More

    ಅನುದಾನ ವಿತರಣೆಯಲ್ಲಿ ತಾರತಮ್ಯ

    ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ, ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ

    ಕೆ.ಆರ್.ನಗರ: ತಾಲೂಕು ಪಂಚಾಯಿತಿ ಅನುದಾನ ಹಂಚಿಕೆ ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಕ್ಷೇತ್ರಗಳಿಗೆ ಕಡಿಮೆ ಅನುದಾನ ನೀಡುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ ಎಂದು ಸದಸ್ಯರಾದ ಎಸ್.ಡಿ.ಚಂದ್ರಶೇಖರ್ ಮತ್ತು ಜಯರಾಮೇಗೌಡ ಗಂಭೀರ ಆರೋಪ ಮಾಡಿದರು.
    ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ನಾವು ಆಡಳಿತ ಪಕ್ಷದ ಸದಸ್ಯರಾಗಿದ್ದರೂ 4 ವರ್ಷಗಳಿಂದಲೂ ನಮ್ಮ ಕ್ಷೇತ್ರಗಳಿಗೆ ಕಡಿಮೆ ಅನುದಾನ ನೀಡಲಾಗುತ್ತಿದೆ. ಬಹುಸಂಖ್ಯಾತ ಸಮುದಾಯದ ಸದಸ್ಯರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡುವ ಮೂಲಕ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದರು.
    ನಾವು ನಿಮ್ಮಂತೆ ಮತದಾರರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳಲ್ಲವೇ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಾಲದೆ ಜನರ ಪ್ರಶ್ನೆಗೆ ನಾವು ಉತ್ತರಿಸಲಾಗುತ್ತಿಲ್ಲ. ನಾಲ್ಕು ವರ್ಷಗಳಿಂದ ಮುಂದಿನ ಬಾರಿ ಅನುದಾನ ಕೊಡುತ್ತೇವೆ ಎಂದು ಸಬೂಬು ಹೇಳಿಕೊಂಡು ಬರುತ್ತಿದ್ದೀರಿ ಎಂದು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಕೆಲಕಾಲ ಸದಸ್ಯರು ಮತ್ತು ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆಯಿತು.
    ಇದಕ್ಕುತ್ತರಿಸಿದ ಅಧ್ಯಕ್ಷ ಎಂ.ನಾಗರಾಜ್ ನೀವು ಹಿಂದೆ ಆಗಿದ್ದ ಅಧ್ಯಕ್ಷರನ್ನು ಕೇಳಿಕೊಳ್ಳಿ. ಆದರೆ ನಿಮ್ಮ ಕ್ಷೇತ್ರಕ್ಕಾಗಿರುವ ತಾರತಮ್ಯವನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
    ಗೇರದಡ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿರುವ ಎಸ್.ಕೆ.ರಮೇಶ್ ಜಾತಿ ದೃಢೀಕರಣ ಪತ್ರ ಮತ್ತು ಅಂಗವಿಕಲ ಪ್ರಮಾಣ ಪತ್ರಗಳನ್ನು ಸುಳ್ಳು ದಾಖಲೆ ಸೃಷ್ಟಿಸಿ ಕೆಲಸ ಪಡೆದು ಸರ್ಕಾರಕ್ಕೆ ವಂಚಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ನಡಾವಳಿ ದಾಖಲಿಸಿ ಜಿಲ್ಲಾಧಿಕಾರಿಗಳು ಮತ್ತು ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಿಗೆ ದೂರು ನೀಡಬೇಕು ನಂತರ ತನಿಖೆ ಮಾಡಿಸಿ ಶೀಘ್ರದಲ್ಲೇ ಕ್ರಮಕೈಗೊಳ್ಳಬೇಕು ಎಂದು ಸದಸ್ಯರಾದ ಎಚ್.ಟಿ.ಮಂಜುನಾಥ್ ಮತ್ತು ಕೆ.ಎಲ್.ಲೋಕೇಶ್ ಒತ್ತಾಯಿಸಿದರು.
    ಇದಕ್ಕುತ್ತರಿಸಿದ ಇಒ ಎಂ.ಎಸ್.ರಮೇಶ್ ಇನ್ನೊಂದು ವಾರದಲ್ಲಿ ಇದರ ಸಂಪೂರ್ಣ ಮಾಹಿತಿಯನ್ನು ನನಗೆ ನೀಡಬೇಕು ಎಂದು ಬಿಆರ್‌ಸಿ ರುದ್ರಪ್ಪ ಅವರಿಗೆ ಸೂಚನೆ ನೀಡಿದರು.
    ಮಿರ್ಲೆ ಗ್ರಾಮದ ಪ್ರೌಢಶಾಲೆಗೆ 2 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಶೌಚಗೃಹ ಕಳಪೆಯಾಗಿದೆ. ನಾನು ದೂರು ನೀಡಿದರೂ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡದೆ ಬಿಲ್ ಮಾಡಿದ್ದಾರೆ. ಗುತ್ತಿಗೆದಾರರು ತಮಗಿಷ್ಟ ಬಂದಂತೆ ಕೆಲಸ ಮಾಡಿ ಸರ್ಕಾರದ ಅನುದಾನವನ್ನು ಜೇಬಿಗಿಳಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
    ತಾಲೂಕು ಪಂಚಾಯಿತಿಯ ಎಲ್ಲ ಸಭೆಗಳಿಗೂ ಬಿಇಒ ಎಂ.ರಾಜು ಗೈರಾಗುತ್ತಿದ್ದಾರೆ. ಇದರಿಂದ ಇಲಾಖೆಯ ಬಗ್ಗೆ ದೂರುಗಳು ಮತ್ತು ಮಾಹಿತಿ ಕೇಳಲು ಸಾಧ್ಯವಾಗುತ್ತಿಲ್ಲ. ಅವರಿಗೆ ಇಲ್ಲಿ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬೇರೆ ಕಡೆ ಕಳುಹಿಸಿ ಎಂದು ಸದಸ್ಯ ಕೆ.ಎಲ್.ಲೋಕೇಶ್ ಹೇಳಿದರು. ಇದಕ್ಕೆ ಸದಸ್ಯರಾದ ಕೆ.ಪಿ.ಯೋಗೇಶ್, ಕುಮಾರ್, ಎ.ಬಿ.ಮಲ್ಲಿಕಾ ದನಿಗೂಡಿಸಿದರು.
    ಇಒ ಎಂ.ಎಸ್.ರಮೇಶ್ ಮಾತನಾಡಿ, ಶಾಲೆಗಳಿಗೆ ಕಟ್ಟಡ, ಶೌಚಗೃಹ, ಆಟದ ಮೈದಾನ, ಕುಡಿಯುವ ನೀರು ಇನ್ನಿತರ ಅಗತ್ಯ ಸೌಲಭ್ಯಗಳ ಅಗತ್ಯವಿರುವ ಪಟ್ಟಿಯನ್ನು ತಯಾರಿಸಿಕೊಂಡು ಸಭೆಗೆ ಬನ್ನಿ. ಮುಂದಿನ ಸಭೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸ್ವತಃ ಸಭೆಗೆ ಹಾಜರಾಗಬೇಕು ಎಂದು ಎಚ್ಚರಿಕೆ ನೀಡಿದರು.
    ಅಧ್ಯಕ್ಷ ಎಂ.ನಾಗರಾಜು ಮಾತನಾಡಿ, ಸಭೆಗೆ ಬರುವಾಗ ಎಲ್ಲ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟ ಮಾಹಿತಿಯೊಂದಿಗೆ ಬರಬೇಕು. ಸಭೆಯಲ್ಲಿ ಕೇಳಿದಾಗ ಸಬೂಬು ಹೇಳಬಾರದು ಎಂದು ಸೂಚನೆ ನೀಡಿದರು.
    ಉಪಾಧ್ಯಕ್ಷೆ ಸಿದ್ದಮ್ಮ, ಸದಸ್ಯರಾದ ಶ್ರೀೀನಿವಾಸ್‌ಪ್ರಸಾದ್, ನೀಲಮ್ಮ, ಸುನಿತಾ, ಸಾಕಮ್ಮ, ಮಹದೇವ್, ಮಮತಾಮಹೇಶ್, ಬಿಸಿಎಂ ಅಧಿಕಾರಿ ಜಿ.ಜೆ.ಮಹೇಶ್, ತೋಟಗಾರಿಕೆ ಸಹಾಯಕ ನಿರ್ದೇಶಕ ಪ್ರಸನ್ನ ಸೇರಿ ಇನ್ನಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts