More

    ಕೃಷ್ಣಮಠದಲ್ಲಿ ಇನ್ನು ಶುದ್ಧ ಎಳ್ಳೆಣ್ಣೆ ಬಳಕೆ

    ಉಡುಪಿ: ಕೃಷ್ಣ ಮಠದಲ್ಲಿ ಸಾವಯವ ತರಕಾರಿ ಹಾಗೂ ಕೈಮಗ್ಗ ವಸ್ತ್ರಗಳ ಬಳಕೆ ಹೀಗೆ ಭಾರತದ ಪ್ರಾಚೀನ ಪರಂಪರಾಗತ ವಿಧಾನದಲ್ಲಿ ಉತ್ಪಾದಿಸಿದ ಶುದ್ಧ ವಸ್ತುಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಿರುವ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಮಠದಲ್ಲಿ ಶುದ್ಧ ಎಳ್ಳೆಣ್ಣೆ ಉಪಯೋಗಿಸಿ ವ್ಯತ್ಯಾಸಗಳನ್ನು ಗಮನಿಸುವ ಪ್ರಾಯೋಗಿಕ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

    ಕೃಷ್ಣ ಮಠದಲ್ಲಿ ಗರ್ಭಗುಡಿಯೊಳಗಿನ ಎಲ್ಲ ದೀಪಗಳನ್ನು ತುಪ್ಪದಿಂದ ಬೆಳಗಲಾಗುತ್ತದೆ. ಆದರೆ ಹೊರಭಾಗದಲ್ಲಿರುವ ಹಣತೆಗಳು, ಮುಖ್ಯಪ್ರಾಣ ದೇವರ ಗುಡಿಯಲ್ಲಿ ಪ್ರತಿದಿನ ನಡೆಯುವ ರಂಗಪೂಜೆಯಲ್ಲಿ ಯಾಂತ್ರೀಕೃತವಾಗಿ ಉತ್ಪಾದಿಸಿದ ಎಳ್ಳೆಣ್ಣೆಯನ್ನು ಬಳಸಲಾಗುತ್ತಿದೆ. ಇದರಲ್ಲಿ ಅನೇಕ ರಾಸಾಯನಿಕ ಅಂಶಗಳು ಕಂಡುಬಂದಿರುವುದರಿಂದ ಶುದ್ಧ ಎಳ್ಳೆಣ್ಣೆ ಬಳಸಲು ನಿರ್ಧರಿಸಲಾಗಿದೆ.

    ಮಠಕ್ಕೆ ಪ್ರತಿದಿನ ಸುಮಾರು 10 ಲೀ. ಎಳ್ಳೆಣ್ಣೆ ಅವಶ್ಯಕತೆ ಇದೆ. ನೈಸರ್ಗಿಕವಾಗಿ ಉತ್ಪಾದಿಸಿದ ಎಣ್ಣೆ ತುಪ್ಪಕ್ಕಿಂತಲೂ ದುಬಾರಿ. ಮಾರುಕಟ್ಟೆಯಲ್ಲಿ ಅತ್ಯುತ್ತಮ ದರ್ಜೆಯ ಎಣ್ಣೆಗೆ ಲೀಟರ್‌ಗೆ 260 ರೂ.ಇದ್ದು, ಗಾಣದ ಎಣ್ಣೆ 460 ರೂ.ನಂತೆ ಮಾರಾಟವಾಗುತ್ತಿದೆ.

    ಗಾಣದ ಎಣ್ಣೆ ಶ್ರೇಷ್ಠ ಯಾಕೆ?: ಎಣ್ಣೆ ಉತ್ಪಾದನೆಯಲ್ಲಿ ಯಾಂತ್ರಿಕ ಹಾಗೂ ಗಾಣ ಎಂದು ಎರಡು ವಿಧ. ಯಾಂತ್ರಿಕ ಮಾರ್ಗದಲ್ಲಿ ಸುಮಾರು 200 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಎಣ್ಣೆ ಹೊರ ಬರುವುದರಿಂದ ಔಷಧೀಯ ಗುಣಗಳು ನಷ್ಟವಾಗುತ್ತವೆ. ಗಾಣದಲ್ಲಿ ಉಗುರು ಬೆಚ್ಚನೆಯಲ್ಲಿ ತೈಲ ಉತ್ಪಾದನೆ ಆಗುವುದರಿಂದ ಮೂಲ ಗುಣ ಉಳಿಯುತ್ತದೆ. ಈ ವಿಧಾನದಲ್ಲಿ 2.5 ಕೆಜಿ ಎಳ್ಳಿಗೆ 1 ಕೆಜಿ ಎಣ್ಣೆ ಲಭಿಸಿದರೆ, ಯಾಂತ್ರಿಕ ಮಾರ್ಗದಲ್ಲಿ 2 ಕೆ.ಜಿ. ತಿಲದ್ರವ್ಯಕ್ಕೆ 1 ಕೆ.ಜಿ ಎಳ್ಳೆಣ್ಣೆ ಸಿಗುತ್ತದೆ. ಹೀಗಾಗಿ ಶುದ್ಧ ಎಳ್ಳೆಣ್ಣೆ ಮಾರಾಟ ಕುಂಠಿತವಾಗಿದೆ ಎನ್ನುತ್ತಾರೆ ಈ ಬಗ್ಗೆ ಸಂಶೋಧನೆ ಕೈಗೊಂಡಿರುವ ಉಡುಪಿಯ ಆಯುರ್ವೇದ ವೈದ್ಯ ಡಾ. ಚಂದ್ರಶೇಖರ್.

    ಪಂಚಕರ್ಮ ಚಿಕಿತ್ಸೆಗೆ ಮಾರುಕಟ್ಟೆಯಲ್ಲಿ ದೊರೆಯುವ ಅತ್ಯುತ್ತಮ ದರ್ಜೆಯ ಎಳ್ಳೆಣ್ಣೆ ಬಳಸುತ್ತಿದ್ದೆ. ಆದರೆ ಫಲಿತಾಂಶ ಉತ್ತಮ ವಾಗಿರಲಿಲ್ಲ. ಹೀಗಾಗಿ ಸ್ವತಃ ಗಾಣದಲ್ಲಿ ಶುದ್ಧ ಎಳ್ಳೆಣ್ಣೆ ಉತ್ಪಾದನೆ ಮಾಡುತ್ತಿದ್ದೇನೆ. ಎತ್ತಿನ ಬದಲು ಮೋಟಾರ್ ಬಳಸಲಾಗುತ್ತಿದೆ. ರೋಗಿಗಳ ಚಿಕಿತ್ಸೆಯಲ್ಲಿ ಉತ್ತಮ ಫಲಿತಾಂಶ ಕಂಡುಬಂದಿದೆ. ಈ ಬಗ್ಗೆ ಮಾಹಿತಿ ಪಡೆದ ಪರ್ಯಾಯ ಅದಮಾರು ಶ್ರೀಗಳು ಮಠಕ್ಕೆ ಶುದ್ಧ ಎಳ್ಳೆಣ್ಣೆ ಪೂರೈಸುವಂತೆ ಕೋರಿದ್ದಾರೆ.
    ಡಾ.ಚಂದ್ರಶೇಖರ್, ಆಯುರ್ವೇದ ವೈದ್ಯ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts