More

    ಕೃಷ್ಣಾ ಕಣಿವೆಯಲ್ಲಿ ಧಾರಾಕಾರ ಮಳೆ

    ಚಿಕ್ಕೋಡಿ: ಕಳೆದ 40 ಗಂಟೆಗಳಲ್ಲಿ ಮಹಾರಾಷ್ಟ್ರದ ಸಹ್ಯಾದ್ರಿ ಪ್ರದೇಶ ಹಾಗೂ ಚಿಕ್ಕೋಡಿ ತಾಲೂಕಿನ ಕೃಷ್ಣಾ, ವೇದಗಂಗಾ, ದೂಧಗಂಗಾ ನದಿ ತೀರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭಾನುವಾರ ಬೆಳಗ್ಗೆಯಿಂದ ಕೃಷ್ಣಾ ನದಿಯ ಒಳಹರಿವು ಸುಮಾರು 4 ಅಡಿ ಹೆಚ್ಚಾಗಿದೆ.

    ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ವ್ಯಾಪ್ತಿಯಲ್ಲಿನ ಕೆಳ ಹಂತದ ಸೇತುವೆಗಳು ಮೂರನೇ ಬಾರಿಗೆ ಮತ್ತೆ ಜಲಾವೃತಗೊಂಡಿವೆ. ಯಡೂರ- ಕಲ್ಲೋಳ, ಮಲಿಕವಾಡ- ದತ್ತವಾಡ ಸೇತುವೆ ಮತ್ತು ಸಿದ್ನಾಳ- ಹುನ್ನರಗಿ, ಕಾರದಗಾ- ಬೋಜ, ಬೋಜವಾಡಿ- ಕುನ್ನೂರ, ಜತ್ರಾಟ- ಬಿವಶಿ, ಸಿದ್ನಾಳ- ಅಕ್ಕೋಳ ಸೇತುವೆ ಜಲಾವೃತಗೊಂಡು ರಸ್ತೆ ಸಂಚಾರ ಕಡಿತಗೊಂಡಿದೆ.

    ಮಹಾರಾಷ್ಟ್ರದ ಕೊಯ್ನ ಸೇರಿ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಹಾಗೂ ಜಲಾಶಯಗಳಿಂದ ನೀರು ಬಿಡುತ್ತಿರುವುದರಿಂದ ಕೃಷ್ಣಾ ನದಿ ಒಳಹರಿವು ಹೆಚ್ಚಾಗಿದೆ. ಒಳಬರುವ ನೀರಿನ ಪ್ರಮಾಣಕ್ಕಿಂತ ರಾಜ್ಯದ ಆಲಮಟ್ಟಿ ಜಲಾಶಯದಿಂದ ಹೆಚ್ಚುವರಿ ನೀರು ಹೊರಬಿಡಲಾಗುತ್ತಿದೆ. ತಾಲೂಕಾಡಳಿತ ನದಿ ತೀರದಲ್ಲಿ ಮುನ್ನೆಚ್ಚರಿಕೆ ವಹಿಸಿದೆ ಎಂದು ತಹಸೀಲ್ದಾರ್ ಸುಭಾಷ ಸಂಪಗಾವಿ ತಿಳಿಸಿದ್ದಾರೆ.

    ಮಹಾರಾಷ್ಟ್ರದ ಕೊಯ್ನ ಜಲಾಶಯದಿಂದ ಕೃಷ್ಣಾ ನದಿಗೆ 2ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅಲ್ಲದೆ, ಜಿಲ್ಲೆಯ ಡ್ಯಾಂಗಳಿಂದಲೂ ನೀರು ಬಿಡಲಾಗುತ್ತಿದೆ. ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಸಾಧ್ಯತೆಯಿದ್ದು, ಜನರು ತಮ್ಮ ಜಾನುವಾರು ಸಮೇತ ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತದ ಜತೆ ನಿರಂತರ ಸಂಪರ್ಕದಲ್ಲಿದ್ದು, ಜಿಲ್ಲಾಡಳಿತದ ಆದೇಶ ಪಾಲಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.
    |ರಮೇಶ ಜಾರಕಿಹೋಳಿ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts