್ಯಾಹ್ನ ಲೋಕಾರ್ಪಣೆಗೊಳಿಸಿದರು. ಉತ್ತರ ದ್ವಾರದಿಂದ ಬರುವ ಭಕ್ತರು ಭೋಜನ ಶಾಲೆಯ ಮೇಲ್ಗಡೆಯಿಂದ ತೆರಳಿ ಗರುಡ ದೇವರ ಬಳಿ ಕೆಳಗಿಳಿದು ಕೃಷ್ಣನ ದರ್ಶನ ಪಡೆದು, ಮುಖ್ಯಪ್ರಾಣ ದೇವರ ಬಳಿ ಇರುವ ಮೆಟ್ಟಿಲುಗಳ ಮೂಲಕ ಪುನಃ ಮಹಡಿಗೆ ಬಂದು ಸುಬ್ರಹ್ಮಣ್ಯ ಗುಡಿ ಬಳಿ ನಿರ್ಗಮಿಸಬೇಕು. ಸದ್ಯಕ್ಕೆ ನವಗ್ರಹ ಕಿಂಡಿ ಬದಲು ತೀರ್ಥ ಮಂಟಪದ ಮುಂಭಾಗ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ದಕ್ಷಿಣದ ಮಹಾದ್ವಾರದಲ್ಲಿ ಯತಿಗಳು ಮತ್ತು ವಿಐಪಿಗಳಿಗೆ ಮಾತ್ರ ಪ್ರವೇಶಾವಕಾಶ ನೀಡಲು ನಿರ್ಧರಿಸಲಾಗಿದೆ.

    ಹೊಸ ಅನುಭವ: ಕೃಷ್ಣ ಮಠದಲ್ಲಿ ಲಾಕ್‌ಡೌನ್ ಅವಧಿಯಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಹಲವು ಕಾಮಗಾರಿಗಳು ನಡೆದಿವೆ. ಮಠದ ಭೋಜನ ಶಾಲೆ, ಬಡಗುಮಾಳಿಗೆಗೆ ನೈಸರ್ಗಿಕ ಬಣ್ಣ ಕೊಡಲಾಗಿದೆ. ಹೊಸ ದಾರಿಯಿಂದ ಸಾಗುವಾಗ ಯಾವುದೋ ಪ್ರಾಚೀನ ಪರಂಪರೆಗೆ ತೆರಳಿದ ಅನುಭವಕ್ಕೆ ಪೂರಕವಾಗಿ ದೇವರ ಚಿತ್ರಗಳು, ಮರದ ಸೂಕ್ಷ್ಮ ಕೆತ್ತನೆಗಳು ಗಮನ ಸೆಳೆಯುತ್ತವೆ. ದೇವರ ದರ್ಶನಕ್ಕೆ ಇಳಿಯುವ ಮೊದಲೇ ಮೇಲ್ಭಾಗದಲ್ಲಿ ಗರ್ಭಗುಡಿಗೆ ಕಳೆದ ವರ್ಷ ಹೊದೆಸಿದ ಸ್ವರ್ಣ ಗೋಪುರ ವೀಕ್ಷಿಸಬಹುದು.

    ಸ್ಥಳೀಯರಿಗೆ ಪಾಸ್: ಸ್ಥಳೀಯರು ರಥಬೀದಿಯಿಂದ ಮಧ್ವ ಸರೋವರದ ಮೇಲಿರುವ ದಾರಿಯಿಂದ ಸೇವಾ ಕಚೇರಿ ಬಳಿ ಇಳಿದು ಕೃಷ್ಣಮಠದೊಳಗೆ ಪ್ರವೇಶ, ದೇವರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದಕ್ಕೆ ಮಠದಿಂದ ಪ್ರವೇಶ ಪತ್ರ ಕಡ್ಡಾಯ. ರಾಜಾಂಗಣ ಬಳಿ ನೋಂದಣಿ ಕಚೇರಿ ಆರಂಭಿಸಲಾಗಿದ್ದು, ಆಸಕ್ತರು ಭಾವಚಿತ್ರ ಮತ್ತು ಆಧಾರ್ ಕಾರ್ಡ್ ದಾಖಲೆ ಸಲ್ಲಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts