More

    ಕೃಷಿಮೇಳ: ಮೈಸೂರಿನ ರೈತರ ಜಾತ್ರೆಯಲ್ಲಿ ಮೊಳಗಿದ ಮಾರ್ದನಿ, ಪಾರಂಪರಿಕ ಕೃಷಿಗೆ ಮರಳಿ

    ಮೈಸೂರು: ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ನೇತೃತ್ವದಲ್ಲಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಬೃಹತ್ ಕೃಷಿ ಮೇಳದಲ್ಲಿ ಭಾರತೀಯ ಕೃಷಿಯ ಶಕ್ತಿ, ಸೌಂದರ್ಯ, ಸವಾಲು, ಸಮಸ್ಯೆ ಮತ್ತು ಪರಿಹಾರೋಪಾಯಗಳ ಕುರಿತು ವ್ಯಾಪಕ ಚರ್ಚೆ ಮತ್ತು ಸಂವಾದಗಳಿಗೆ ಶನಿವಾರ ವೇದಿಕೆ ಒದಗಿಸಿತು.

    ಬೆಳಗ್ಗೆ ರಂಗು ರಂಗಿನ ರಂಗೋಲಿ ಸ್ಪರ್ಧೆಯೊಂದಿಗೆ 2ನೇ ದಿನದ ಕೃಷಿ ಜಾತ್ರೆ ಚಟುವಟಿಕೆಗಳು ಪ್ರಾರಂಭವಾದವು. ವಿಚಾರ ಗೋಷ್ಠಿ, ತಜ್ಞರಿಂದ ವಿಷಯ ಮಂಡನೆ, ಯಶಸ್ವಿ ರೈತರ ಅನುಭವ ಹಂಚಿಕೆಯಾದವು. ಪಾಲ್ಗೊಂಡ ರೈತರು ಉತ್ಸಾಹಭರಿತರಾಗಿ ಆಗಾಗ್ಗೆ ಪ್ರಶ್ನಿಸಿ ಪ್ರೋತ್ಸಾಹಿಸುತ್ತಿದ್ದರು. ಇಂತಿಂತಹ ವಿಷಯಗಳ ಬಗ್ಗೆ ಮಾತನಾಡಿ ಎಂದು ಕೇಳಿಕೊಂಡು ಸಲಹೆ ಹಾಗೂ ಸಂಪರ್ಕದ ಮಾಹಿತಿ ಪಡೆದು ಭೇಟಿ ನೀಡುವ ಅಪೇಕ್ಷೆಯನ್ನೂ ತೋಡಿಕೊಳ್ಳುವ ಮೂಲಕ ತವಕ, ತಲ್ಲಣಗಳನ್ನು ನಿವಾರಿಸಿಕೊಂಡರು.

    ವಿಚಾರ ಗೋಷ್ಠಿಗಳನ್ನು ಉದ್ಘಾಟಿಸಿದ ಶಾಸಕ ಜಿ.ಟಿ.ದೇವೇಗೌಡ, ಒಕ್ಕಲುತನದ ಸ್ವಾನುಭವ ಉಣಬಡಿಸುತ್ತಾ ಅಡ್ಡದಾರಿ ಹಿಡಿಯುತ್ತಿರುವ ಭಾರತೀಯ ಯುವ ಸಮುದಾಯ ಕೃಷಿಯಿಂದ ವಿಮುಖವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕೃಷಿ ಸುಸ್ಥಿರವಾಗಬೇಕಾದರೆ ಕೃಷಿ ಮಾರುಕಟ್ಟೆ ಮತ್ತು ಕೃಷಿಯ ಸಹಕಾರೀಕರಣ ಬಲವರ್ಧನೆಯಾಗಬೇಕು. ಅದಕ್ಕೆ ಎಪಿಎಂಸಿ ಮಟ್ಟದಲ್ಲಿ ದಾಸ್ತಾನು ಹಾಗೂ ಶೀತಲೀಕರಣ ಕೇಂದ್ರ (ಕೋಲ್ಡ್ ಸ್ಟೋರೇಜ್) ತಲೆಯೆತ್ತಬೇಕು.

    ಬಹು ರಾಷ್ಟ್ರೀಯ ಕಂಪನಿಗಳ ಮೇಲಿನ ಅವಲಂಬನೆ ಕಡಿಮೆಯಾಗಬೇಕು. ಪರಂಪರಾಗತ ಬೀಜ, ಗೊಬ್ಬರಗಳ ಉತ್ಪಾದನೆಗೆ ಹಿಂತಿರುಗಬೇಕು. ಶಿಕ್ಷಣವು ಕೃಷಿಯಾಧಾರಿತವಾಗಿ ಮರು ರಚಿಸಿದಾಗ ಮಾತ್ರವೇ ಕೃಷಿ ಸುಸ್ಥಿರವಾಗಿ ಉದ್ಯೋಗ ಸೃಜಿಸುತ್ತದೆ ಹಾಗೂ ಜನ ಕೃಷಿಯತ್ತ ಮತ್ತೆ ಆಕರ್ಷಿತರಾಗಲಿದ್ದಾರೆ ಎಂದ ಜಿಟಿಡಿ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರ ಸಾಮಾಜಿಕ ಬದ್ಧತೆ, ಕೃಷಿ ಹಾಗೂ ಕೃಷಿಕರ ಬಗೆಗಿನ ಕಾಳಜಿಗೆ ಮೇಳ ಕೈಗನ್ನಡಿಯಾಗಿದೆ ಎಂದು ಪ್ರಶಂಸಿಸಿದರು.

    ರೈತ ನಾಯಕ ಬಡಗಲಪುರ ನಾಗೇಂದ್ರ ಮಾತನಾಡಿ, ಹಸಿರು ಕ್ರಾಂತಿ ನಮ್ಮ ರೈತರ ಸ್ವಾಭಿಮಾನಿ ಬದುಕನ್ನು ಕಸಿದುಕೊಂಡಿತು. ರೈತರು ಹೆಚ್ಚೆಚ್ಚು ಖಿನ್ನತೆಗೊಳಗಾಗಿ ನೇಣಿಗೆ ಕೊರಳೊಡುತ್ತಿರುವುದು ಆತಂಕಕಾರಿಗೆ ಬೆಳವಣಿಗೆ. ಕೃಷಿ ಬಿಕ್ಕಟ್ಟಿನಲ್ಲಿದ್ದಾಗ ಕೃಷಿಯಾಧಾರಿತ ದೇಶ ಸುಭದ್ರವಾಗಿರಲು ಸಾಧ್ಯವೆಲ್ಲಿ? ಎಂದು ಕಳವಳ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್​ಕುಮಾರ್, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನೆಗಳು, ಆವಿಷ್ಕಾರಗಳು ರೈತ ಹೊಲಗಳಿಗೆ ತಲುಪುವಂತಾಗಬೇಕು ಎಂದರು.

    ಸೊಪ್ಪು-ತರಕಾರಿಯಿಂದಲೇ ಲಕ್ಷ ಸಂಪಾದನೆ

    ‘ಆಧುನಿಕ ಕೃಷಿ’ ವಿಚಾರಗೋಷ್ಠಿಯಲ್ಲಿ ಪ್ರಗತಿಪರ ರೈತ ಸಾತೇನಹಳ್ಳಿ ಕುಮಾರಸ್ವಾಮಿ, ಕೇವಲ ಒಂದು ಎಕರೆಯಲ್ಲಿ ಮಾಸಿಕ ಒಂದು ಲಕ್ಷ ರೂ. ಆದಾಯ ಬರುವ ಹಾಗೆ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದನ್ನು ರೈತರಿಗೆ ಮನಮುಟ್ಟುವಂತೆ ವಿವರಿಸಿದರು. ವಾಸ್ತವದಲ್ಲಿ ನಮ್ಮ ಭೂಮಿ ಫಲವತ್ತಾಗಿಯೇ ಇದೆ. ರಾಸಾಯನಿಕ ಗೊಬ್ಬರವಿಲ್ಲದೆ ಕಾಡು ಸಮೃದ್ಧವಾಗಿ ಬೆಳೆಯುತ್ತದೆ, ರಸ್ತೆ ಇಕ್ಕೆಲಗಳಲ್ಲಿ ಮರಗಳು ದಷ್ಟ-ಪುಷ್ಟವಾಗಿ ಬೆಳೆಯುವುದಿಲ್ಲವೆ? ಈ ಮಾದರಿಯನ್ನು ನಾವೂ ಕೃಷಿಯಲ್ಲಿ ಅನುಸರಿಸಬೇಕು.

    ನಮಗೆ ಫುಡ್ ಮತ್ತು ದುಡ್ಡು ಇದ್ದರೆ ಸ್ವಾಭಿಮಾನ ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂದರು. ಸೊಪ್ಪು- ತರಕಾರಿಯಿಂದಲೇ ಲಕ್ಷ ಲಕ್ಷ ಸಂಪಾದನೆಯ ದಾರಿ ತಿಳಿಸಿಕೊಟ್ಟ ಸಾವಯವ ಕೃಷಿ ಸಾತೇನಹಳ್ಳಿ ಕುಮಾರಸ್ವಾಮಿ ಅನುಭವದ ಮಾತುಗಳಿಗೆ ಮಾರುಹೋದ ರೈತರು ಸಂಪರ್ಕ, ಮಾಹಿತಿಗೆ ಮೊಬೈಲ್ ನಂಬರ್ ಕೇಳಿ ಪಡೆದರು. ಅವರ ಜಮೀನಿಗೆ ಭೇಟಿಕೊಟ್ಟು ಇನ್ನಷ್ಟು ಮಾಹಿತಿ ಪಡೆಯುವ ಉತ್ಸುಕತೆ ತೋಡಿಕೊಂಡವರಲ್ಲಿ ರೈತರ ಜತೆಗೆ ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ.ಕುಶಾಲಪ್ಪ ಒಬ್ಬರಾಗಿದ್ದರು. ಪ್ರಗತಿಪರ ರೈತ ಪುಟ್ಟಯ್ಯ ಪ್ರತಿಕ್ರಿಯಿಸಿ, ಯಶಸ್ವಿ ರೈತರ ಮಾರ್ಗ ಅನುಸರಿಸಿದರೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಹುರಿದುಂಬಿಸಿದರು.

    ಕೆರೆ-ಕಟ್ಟೆಗಳನ್ನು ಸಂರಕ್ಷಿಸಿ…

    ಮತ್ತೊಂದು ಗೋಷ್ಠಿಯಲ್ಲಿ ಮಂಡ್ಯ ವಿ.ಸಿ. ಫಾಮ್ರ್ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಎನ್. ವಾಸುದೇವನ್, ಹೊಸದಾಗಿ ಅಭಿವೃದ್ಧಿಗೊಂಡಿರುವ ಭತ್ತ, ಕಬ್ಬು, ರಾಗಿ ಮತ್ತು ಮೆಕ್ಕೆಜೋಳ ತಳಿಗಳನ್ನು ಪರಿಚಯಿಸಿ ಸಾಧಕ-ಬಾಧಕಗಳನ್ನು ವಿವರಿಸಿದರು. ಪರಿಸರ ತಜ್ಞ ಶಿವಾನಂದ ಕಳವೆ, ಕೆರೆ-ಕಟ್ಟೆ, ಕಲ್ಯಾಣಿಗಳ ಗುರುತಿಸುವಿಕೆ ಹಾಗೂ ಸಂರಕ್ಷಣೆ ಅಗತ್ಯತೆ ಪ್ರತಿಪಾದಿಸಿದರು.

    ಯಶೋಮಾರ್ಗ ಫೌಂಡೇಷನ್ ಮೂಲಕ ಬರಪೀಡಿತ ಯಲಬುರ್ಗಾ ತಾಲೂಕು ತಲ್ಲೂರು ಕೆರೆ ಹೂಳೆತ್ತಿದ್ದರಿಂದ ಇತ್ತೀಚಿನ ಮಳೆಗೆ ಭರ್ತಿಯಾಗಿ 18 ಕೋಟಿ ರೂ. ಮೊತ್ತದ ದಾಳಿಂಬೆ ಬೆಳೆಯಲು ಸಾಧ್ಯವಾಯಿತು ಎಂದುಹೇಳಿ ಕೆರೆ-ಕಟ್ಟೆಗಳ ಸಂರಕ್ಷಣೆ ಮಹತ್ವ ಸಾರಿದರು. ಕಾವೇರಿ ನೀರಾವರಿ ನಿಗಮ, ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ಹಾಗೂ ಮಾಹಿತಿ ನೀಡಿದರು.

    ವೇಷಭೂಷಣ ಸ್ಪರ್ಧೆ, ದೇಸಿ ಕ್ರೀಡೆಗಳ ಸ್ಪರ್ಧೆಯಲ್ಲಿ ತುರುಸಿನ ಪೈಪೋಟಿ, ಉತ್ಸಾಹಭರಿತ ಸ್ಪಂದನೆಯು ಜನರನ್ನು ರಂಜಿಸಿದವು. ರೈತರು ತಂಡೋಪ ತಂಡವಾಗಿ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಕೃಷಿ ತಂತ್ರಜ್ಞಾನಗಳ ಮಾಹಿತಿ ಪಡೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts