More

    ಕೋವಿಡ್ ವಾರ್ಡ್‌ಗೆ ಸಾಮಾನ್ಯ ರೋಗಿ ಶಿಫ್ಟ್!

    ಬೆಳಗಾವಿ: ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್‌ಗೆ ಅಥಣಿಯಿಂದ ಬಂದಿದ್ದ ಸಾಮಾನ್ಯ ರೋಗಿಯನ್ನು ದಾಖಲಿಸಿ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿದ ಘಟನೆ ಶುಕ್ರವಾರ ನಡೆದಿದೆ. ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿ, ವಾಗ್ವಾದ ನಡೆಸಿದರು.

    ಜಿಲ್ಲಾಸ್ಪತ್ರೆಯ ಒಂದೇ ಕಟ್ಟಡದಲ್ಲಿ ಕೋವಿಡ್ ವಾರ್ಡ್ ಮತ್ತು ಸಾಮಾನ್ಯ ರೋಗಿಗಳ ತಪಾಸಣೆ ಕೇಂದ್ರವೂ ಇದೆ. ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆ ಎದುರಾಗಿದೆ. ಹೀಗಾಗಿ ಕರೊನಾ ಸೋಂಕಿತರ ಬೆಡ್‌ಗಳನ್ನು ಸಾಮಾನ್ಯ ರೋಗಿಗಳಿಗೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ರೋಗಿಗಳ ಸಂಬಂಧಿಕರು ಬೇರೆ ಬೆಡ್‌ಗಳ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ.

    ಚಿಕಿತ್ಸೆ ಸಿಗದೆ ಮೃತಪಟ್ಟ ವೃದ್ಧ: ಕರೊನಾ ಸೋಂಕಿತ ವೃದ್ಧನೋರ್ವ ಚಿಕಿತ್ಸೆ ಸಿಗದೆ ಬೆತ್ತಲಾಗಿ ನೆಲದ ಮೇಲೆಯೇ ನರಳಾಡಿ ಮೃತಪಟ್ಟ ಘಟನೆ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ. ಮೃತ ವೃದ್ಧ ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದವರಾಗಿದ್ದು, ಚಿಕಿತ್ಸೆಗಾಗಿ ಗುರುವಾರ ರಾತ್ರಿ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ಆದರೆ, ವೈದ್ಯರು ವೃದ್ಧನಿಗೆ ಸೂಕ್ತ ಚಿಕಿತ್ಸೆ ನೀಡಿಲ್ಲ.

    68 ವರ್ಷದ ಈ ವ್ಯಕ್ತಿ ಎರಡು ದಿನದ ಹಿಂದೆಯೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಬೆಡ್‌ಗಳ ಕೊರತೆ ಕಾರಣಕ್ಕೆ ಅಲ್ಲಿನ ಸಿಬ್ಬಂದಿ ನೆಲದ ಮೇಲೆಯೇ ಬೆಡ್‌ಶೀಟ್ ಹಾಕಿ ವೃದ್ಧನನ್ನು ಮಲಗಿಸಿ ಹೋಗಿದ್ದಾರೆ. 5 ತಾಸುಗಳ ಕಾಲ ಚಿಕಿತ್ಸೆ ನೀಡಿಲ್ಲ. ಬಳಿಕ ವೃದ್ಧನ ಗಂಟಲು ದ್ರವದ ಮಾದರಿ ಪಡೆದು ಟೆಸ್ಟ್ ಮಾಡಿದಾಗ ಕರೊನಾ ಸೋಂಕು ದೃಢಪಟ್ಟಿದೆ. ಘಟನೆ ಬಳಿಕ ತುರ್ತು ಚಿಕಿತ್ಸಾ ವಿಭಾಗದ ಬಳಿ ಇರುವ ಕೋವಿಡ್ ವಾರ್ಡ್‌ಗೆ ವೃದ್ಧನನ್ನು ಸ್ಥಳಾಂತರ ಮಾಡಲಾಗಿದೆ. ವೃದ್ಧ ಉಸಿರಾಟ ಸಮಸ್ಯೆಯಿಂದ ಒದ್ದಾಡುತ್ತಿದ್ದರೂ ತಲೆ ಕೆಡಿಸಿಕೊಳ್ಳದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ವೃದ್ಧ ಸಾವನ್ನಪ್ಪಿದ್ದಾನೆ.

    ಅವ್ಯವಸ್ಥೆಯ ಆಗರ: ಇಲ್ಲಿನ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ನಾಯಿ ಮಲ ವಿಸರ್ಜನೆ ಮಾಡಿದರೂ ಗುರುವಾರ ರಾತ್ರಿಯಿಂದ ಜಿಲ್ಲಾಸ್ಪತ್ರೆ ಸಿಬ್ಬಂದಿ ಸ್ವಚ್ಛ ಮಾಡಿಲ್ಲ. ಇತ್ತ ಯಾರೊಬ್ಬರೂ ಬಂದಿಲ್ಲ ಎಂದು ಸೋಂಕಿತರು ಅಳಲು ತೋಡಿಕೊಂಡಿದ್ದಾರೆ. ಸಿಬ್ಬಂದಿಯ ಕಾರ್ಯ ವೈಖರಿಗೆ ಅಸಮಾ ಧಾನಗೊಂಡಿರುವ ಸೋಂಕಿತರು, ಆಸ್ಪತ್ರೆಯ ಅವ್ಯವಸ್ಥೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. 30ಕ್ಕೂ ಹೆಚ್ಚು ಸೋಂಕಿತರಿಗೆ ಇಲ್ಲಿರುವುದು ಒಂದೇ ಶೌಚಗೃಹ. ಶೌಚಗೃಹದಲ್ಲಿ ಸರಿಯಾಗಿ ನೀರು ಕೂಡ ಬರುವುದಿಲ್ಲ. ಸ್ವಚ್ಛತೆಯೂ ಇಲ್ಲ. ವಾರ್ಡ್‌ನ ಕಿಟಕಿಗಳು ಒಡೆದಿವೆ. ಮಳೆ ನೀರು ಕೊಠಡಿಗಳ ಒಳಗೆ ಬರುತ್ತಿದೆ. ಕಿಟಕಿಗಳಿಗೆ ಪ್ಲಾಸ್ಟಿಕ್ ಟಾರ್ಪಲ್ ಕಟ್ಟಿ ಮಳೆ ನೀರು ಒಳಗೆ ಬಾರದಂತೆ ಸೋಂಕಿತರೇ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ ಅವ್ಯವಸ್ಥೆಗೆ ರೋಗಿಗಳು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts